ಮಂಜೇಶ್ವರ: ಹಠಾತ್ ಬೆಳವಣಿಗೆಯೊಂದರಲ್ಲಿ ಶಿಕ್ಷಣ ಇಲಾಖೆಯ ಸರ್ವಶಿಕ್ಷಾ ಅಭಿಯಾನದ(ಪ್ರಸ್ತುತ ಸಮಗ್ರ ಶಿಕ್ಷಾ ಅಭಿಯಾನ್) ಮಂಜೇಶ್ವರ ಬ್ಲಾಕ್ ಕಾರ್ಯಕ್ರಮ ಅಧಿಕಾರಿಯಾಗಿ ಮಲೆಯಾಳಿ ವ್ಯಕ್ತಿಯೋರ್ವರನ್ನು ಗುರುವಾರ ತಾತ್ಕಾಲಿಕ ನೆಲೆಯಲ್ಲಿ ನೇಮಿಸಿದ್ದು, ಆಕ್ರೋಶ ವ್ಯಕ್ತಗೊಂಡಿದೆ. ಜೊತೆಗೆ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಈ ನೇಮಕಾತಿ ನಡೆದಿರುವುದರ ಬಗ್ಗೆ ಹಲವು ಊಹಾಪೋಪಗಳಿಗೆ ಕಾರಣವಾಗಿದೆ.
ಈವರೆಗೆ ಪೂರ್ಣಾವಧಿ ನೇಮಕಾತಿ ಇರಲಿಲ್ಲ!:
ಸರ್ವಶಿಕ್ಷಾ ಅಭಿಯಾನ್ ಜಾರಿಗೊಂಡಂದಿನಿಂದ ಈವರೆಗೆ ಮಂಜೇಶ್ವರ ಬ್ಲಾಕ್ ವ್ಯಾಪ್ತಿಗೆ ಪೂರ್ಣಾವಧಿ ಅಧಿಕಾರಿಯನ್ನು ನೇಮಿಸಿರಲಿಲ್ಲ. ತಾತ್ಕಾಲಿಕ ನೆಲೆಯಲ್ಲಿ ನೇಮಕಾತಿ ನಡೆಯುತ್ತಿದ್ದು, ಶಾಲಾ ಶಿಕ್ಷಕರಲ್ಲಿ ಒಬ್ಬರನ್ನು ಒಂದು ವರ್ಷದ ಅವಧಿಗೆ ನೇಮಿಸಲಾಗುತ್ತಿತ್ತು. ಬಳಿಕ ನವೀಕರಣಗೊಳಿಸಲಾಗುತ್ತಿತ್ತು. ಪ್ರಸ್ತುತ ವಿಜಯಕುಮಾರ್ ಪಾವಳ ಅವರು ಬಿಆರ್‍ಸಿ(ಬ್ಲಾಕ್ ಸಂಪನ್ಮೂಲ ಕೇಂದ್ರ) ಕಾರ್ಯಕ್ರಮಾಧಿಕಾರಿಯಾಗಿ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಸಾಲಿನ ಕಾಲಾವಧಿ ಗುರುವಾರ(ಸೆ.26)ಕ್ಕೆ ಕೊನೆಗೊಂಡಿತ್ತು. ಆದರೆ ಅವರು ಬಳಿಕ ನವೀಕರಣಕ್ಕೆ ಆಸಕ್ತಿ ವಹಿಸಿರಲಿಲ್ಲ ಎಮದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರವೇ ಕಾಸರಗೋಡು ಬ್ಲಾಕ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತರಬೇತುದಾರರಾದ ಓರ್ವ ಮಲೆಯಾಳಿ ವ್ಯಕ್ತಿಯನ್ನು ಮಂಜೇಶ್ವರದ ತಾತ್ಕಾಲಿಕ ಅಧಿಕಾರಿಯಾಗಿ ನೇಮಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಂಜೇಶ್ವರ ಬಿಆರ್‍ಸಿಯಲ್ಲಿ ತರಬೇತುದಾರರಾಗಿ ಇಬ್ಬರು ಕನ್ನಡಿಗರಿದ್ದೂ ಅವರನ್ನು ಪರಿಗಣಿಸದಿರುವುದು ಕನ್ನಡ ಅವಗಣನೆ ಎಂಬ ಮಾತುಗಳು ಕೇಳಿಬಂದಿದೆ.
ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗದೇ!??
