ಕಾಸರಗೋಡು: 1992-95 ರ ವರೆಗೆ ಕಾಸರಗೋಡು ಬಿ.ಇ.ಎಂ. ಪ್ರೌಢ ಶಾಲೆಯಲ್ಲಿ 8, 9 ಮತ್ತು 10 ನೇ ತರಗತಿಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳನ್ನು ಒಂದುಗೂಡಿಸುವ ಉದ್ದೇಶದೊಂದಿಗೆ ಹಳೆ ವಿದ್ಯಾರ್ಥಿ ಸಂಘ-1995, ಬಿ.ಇ.ಎಂ. ಪ್ರೌಢ ಶಾಲೆ, ಕಾಸರಗೋಡು ವಾಟ್ಸಪ್ ಗ್ರೂಪ್ ರೂಪೀಕರಿಸಲಾಗಿದ್ದು, ಇದರ ಆಶ್ರಯದಲ್ಲಿ ಸೆ.15 ರಂದು ಪ್ರಸ್ತುತ ಶಾಲೆಯಲ್ಲಿ `ಹಳೆ ಬೇರು ಹೊಸ ಚಿಗುರು' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ 9.30 ಕ್ಕೆ ಶಾಲೆಯ ಹಳೆ ವಿದ್ಯಾರ್ಥಿ, ಉದ್ಯಮಿ ಸುರೇಶ್ ಕೆ. ಕಾರ್ಯಕ್ರಮವನ್ನು ಉದ್ಘಾಟಿಸುವರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಂತ ಕುಮಾರ್ ಟಿ.ಎಸ್. ಅಧ್ಯಕ್ಷತೆ ವಹಿಸುವರು. ಶಾಲಾ ಮುಖ್ಯೋಪಾಧ್ಯಾಯ ರಾಜೇಶ್ಚಂದ್ರ ಕೆ.ಪಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರೇಮ್‍ಜಿತ್ ಎ, ನಿವೃತ್ತ ಮುಖ್ಯೋಪಾಧ್ಯಾಯ ಸುಬ್ಬಣ್ಣ ಭಟ್ ಕೆ. ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ 1992-95 ರ ವರೆಗೆ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಗುರುವರ್ಯರಿಗೆ ಹಾಗು ಅಧ್ಯಾಪಕೇತರ ನೌಕರರಿಗೆ ಗೌರವಾರ್ಪಣೆ, ಶಾಲೆಯ 10 ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಯಲಿದೆ. ಶಾಲೆಗೆ ನೆನಪಿನ ಕಾಣಿಕೆ ಕೊಡುಗೆ, ಜೀವನದ ಅನುಭವಗಳನ್ನು ಹಂಚುವುದು ಮೊದಲಾದವು ನಡೆಯುವುದು.


