ಕಾಸರಗೋಡು: ರಂಗ ಚಟುವಟಿಕೆಗಳು ನಾಟಕಕ್ಕೆ ಸೀಮಿತವಾದರೆ ಸಾಲದು. ರಂಗಕರ್ಮಿಗಳೆಲ್ಲ ಒಂದು ಕುಟುಂಬವಾಗಬೇಕು. ರಂಗಕರ್ಮಿಗಳಾದ ನಾವೆಲ್ಲ ನಾಟಕದಾಚೆಗೆ ಒಬ್ಬನ ನೋವಿಗೆ ಮತ್ತೊಬ್ಬ ಸ್ಪಂದಿಸಬೇಕು. ಸ್ಪಂದನೆ ಎಂದರೆ ಆರ್ಥಿಕವಾಗಿಯೇ ಇರಬೇಕಾಗಿಲ್ಲ. ನೋವಿನಲ್ಲಿ ಇರುವವನಿಗೆ ಎರಡು ಪ್ರೀತಿಯ ಮಾತು, ಸಂಕಷ್ಟದಲ್ಲಿ ಇರುವವನಿಗೆ ಬೆನ್ನು ತಟ್ಟಿ, ತೀರಿ ಹೋದವನ ಮನೆಗೆ ಹೋಗಿ ಬನ್ನಿ. ಎಲ್ಲಾ ಬೇಧ, ಭಾವ, ಮೇಲು ಕೀಳು, ಸ್ಪರ್ಧೆಗಳಿಂದ ಮುಕ್ತವಾಗಿ ಒಂದೇ ಕುಟುಂಬವಾಗಿರಬೇಕು ಎಂದು ರಂಗಕಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರು ಆಶಯ ವ್ಯಕ್ತಪಡಿಸಿದರು.
ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಮಂಗಳೂರಿನ ರಂಗ ಸಂಗಾತಿ ಸಾಂಸ್ಕøತಿಕ ಪ್ರತಿಷ್ಠಾನ ಕೊಡಮಾಡುವ `ರಂಗ ಭಾಸ್ಕರ-2019' ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ನಾಟಕ ವೀಕ್ಷಣೆ ಹಾಗು ಪ್ರದರ್ಶನದಲ್ಲಿ ಯುವ ತಲೆಮಾರು ಹೆಚ್ಚಾಗಿ ಬರಬೇಕು. ಆ ಮೂಲಕ ರಂಗಕ್ಕೆ ಮತ್ತೆ ಜೀವಂತಿಕೆ ನೀಡಬೇಕೆಂದರು. ರಂಗಭೂಮಿಗೆ ಎಂದೂ ಸಾವಿಲ್ಲ. ರಂಗ ಕರ್ಮಿಗಳು ಮತ್ತಷ್ಟು ಸಕ್ರಿಯರಾಗಬೇಕಾಗಿದೆ. ರಂಗಭೂಮಿಯಲ್ಲಿ ತೊಡಗಿಸಿಕೊಂಡವರು ತಾವು ಕಲಿತ ಶಾಲೆಯಲ್ಲಿ ಮಕ್ಕಳಿಗೆ ರಂಗಭೂಮಿಯನ್ನು ತಿಳಿಯ ಪಡಿಸುವ ಪ್ರಯತ್ನ ಮಾಡಿ ಎಂದರು.
ಹಿರಿಯ ರಂಗಕರ್ಮಿ ಡಾ.ನಾ.ದಾ.ಶೆಟ್ಟಿ ಮಾತನಾಡಿ ಭಾಸ್ಕರ ನೆಲ್ಲಿತೀರ್ಥ `ರಂಗ ಸವ್ಯಸಾಚಿ'. ಇನ್ನೊಬ್ಬ ಸವ್ಯಸಾಚಿ ಕಾಸರಗೋಡು ಚಿನ್ನಾ. ಹಾಗಾಗಿ ಪ್ರಶಸ್ತಿಯನ್ನು ಚಿನ್ನಾ ಅವರಿಗೆ ನೀಡಿರುವುದು ಸಾರ್ಥಕತೆ ಪಡೆದಿದೆ ಎಂದರು.
ಸಂತ ಅಲೋಸಿಯಸ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ ಮಾರ್ಟಿಸ್, ಅರೆಹೊಳೆ ಪ್ರತಿಷ್ಠಾನದ ಸದಾಶಿವ ರಾವ್, ರಂಗ ಸಂಗಾತಿ ಅಧ್ಯಕ್ಷರಾದ ಪೆÇ್ರ.ಗೋಪಾಲಕೃಷ್ಣ ಶೆಟ್ಟಿ, ಟ್ರಸ್ಟಿ ಎಂ.ಕರುಣಾಕರ ಶೆಟ್ಟಿ, ಉದ್ಯಮಿ ಸತೀಶ್ ಬೋಳಾರ್ ಉಪಸ್ಥಿತರಿದ್ದರು.
ಕಾಲೇಜಿನ ಕನ್ನಡ ಸಂಘದ ಅಧ್ಯಕ್ಷರಾದ ಡಾ.ದಿನೇಶ್ ನಾಯಕ್ ಸ್ವಾಗತಿಸಿ, ರಂಗ ಸಂಗಾತಿಯ ಶಶಿರಾಜ್ ಕಾವೂರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಂಗ ಸಂಗಾತಿಯಿಂದ `ಮರ ಗಿಡ ಬಳ್ಳಿ' ಪ್ರದರ್ಶನವಾಯಿತು.


