ಬದಿಯಡ್ಕ: ನೀರ್ಚಾಲಿನಲ್ಲಿ ಕಾರ್ಯಾಚರಿಸುತ್ತಿರುವ ಕಾಸರಗೋಡು ಕೃಷಿಕರ ಸಹಕಾರಿ ಮಾರಾಟ ಸಂಘಕ್ಕೆ ಜಿಲ್ಲೆಯ ಅತ್ಯುತ್ತಮ ಮಾರ್ಕೆಟಿಂಗ್ ಸೊಸೈಟಿ ಪ್ರಶಸ್ತಿ ಲಭಿಸಿದೆ. ರಾಜ್ಯ ಸಹಕಾರಿ ಇಲಾಖಾ ವತಿಯಿಂದ ನೀಡುವಂತಹ ಪ್ರಶಸ್ತಿ ಇದಾಗಿದ್ದು, ಸಂಸ್ಥೆಯ ಶ್ರೇಷ್ಠ ನಿರ್ವಹಣೆಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಲಾಗಿದೆ.
ಕಾಞಂಗಾಡಿನ ವ್ಯಾಪಾರ ಭವನದಲ್ಲಿ ಸೋಮವಾರ ಜರಗಿದ ಸಹಕಾರಿ ಸಂಗಮದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ಅವರು ಸಂಘದ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಅವರಿಗೆ ಪ್ರಶಸ್ತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಅಪ್ಪಣ್ಣ ಬಿ.ಎಸ್., ನಿರ್ದೇಶಕರುಗಳಾದ ರಾಮಕೃಷ್ಣ ಹೆಬ್ಬಾರ್ ಸೀತಾಂಗೋಳಿ, ವೆಂಕಟ್ರಮಣ ಭಟ್ ಪೆರ್ಲ, ಗಣಪತಿ ಪ್ರಸಾದ ಕುಳಮರ್ವ, ಬಾಲಗೋಪಾಲ ಏಣಿಯರ್ಪು, ಶಶಿಕಲಾ ಗುಣಾಜೆ, ಸ್ಮಿತಾ ಸರಳಿ ಜೊತೆಗಿದ್ದರು. ಉಪ ನೊಂದಣಾಧಿಕಾರಿ ಮುಹಮ್ಮದ್ ನೌಶದ್, ತಾಲೂಕು ಸಹಾಯಕ ನೊಂದಣಾಧಿಕಾರಿ ಜಯಚಂದ್ರನ್, ವಿವಿಧ ಸಹಕಾರಿ ಇಲಾಖಾಧಿಕಾರಿಗಳು, ಸಹಕಾರಿ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಅಭಿಮತ:
ಹಲವು ವರ್ಷಗಳಿಂದ ಸದಸ್ಯ ಕೃಷಿಕರಿಗೆ ನೀಡುತ್ತಿರುವ ವಿವಿಧ ರೀತಿಯ ಸೇವೆಗಳು ಮತ್ತು ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆಗೆ ಪೂರಕವಾದ ಚಟುಕಟಿಕೆಗಳನ್ನು ಮನಗಂಡು ಈ ಪ್ರಶಸ್ತಿ ಲಭಿಸಿದೆ. ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಉತ್ತೇಜನಕಾರಿಯಾಗಿದೆ. ಇದು ಎಲ್ಲಾ ಸದಸ್ಯರಿಗೂ ಸಂದ ಗೌರವವಾಗಿದೆ. ಮುಂದೆಯೂ ಕೃಷಿಕರ ಸೇವೆಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಸಂಸ್ಥೆಯು ನೀಡಲಿದೆ.
- ಪದ್ಮರಾಜ ಪಟ್ಟಾಜೆ, ಅಧ್ಯಕ್ಷರು, ಕೆಎಸಿಎಂ ಸೊಸೈಟಿ ನೀರ್ಚಾಲು


