HEALTH TIPS

ಬದಲಾಗುತ್ತಿದೆ ಪೊಲಿಟಿಕಲ್ ಟ್ರೆಂಡ್- ಎರವಲು ಬೇಡ-ಸ್ಥಳೀಯ ಕನ್ನಡ ಅಭ್ಯರ್ಥಿಗಾಗಿ ರಾಜಕೀಯ ದೃಷ್ಟಿ -ಅಭ್ಯರ್ಥಿಗಳಿಗಾಗಿ ಹುಡುಕಾಟ ಶುರು


     ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾಗುತ್ತಿರುವಂತೆ ವಿವಿಧ ಪಕ್ಷಗಳು ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಮಂಜೇಶ್ವರದಲ್ಲಿ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿವೆ. ಐಕ್ಯರಂಗ, ಎನ್‍ಡಿಎ ಹಾಗೂ ಎಡರಂಗ ಮಂಜೇಶ್ವರದಲ್ಲಿ ಪ್ರಾದೇಶಿಕ ಕನ್ನಡ ಅಭ್ಯರ್ಥಿಗಳಿಗೆ ಮಣೆ ಹಾಕಲು ಪ್ರಯತ್ನಿಸುತ್ತಿವೆ.
  ಕನ್ನಡ ಪ್ರೇಮ!?
   ಪ್ರಸ್ತುತ ವ್ಯಾಪಕಗೊಂಡಿರುವ ಕನ್ನಡ ಪರ ಹೋರಾಟ, ಚಿಂತನೆಗಳ ಪ್ರಭಾವ ರಾಜಕೀಯ ಪಕ್ಷಗಳಿಗೂ ತಟ್ಟಿದಂತಿದೆ. ಇಲ್ಲಿಯ ಬಹುಸಂಖ್ಯಾತ ಕನ್ನಡಿಗರ ಕೂಗು ಇದೀಗ ರಾಜಕೀಯ ಪಕ್ಷಗಳ ಕಿವಿಗಪ್ಪಳಿಸತೊಡಗಿದ್ದು, ಕನ್ನಡ ಪರ ಮತದಾರರನ್ನು ಸೆಳೆಯದಿದ್ದರೆ ಬಹುಮತ ಲಭಿಸದೆಂಬ ಭಯ ಪಕ್ಷಗಳಿಗೆ ಕಾಡತೊಡಗಿದೆ. ಇದರ ಫಲವಾಗಿ ರಾಜಕೀಯ ಯುವ ಸಮೂಹದ ಒತ್ತಡದಂತೆ ಎಲ್ಲಾ ರಾಜಕೀಯ ಪಕ್ಷಗಳೂ ಕನ್ನಡಿಗರ ಮತ ಗಳಿಸಲು ಮತ್ತು ತಮ್ಮ ಸ್ಥಾನ ಭದ್ರಗೊಳಿಸಲು ಕನ್ನಡ ವನ್ನೇ ಟ್ರೇಡ್ ಮಾರ್ಕ್ ನಂತೆ ಬಳಸಲು ಉದ್ದೇಶಿಸಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮೂರು ಪ್ರಧಾನ ಪಕ್ಷಗಳಾದ ಯುಡಿಎಫ್, ಎಲ್‍ಡಿಎಫ್ ಮತ್ತು ಬಿಜೆಪಿಗಳಲ್ಲಿ ಬಿರುಸಿನ ಚರ್ಚೆ ನಡೆಯುತ್ತಿದೆ.
