ಬದಿಯಡ್ಕ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) ಬದಿಯಡ್ಕ ಘಟಕದ ಸಮ್ಮೇಳನವು ಮಂಗಳವಾರ ನೀರ್ಚಾಲು ಕುಮಾರ ಸ್ವಾಮಿ ಸಭಾ ಭವನದಲ್ಲಿ ನಡೆಯಿತು. ಕಾಸರಗೋಡು ವಲಯ ಅಧ್ಯಕ್ಷ ಗೋವಿಂದನ್ ಚೆಂಗರಂಗಾಡು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ 60 ವರ್ಷಕ್ಕಿಂತ ಕೆಳಗಿನ ಎಲ್ಲಾ ಸದಸ್ಯರಿಗೂ ಲಭ್ಯವಿರುವ ಸರ್ಕಾರದ ಕ್ಷೇಮನಿಧಿಯಲ್ಲಿ ಪಾಲ್ಗೊಳ್ಳಬೇಕು. ಮುಂದಿನ ದಿನಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಇದಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯಪ್ರವೃತ್ತರಾದರೆ ಮಾತ್ರ ಸವಾಲುಗಳನ್ನು ಮೆಟ್ಟಿನಿಲ್ಲಲು ಸಾಧ್ಯವಿದೆ ಎಂದರು.
ಬದಿಯಡ್ಕ ಘಟಕದ ಅಧ್ಯಕ್ಷ ಅಪ್ಪಣ್ಣ ಪಾಟಾಳಿ ಸೀತಾಂಗೋಳಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಸರಗೋಡು ವಲಯ ಕಾರ್ಯದರ್ಶಿ ಚಂದ್ರಮೋಹನ್ ಶುಭಾಶಂಸನೆಗೈದು ಮಾತನಾಡಿ ಎಕೆಪಿಎ ಕುಟುಂಬಮೇಳವನ್ನು ಯಶಸ್ವಿಗೊಳಿಸಲು ಕರೆನೀಡಿದರು. ಸಂಘಟನಾತ್ಮಕವಾಗಿ ಬಲಿಷ್ಠರಾಗಲು ವಲಯ ಸಭೆಗಳಲ್ಲಿ ಎಲ್ಲಾ ಸದಸ್ಯರೂ ಪಾಲ್ಗೊಳ್ಳಬೇಕೆಂದು ಕರೆಯಿತ್ತರು.
ಬದಿಯಡ್ಕ ಘಟಕದ ಕಾರ್ಯದರ್ಶಿ ಶ್ಯಾಮಪ್ರಸಾದ ಸರಳಿ ವರದಿಯನ್ನು ಹಾಗೂ ಕೋಶಾಧಿಕಾರಿ ನಾರಾಯಣ ವಿ. ಓಡಂಗಲ್ಲು ಲೆಕ್ಕಪತ್ರ ಮಂಡಿಸಿದರು. ಇದೇ ಸಂದರ್ಭದಲ್ಲಿ ನೂತನ ಸಮಿತಿಯನ್ನು ರೂಪಿಸಲಾಯಿತು. ಉದಯ ಕಂಬಾರು ಅಧ್ಯಕ್ಷ, ವೇಣುಗೋಪಾಲ ಆರೋಳಿ ಕಾರ್ಯದರ್ಶಿ ಹಾಗೂ ಶ್ಯಾಮಪ್ರಸಾದ ಸರಳಿ ಕೋಶಾಧಿಕಾರಿ, ಗಣೇಶ ಬಿ. ಬೊಳುಂಬು ಉಪಾಧ್ಯಕ್ಷ, ವಿಜೇಶ್ ನೀರ್ಚಾಲು ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದರು. ವಲಯ ಸಮಿತಿ ಸದಸ್ಯರಾಗಿ ಅಪ್ಪಣ್ಣ ಪಾಟಾಳಿ, ನಾರಾಯಣ ವಿ. ಓಡಂಗಲ್ಲು ಆಯ್ಕೆಯಾದರು. ಉದಯಕುಮಾರ್ ನೀರ್ಚಾಲು, ಬಾಲಕೃಷ್ಣ, ಗೋಪಾಲ ಆರೋಳಿ, ಬಾಲಸುಬ್ರಹ್ಮಣ್ಯ ಬಿ., ಕೃಷ್ಣ ಭಟ್ ಪೆರ್ಲ, ಸೆಬಾಸ್ಟಿಯನ್ ಸೀತಾಂಗೋಳಿ, ಮುರಲೀಧರ ತಲ್ಪಣಾಜೆ ಮೊದಲಾದವರು ಪಾಲ್ಗೊಂಡಿದ್ದರು. ಕಾಸರಗೋಡು ವಲಯ ಸಮ್ಮೇಳನದ ಪೂರ್ವಭಾವಿಯಾಗಿ ನಡೆಯುತ್ತಿರುವ ವಿವಿಧ ಘಟಕಗಳ ಸಮ್ಮೇಳನಗಳು ಈಗಾಗಲೇ ಪ್ರಾರಂಭವಾಗಿದೆ.

