ಕಾಸರಗೋಡು: ಜಗದ್ಗುರು ಶ್ರೀಆದಿ ಶಂಕರಾಚಾರ್ಯ ತೋಟಕಾಚಾರ್ಯ ಸಂಸ್ಥಾನದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 59ನೇ ಚಾತುರ್ಮಾಸ್ಯ ವ್ರತಾಚರಣೆ ವಿವಿಧ ವಿಧಿವಿಧಾನಗಳೊಂದಿಗೆ ಶನಿವಾರ ಸಂಪನ್ನಗೊಂಡಿತು.
ಶ್ರೀ ಮಠದಲ್ಲಿ ಶನಿವಾರ ಅಪರಾಹ್ನ ನಡೆದ ಸಮಾರಂಭದಲ್ಲಿ ಮಠದ ಪರಿಸರದ ಮಧುವಾಹಿನಿ ನದಿ ತಟದಲ್ಲಿ ಮೃತ್ತಿಕಾ ವಿಸರ್ಜನೆ, ಸೀಮೋಲ್ಲಂಘನದೊಂದಿಗೆ ಜು. 25 ರಿಂದ ಕೈಗೊಂಡಿದ್ದ ಶ್ರೀಗಳ 59ನೇ ಚಾತುರ್ಮಾಸ್ಯ ವ್ರತಾನುಷ್ಠಾನ ಕೊನೆಗೊಂಡಿತು.
ಬೆಳಿಗ್ಗೆ ವಿವಿಧ ವೈದಿಕ ವಿಧಿವಿಧಾನಗಳು ನಡೆದು ಮಹಾಗಣಪತಿ ಹವನ, ಮಧ್ಯಾಹ್ನ ಮಹಾಪೂಜೆ ನೆರವೇರಿತು. ಬಳಿಕ ಚಾತುರ್ಮಾಸ್ಯ ವ್ರತಾನುಷ್ಠಾನದ ಮೃತ್ತಿಕಾ ವಿಸರ್ಜನೆ ಹಾಗೂ ಎಡನೀರು ವಿಷ್ಣುಮಂಗಲ ಶ್ರೀಮಹಾವಿಷ್ಣು ದೇವಾಲಯದಲ್ಲಿ ಸೀಮೋಲ್ಲಂಘನ ವಿಧಿಗಳು ನೆರವೇರಿದವು.
ಮಧ್ಯಾಹ್ನ ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್ ಶ್ರೀಮಠ ಸಂದರ್ಶಿಸಿ ಶ್ರೀಗಳ ಅನುಗ್ರಹ ಪಡೆದರು. ಕೇರಳ, ಕರ್ನಾಟಕ, ಮಹಾರಾಷ್ಟ್ರ ಸಹಿತ ವಿವಿಧ ಪ್ರದೇಶಗಳ ಶ್ರೀಮಠದ ಭಕ್ತರನೇಕರು ಪಾಲ್ಗೊಂಡು ಕೃತಾರ್ಥರಾದರು.
ಶುಕ್ರವಾರ ಸಂಜೆ ಚಾತುರ್ಮಾಸ್ಯದ ಕಾರ್ಯಕ್ರಮಗಳ ಭಾಗವಾಗಿ ಶ್ರೀಗಳಿಂದ ಭಜನ್ ಸಂಧ್ಯಾ ನೆರವೇರಿತು. ವಿದ್ವಾನ್ ಸೂರ್ಯ ಉಪಾಧ್ಯಾಯ ಬೆಂಗಳೂರು(ಹಾರ್ಮೋನಿಯಂ), ವಿದ್ವಾನ್ ಅನೂರು ಅನಂತಕೃಷ್ಣ ಶರ್ಮ ಬೆಂಗಳೂರು(ತಬ್ಲಾ), ವಿದ್ವಾನ್ ಭರತ್ ಆತ್ರೇಯಸ್ ಬೆಂಗಳೂರು(ಕೊಳಲು), ವಿದ್ವಾನ್ ಜಗದೀಶ ಕುರ್ತಕೋಟಿ(ತಬ್ಲಾ) ದಲ್ಲಿ ಸಹಕಾರ ನೀಡಿದರು.