     ಮಂಜೇಶ್ವರದಲ್ಲಿ ಬಿಜೆಪಿಗೆ ಅವಕಾಶ ಹೇರಳವಾಗಿದ್ದು, ಜನಪ್ರಿಯ ನೇತಾರರನ್ನು ಕಣಕ್ಕಿಳಿಸಲು ಅಭ್ಯರ್ಥಿಗಳ ಯಾದಿ ಕಳುಹಿಸಿಕೊಡಲಾಗಿದೆ. ಯುಡಿಎಫ್ ಕ್ಷೇತ್ರ ಮುಸ್ಲಿಂ ಲೀಗ್‍ಗೆ ನೀಡಿದ್ದರಿಂದ ಪ್ರಾದೇಶಿಕ ನೇತಾರರ ಜೊತೆಗೆ ರಾಜ್ಯಮಟ್ಟದ ನೇತಾರರನ್ನು ಪರಿಗಣಿಸಲಾಗುತ್ತಿದೆ. ಎಲ್‍ಡಿಎಫ್‍ನಲ್ಲಿ ಸ್ಥಳೀಯ ನೇತಾರರಿಗೆ ಹುಡುಕಾಟ ನಡೆಯುತ್ತಿದೆ. ಈಗಾಗಲೇ ಎಲ್ಲಪಕ್ಷಗಳ ಮಂಡಲ ಮಟ್ಟದ ಸಮಾವೇಶಗಳು ಆರಂಭಗೊಂಡಿದೆ. ವಾರದೊಳಗೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧವಾಗಲಿದೆ. ನಾಮಪತ್ರ ಸಲ್ಲಿಕೆಯೊಂದಿಗೆ ಪ್ರಚಾರವೂ ತಾರಕಕ್ಕೇರಲಿದೆ.
    ಕನ್ನಡಿಗರೇ ಹೆಚ್ಚಾಗಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಕೆಲವು ವರ್ಷಗಳಿಂದ ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ಉಂಟಾಗುವ ಸಮಸ್ಯೆಗಳತ್ತ ಗಮನಹರಿಸಲು ಆಡಳಿತ ನಡೆಸುವ ಸರ್ಕಾರ, ಪ್ರತಿಪಕ್ಷಗಳು ವಿಫಲವಾಗಿದೆ. ಮಂಜೇಶ್ವರ ವ್ಯಾಪ್ತಿಯಲ್ಲಿರುವ ಕನ್ನಡ ಶಾಲೆಗಳಲ್ಲಿ ಮಲೆಯಾಳಿ ಅಧ್ಯಾಪಕರನ್ನು ನೇಮಕ ಮಾಡುವುದರ ವಿರುದ್ಧ ಕನ್ನಡಿಗರ ಹೋರಾಟ, ನೂತನವಾಗಿ ರಚಿಸಿದ ಮಂಜೇಶ್ವರ ತಾಲೂಕನ್ನು ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿ ಘೋಷಿಸುವುದು, ಅಂಗನವಾಡಿಗಳಲ್ಲಿ ಮಕ್ಕಳಿಗಾಗಿ ಕನ್ನಡ ಪುಸ್ತಕ, ಕೈಪಿಡಿ, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ಸಿಬ್ಬಂದಿ, ಮಾಹಿತಿ ಫಲಕಗಳು ಸಹಿತ ಆನೇಕ ಬೇಡಿಕೆ ಈಡೇರಿಸಲು ಪ್ರಯತ್ನ ನಡೆಯುತ್ತಿರುವಾಗಲೇ ಮಂಜೇಶ್ವರ ಉಪಚುನಾವಣೆ ಕನ್ನಡಿಗರ ಶಕ್ತಿ ಪ್ರದರ್ಶನದ ವೇದಿಕೆಯಾಗುವ ಸಾಧ್ಯತೆ ಇದೆ.
      ರಾಜ್ಯದಲ್ಲಿ ಅತಿ ಹಿಂದುಳಿದ ಕ್ಷೇತ್ರವಾಗಿರುವ ಮಂಜೇಶ್ವರ ಎಲ್ಲ ರೀತಿಯಲ್ಲೂ ಅವಗಣಿಸಲ್ಪಟ್ಟ ಪ್ರದೇಶ. ಈ ಪ್ರದೇಶದ ಅಭಿವೃದ್ಧಿಯತ್ತ ಧ್ವನಿಯೆತ್ತಲು ಯಾರೂ ಮುಂದೆ ಬರುವುದಿಲ್ಲ. ಬಹುತೇಕ ಕನ್ನಡಿಗರೇ, ಕರ್ನಾಟಕ ಗಡಿ ಹೊಂದಿರುವ ಅತೀ ಹೆಚ್ಚು ಪಂಚಾಯಿತಿಗಳನ್ನು ಹೊಂದಿದೆ.