ಮಂಜೇಶ್ವರ ವಿಧಾನ ಸಭಾ ಕ್ಷೇತ್ರಕ್ಕೆ ಅ.21 ರಂದು ಉಪ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮಂಜೇಶ್ವರ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಈ ನೇಮಕಾತಿ ನಡೆಸಿರುವುದೂ ಸಂಶಯಗಳಿಗೆ ಎಡೆಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಸರ್ವಶಿಕ್ಷಾ ಅಭಿಯಾನ ಯೋಜನೆ ಚುನಾವಣಾ ನೀತಿ ಸಂಹಿತೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬ ಮಾತುಗಳು ಕೇಳಿಬಂದಿದೆ.
ಕನ್ನಡ ಅವಗಣನೆ:- ಅರ್ಹರಿಲ್ಲ:
ಮಂಜೇಶ್ವರ ಬ್ಲಾಕ್ ವ್ಯಾಪ್ತಿಯ 82 ಶಾಲೆಗಳ ಪೈಕಿ 65 ಕನ್ನಡ ಶಾಲೆಗಳಾಗಿವೆ. ಜೊತೆಗೆ ಬಹುಸಂಖ್ಯಾತ ಕನ್ನಡಿಗರೇ ಇರುವ ಪ್ರದೇಶವಾಗಿದ್ದು, ಕನ್ನಡಿಗ ಅಭ್ಯರ್ಥಿಗಳನ್ನೇ ನೇಮಿಸಬೇಕಾಗಿದೆ. ಕಳೆದ ಮೇ ತಿಂಗಳಲ್ಲಿ ಬಿಆರ್‍ಸಿಗೆ ಪೂರ್ಣಾವಧಿ ಕಾರ್ಯಕ್ರಮ ಅಧಿಕಾರಿಯಾಗಲು ಪ್ರವೇಶಾತಿ ಅರ್ಜಿ ಕರೆದಿದ್ದರು. ಆದರೆ ಈ ಪೈಕಿ ಕನ್ನಡಿಗ ಅಭ್ಯರ್ಥಿ ಯಾರೂ ಅರ್ಜಿ ಸಲಲಿಸದಿರುವುದೂ ಗಮನಾರ್ಹವಾಗಿ ಇದೀಗ ಸಮಸ್ಯೆಗೆ ಕಾರಣವಾಗಿದೆ. ಕನಿಷ್ಠ ಪದವಿ ಶಿಕ್ಷಣ ಪೂರೈಸಿದವರು ಅರ್ಜಿ ಸಲ್ಲಿಸುವ ಅರ್ಹತೆಯಾಗಿರುವುದೂ ಗಮನಾರ್ಹವಾಗಿದೆ. ಈ ಕಾರಣದಿಂದ ಕನ್ನಡ ಅಧಿಕಾರಿಗಳ ಕೊರತೆಯಿಂದ ಮಲೆಯಾಳಿಗಳನ್ನು ನೇಮಿಸಲಾಗುತ್ತಿದೆ ಎಂಬ ಉತ್ತರ ಮೇಲಧಿಕಾರಿಗಳದ್ದು.
ಅಭಿಮತ:
ಸಮಗ್ರ ಶಿಕ್ಷಾ ಅಭಿಯಾನದ ಮಂಜೇಶ್ವರ ಬ್ಲಾಕ್ ಕಾರ್ಯಕ್ರಮ ಅಧಿಕಾರಿಯಾಗಿ ತಾತ್ಕಾಲಿಕ ನೆಲೆಯಲ್ಲಿ ಇದೀಗ ಹೊಸಬರನ್ನು ನೇಮಕಗೊಳಿಸಲಾಗಿದೆ. ಆದರೆ ಕಳೆದ ಮೇ ತಿಂಗಳಲ್ಲಿ ಪೂರ್ಣಾವಧಿ ಅಧಿಕಾರಿಗೆ ಅರ್ಜಿ ಕರೆದಾಗ ಕನ್ನಡಿಗರಾದ ಒಬ್ಬನೇ ಒಬ್ಬ ಅರ್ಜಿ ಸಲ್ಲಿಸಿಲ್ಲ. ಈ ಕಾರಣದಿಂದ ಮಲೆಯಾಳಿಗರನ್ನು ನೇಮಿಸುವ ಅನಿವಾರ್ಯತೆ ಎದುರಾಯಿತು. ಆದರೆ ಕನ್ನಡಿಗರಿಗೆ ಇನ್ನೊಂದು ಅವಕಾಶಕ್ಕಾಗಿ ಇದೀಗ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಈ ನೇಮಕಾತಿಯ ಸಾಧಕ ಬಾಧಕಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಗಂಗಾಧರ್.
ಸಮಗ್ರ ಶಿಕ್ಷಾ ಯೋಜನೆಯ ಜಿಲ್ಲಾ ಅಧಿಕಾರಿ.ಕಾಸರಗೋಡು.


