ಕುಂಬಳೆ: ಮಹಿಳೆಯರ ಸಾಮಾಜಿಕ ಸಮಸ್ಯೆಗಳಿಗೆ ಕೈಗನ್ನಡಿ ಹಿಡಿದು, ಅದಕ್ಕೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗುರುವಾರ ನಡೆದ ಜಾಗೃತಿ ಕಾರ್ಯಕ್ರಮ ಗಮನಸೆಳೆಯಿತು.
ಕುಂಬಳೆ ಬಳಿಯ ಕಿದೂರು ಕುಂಟಂಗೇರಡ್ಕದಲ್ಲಿ ನಡೆದ ಜನಜಾಗೃತಿ ಕಾರ್ಯಕ್ರಮ ಈ ನಿಟ್ಟಿನಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಬೆಳಕು ಚೆಲ್ಲಿದೆ. ರಾಜ್ಯ ಮಹಿಳಾ ಆಯೋಗ ರಾಜ್ಯಾದ್ಯಂತ ನಡೆಸುತ್ತಿರುವ ಜನಜಾಗೃತಿ ಕಾರ್ಯಕ್ರಮ ಅಂಗವಾಗಿ ಕುಂಬಳೆ ಗ್ರಾಮಪಂಚಾಯತ್ ನ ಸಹಕಾರದೊಂದಿಗೆ ಕುಂಟಂಗೇರಡ್ಕದ ಸಮಾರಂಭ ನಡೆಯಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಮಾರಂಭ ಉದ್ಘಾಟಿಸಿದರು. 40 ವರ್ಷ ಪ್ರಾಯ ದಾಟಿದ, ಮಕ್ಕಳಿಲ್ಲದೇ ಇರುವ ವಿಧವೆಯರಿಗೆ ಆರ್ಥಿಕ ಸಹಾಯ ಅಥವಾ ಪಿಂಚಣಿ ನೀಡಬೇಕು ಎಂಬ ಬೇಡಿಕೆಯೊಂದಿಗೆ ಕುಂಬಳೆ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ಅವರು ಮನವಿ ಸಲ್ಲಿಸಿದರು. ಇದಕ್ಕೆ ಉತ್ತರವಾಗಿ ಮಾತನಾಡಿದ ಜಿಲ್ಲಾಧಿಕಾರಿ ಅವರು ವಿವಿಧ ಬ್ಯಾಂಕ್ ಗಳು ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಇವನ್ನು ಸದುಪಯೋಗ ಪಡಿಸಿಕೊಳ್ಳಬೇಕು. 40 ವರ್ಷ ದಾಟಿರುವ, ಏಕಾಂಗಿಯಾಗಿ ಬದುಕುತ್ತಿರುವ ಮಹಿಳೆಯರು, ತಮ್ಮ ಹೆಸರಿನಲ್ಲಿರುವ ಜಾಗವನ್ನು ಬ್ಯಾಂಕ್ ಗಳಿಗೆ ವಹಿಸಿದರೆ ಬದುಕಿನಾದ್ಯಂತ ಸೌಲಭ್ಯ ಒದಗಿಸುವ ಹೊಣೆಯನ್ನು ಬ್ಯಾಂಕ್ ಗಳು ವಹಿಸುತ್ತವೆ ಎಂದವರು ವಿವರಿಸಿದರು.
ಆಯೋಗ ಸದಸ್ಯೆ ಡಾ.ಷಾಹಿದಾ ಕಮಾಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು ಆರೋಗ್ಯ ಪೂರ್ಣ ಮನೆ ವಾತಾವರಣ ಸೃಷ್ಟಿಸುವುದಕ್ಕೆ ಪೂರ್ವಭಾವಿಯಾಗಿ ಮಹಿಳೆಯರ ಸುರಕ್ಷತೆ ಅನಿವಾರ್ಯ. ಮನೆಯ ಬೆಳಕಾಗಿರುವ ಹೆಣ್ಣುಮಕ್ಕಳಲ್ಲಿ ಸದಾ ನಸುನಗು ಮಾಸದಂತೆ ನೋಡಿಕೊಂಡಾಗ ಮಾತ್ರ ಇದು ಸಾಧ್ಯ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಸಮಾರಂಭ ಅಂಗವಾಗಿ ನಡೆದ ವಿಚಾರ ಸಂಕಿರಣದಲ್ಲಿ "ಮಹಿಳೆಯರ ರಕ್ಷಣೆ ಮತ್ತು ಮನೆಯ ವಾತಾವರಣ" ಎಂಬ ವಿಷಯದಲ್ಲಿ ಡಾ.ಷಾಹಿದಾ ಕಮಾಲ್, "ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ನೂತನ ಸೌಲಭ್ಯಗಳು" ಎಂಬ ವಿಷಯದಲ್ಲಿ ಜಿಲ್ಲಾ ಪರಿಶಿಷ್ಟ ಜಾತಿ ಕಲ್ಯಾಣ ಅಧಿಕಾರಿ ಪಿ.ಬಿ.ಬಶೀರ್ ತರಗತಿ ನಡೆಸಿದರು.
ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್, ಜಿಲ್ಲಾ ಪರಿಶಿಷ್ಟ ಜಾತಿ ಅಧಿಕಾರಿ ಎಸ್.ಮೀನಾರಾಣಿ, ಪಂಚಾಯತಿ ಸದಸ್ಯೆ ಎಂ.ಅರುಣಾ ಆಳ್ವ, ಪಂಚಾಯತ್ ಮಾಜಿ ಉಪಾಧ್ಯಕ್ಷ ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.