     ಕ್ಷೇತ್ರದ ಅಭಿವೃದ್ಧಿ ಕನ್ನಡಿಗರ ಸಂವಿಧಾನದತ್ತ ಹಕ್ಕು ಸಂರಕ್ಷಣೆಯ ದೃಷ್ಟಿಯಲ್ಲಿ ಮಹತ್ವದ್ದಾಗಿದೆ. ಈಗಾಗಲೇ ನಾಮಪತ್ರ ಸ್ವೀಕಾರ ಆರಂಭಗೊಂಡಿದ್ದು, ಸೆ.30ರಂದು ಕೊನೆ ದಿನವಾಗಿದೆ. ಎಲ್ಲಪಕ್ಷಗಳಿಗೂ ಭಾಷಾ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣು ಬಿದ್ದಿದೆ. ರಾಜ್ಯಾವಾರು ವಿಂಗಡಣೆ ಬಳಿಕ 1982ರ ತನಕ ಕ್ಷೇತ್ರದಿಂದ ಕನ್ನಡಿಗರೇ ಶಾಸಕರಾಗಿ ಆಯ್ಕೆಯಾಗಿದ್ದರು. 1987ರ ಬಳಿಕ ಮುಸ್ಲಿಂ ಲೀಗ್ ತೆಕ್ಕೆಗೆ ಒಲಿದ ಮಂಜೇಶ್ವರ ಕ್ಷೇತ್ರದಲ್ಲಿ ಬಳಿಕ ಕನ್ನಡಿಗ ಅಭ್ಯರ್ಥಿ ರಾರೊಬ್ಬರೂ ಆಯ್ಕೆಯಾಗಿಲ್ಲ.
       ಮಂಜೇಶ್ವರಕ್ಕೆ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಎಂ. ಉಮೇಶ್ ರಾವ್ ಅವಿರೋಧವಾಗಿ ಆಯ್ಕೆಯಾದರು. 1957ರಿಂದ 1960ರ ತನಕ ಶಾಸಕರಾಗಿದ್ದರು. ಬಳಿಕ 1960 ಮತ್ತು 1967ರಲ್ಲಿಎರಡು ಬಾರಿ ಮಂಜೇಶ್ವರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕಳ್ಳಿಗೆ ಮಹಾಬಲ ಭಂಡಾರಿ 1970ರ ತನಕ ಮಂಜೇಶ್ವರ ಶಾಸಕರಾಗಿದ್ದರು. 1970ರಲ್ಲಿಮೊದಲ ಬಾರಿಗೆ ಸಿಪಿಐಯಿಂದ ಎಂ. ರಾಮಪ್ಪ ಹಾಗೂ 1980 ಹಾಗೂ 1982ರಲ್ಲಿಎರಡು ಬಾರಿ ಸಿಪಿಐಯ ಡಾ. ಎ. ಸುಬ್ಬ ರಾವ್ ಶಾಸಕರಾಗಿದ್ದರು.
     1987ರಿಂದ ಈ ಕ್ಷೇತ್ರ ಮುಸ್ಲಿಂ ಲೀಗ್ ತೆಕ್ಕೆಗೆ ಲಭಿಸಿದೆ. 1987, 1991, 2011 ರಲ್ಲಾಗಿ ನಾಲ್ಕು ಬಾರಿ ಮುಸ್ಲಿಂ ಲೀಗ್‍ನ ಅಭ್ಯರ್ಥಿಯಾಗಿದ್ದ ಚೆರ್ಕಳ ಅಬ್ದುಲ್ಲ ಶಾಸಕರಾಗಿದ್ದರಲ್ಲದೆ ಎರಡು ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅಚ್ಚರಿ ಎಂಬಂತೆ 2006ರ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿ ಸಿ.ಎಚ್. ಕುಂಞÂ್ಞಂಬು ಶಾಸಕರಾಗಿ ಆಯ್ಕೆಯಾದರು. 2011, 2016ರಲ್ಲಿ ಮುಸ್ಲಿಂ ಲೀಗ್‍ನ ಪಿ.ಬಿ. ಅಬ್ದುಲ್ ರಝಾಕ್ ಶಾಸಕರಾಗಿದ್ದರು. 2018ರಲ್ಲಿ ಶಾಸಕರಾಗಿದ್ದ ಪಿ.ಬಿ. ಅಬ್ದುಲ್ ರಝಾಕ್ ನಿಧನರಾದರು. ಇದೀಗ ಒಂದು ವರ್ಷದ ಬಳಿಕ ಚುನಾವಣೆ ನಡೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries