ಕಾಸರಗೋಡು: ಬಹು ನಿರೀಕ್ಷಿತ ಕಾಸರಗೋಡು ವೈದ್ಯಕೀಯ (ಉಕ್ಕಿನಡ್ಕದಲ್ಲಿ)ಆಸ್ಪತ್ರೆಯ ನಿರ್ಮಾಣಕಾರ್ಯದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ. ಆಸ್ಪತ್ರೆ ಕಟ್ಟಡ ನಿರ್ಮಾಣಕಾರ್ಯದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮತ್ತೊಮ್ಮೆ ಸಾಬೀತಾಗಿದೆ.
2013 ನವೆಂಬರ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಆಸ್ಪತ್ರೆ ಕಾಮಗಾರಿಗೆ ಶಿಲಾನ್ಯಾಸ ನಡೆಸಿದ್ದು, ಮೂರು ವರ್ಷದಲ್ಲಿ ಪೂರ್ತಿಗೊಳ್ಳಬೇಕಾಗಿದ್ದ ಕಾಮಗಾರಿ ಆರು ವರ್ಷ ಕಳೆದರೂ ಎತ್ತಲೂ ಸಾಗದ ಸ್ಥಿತಿ ನಿರ್ಮಾಣವಾಗಿದೆ. ಭಾಷಾ ಅಲ್ಪಸಂಖ್ಯಾತ ಪ್ರದೇಶದಲ್ಲಿ ತಲೆಯೆತ್ತಬೇಕಾದ ಕಾಸರಗೋಡಿನ ಜನತೆಯ ಕನಸಿನ ಯೋಜನೆಯೊಂದನ್ನು ಕೇರಳದ ಎಡರಂಗ ಸರ್ಕಾರ ಮೂಲೆಗುಂಪಾಗಿಸುವ ಯತ್ನದಲ್ಲಿದೆ. ಎಡರಂಗ ಸರ್ಕಾರ ಅಧಿಕಾರಕ್ಕೇರಿದ ನಂತರ ಬಜೆಟ್‍ನಲ್ಲಿ ಚಿಕ್ಕಾಸೂ ಮೀಸಲಿರಿಸಿದೆ, ಸಂಪೂರ್ಣ ಯೋಜನೆಯನ್ನು ನಿರ್ಲಕ್ಷಿಸುತ್ತಾ ಬಂದಿದೆ. ಸುಮಾರು 235ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಬೇಕಾದ ಕಾಮಗಾರಿ ಆಡಳಿತ ವಿಭಾಗ ಕಟ್ಟಡ ನಿರ್ಮಾಣಕ್ಕಷ್ಟೆ ಸೀಮಿತವಾಗಿದೆ. ಉಳಿದ ಕಾಮಗಾರಿ ವಿಳಂಬವಾಗಿ ನಡೆಯುತ್ತಿದೆ. ಆಸ್ಪತ್ರೆ ಕಟ್ಟಡ ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿದೆ. ಉಳಿದಂತೆ ಸ್ಟಾಫ್ ಕ್ವಾಟ್ರಸ್, ಹಾಸ್ಟೆಲ್, ಗ್ರಂಥಾಲಯ, ಸಭಾಂಗಣ, ಮಾಲಿನ್ಯ ಸಂಸ್ಕರಣಾ ಘಟಕ, ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.
ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ 135ಕೋಟಿ ರೂ. ಮೊತ್ತದ ಎಸ್ಟಿಮೇಟ್ ನಿರ್ಮಾಣ ಏಜನ್ಸಿಯಾಗಿರುವ 'ಕಿಟ್ಕೋ' ಸರ್ಕಾರಕ್ಕೆ ಸಲ್ಲಿಸುವುದರ ಜೊತೆಗೆ, ಕಾಸರಗೋಡಿನ ಶಾಸಕ ಎನ್.ಎ ನೆಲ್ಲಿಕುನ್ನು ನೇತೃತ್ವದಲ್ಲಿ ಸಂಬಂಧಪಟ್ಟ ಸಚಿವರುಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದರೂ, ಪ್ರಯೋಜನವಾಗಿರಲಿಲ್ಲ.
ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಹೆಚ್ಚಾಗಿರುವ ಪ್ರದೇಶದಲ್ಲಿ ಸುಸಜ್ಜಿತ ವೈದ್ಯಕೀಯ ಕಾಲೇಜು ಆಸ್ಪತ್ರೆ ನಿರ್ಮಾಣಕಾರ್ಯ ಆರಂಭಗೊಳ್ಳುತ್ತಿದ್ದಂತೆ ಸಂತ್ರಸ್ತರೂ ಒಳಗೊಂಡಂತೆ ನಾಡಿನ ಜನತೆ ಹೆಚ್ಚಿನ ಖುಷಿಪಟ್ಟಿದ್ದರೆ, ಸರ್ಕಾರದ ನಿರ್ಲಕ್ಷ್ಯ ಧೋರಣೆ ಜನರಲ್ಲಿ ಭ್ರಮನಿರಸನಕ್ಕೆ ಕಾರಣವಾಗಿದೆ. ಉನ್ನತ ಚಿಕಿತ್ಸೆಗಾಗಿ ಕಾಸರಗೋಡಿನ ಜನತೆ ಮಂಗಳೂರು ಅಥವಾ ಕಣ್ಣೂರಿಗೆ ತೆರಳಬೇಕಾಗಿದ್ದು, ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾರ್ಯಾರಂಭವನ್ನು ಇದಿರುನೋಡುತ್ತಿದ್ದರೆ, ಕಾಸರಗೋಡಿನ ಜನತೆ ಎಡರಂಗಸರ್ಕಾರದಲ್ಲಿರಿಸಿದ್ದ ಭರವಸೆಯನ್ನು ಹುಸಿಗೊಳಿಸಿದೆ. ಇನ್ನೊಂದೆಡೆ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡವನ್ನು ಆಡಳಿತ ವಿಭಾಗಕ್ಕಷ್ಟೆ ಸೀಮಿತಗೊಳಿಸಿ, ಕಾಸರಗೋಡು ಜನರಲ್ ಆಸ್ಪತ್ರೆಯನ್ನು ಸೂಪರ್‍ಸ್ಪೆಶ್ಯಾಲಿಟಿ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸುವ ಶ್ರಮ ಸರ್ಕಾರದಿಂದ ನಡೆದುಬರುತ್ತಿದೆ ಎಂಬ ದೂರೂ ಕೇಳಿಬರುತ್ತಿದೆ.
ವಾಸನೆ-ಮತ್ತೆ ಕೆಲಸ ಮಾಡಿದೆಯೇ ಮಂಗಳೂರು ಲಾಬಿ?:
ಕಾಸರಗೋಡಿನಲ್ಲಿ ಸೂಪರ್‍ಸ್ಪೆಶ್ಯಾಲಿಟಿ ಆಸ್ಪತ್ರೆ ಆರಂಭಗೊಳ್ಳುವುದಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಗಳ ಲಾಬಿ ತೊಡಕುಂಟುಮಾಡುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಿದೆ. ಕೇರಳದಲ್ಲಿ ಅಧಿಕಾರಕ್ಕೇರುವ ಯಾವುದೇ ಸರ್ಕಾರವನ್ನೂ ಈ ಲಾಬಿ ತನ್ನ ಮುಷ್ಟಿಯೊಳಗಿರಿಸಿ, ಇಂತಹ ಯೋಜನೆ ಕಾರ್ಯಗತಗೊಳ್ಳದಂತೆ ನೋಡಿಕೊಳ್ಳುತ್ತಿದೆ. ಉಕ್ಕಿನಡ್ಕದಲ್ಲಿ ಆರಂಭಗೊಳ್ಳುವ ವೈದ್ಯಕೀಯ ಕಾಲೇಜಿನ ಮೇಲೆ ಮಂಗಳೂರಿನ ಈ ಲಾಬಿ ಕೆಲಸ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಮಂಗಳೂರಿನ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲೂ ಕಾಸರಗೋಡು ಸಹಿತ ಮಲಬಾರ್ ಪ್ರದೇಶದ ರೋಗಿಗಳೇ ತುಂಬಿಕೊಳ್ಳುತ್ತಿದ್ದು, ಕಾಸರಗೋಡಿನಲ್ಲಿ ಸುಸಜ್ಜಿತ ಸೂಪರ್‍ಸ್ಪೆಶ್ಯಾಲಿಟಿ ಆಸ್ಪತ್ರೆ ನಿರ್ಮಾಣಗೊಂಡಲ್ಲಿ ರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿರುವ ಭೀತಿ ಅಲ್ಲಿನ ಖಾಸಗಿ ಆಸ್ಪತ್ರೆಗಳನ್ನು ಕಾಡುತ್ತಿರುವುದಾಗಿ ಅಭಿಪ್ರಾಯ ಕೇಳಿ ಬರುತ್ತಿದೆ.
ನಾಳೆಯಿಂದ ಪ್ರತಿಭಟನಾ ಅಭಿಯಾನ:
ಕಾಸರಗೋಡು ವೈದಕ್ಯಕೀಯ ಕಾಲೇಜು ಆಸ್ಪತ್ರೆ ನಿರ್ಮಾಣಕಾರ್ಯದಲ್ಲಿ ಸರ್ಕಾರದ ವಿಳಂಬ ಧೋರಣೆ ಪ್ರತಿಭಟಿಸಿ, ವೈದ್ಯಕೀಯ ಕಾಲೇಜು ಆಸ್ಪತ್ರೆ ಕ್ರಿಯಾಸಮಿತಿ ನವೆಂಬರ್ 20ರಿಂದ ಪ್ರತಿಭಟನಾ ಅಭಿಯಾನ ನಡೆಸಲು ತೀರ್ಮಾನಿಸಿದೆ. ಆಸ್ಪತ್ರೆ ಕಟ್ಟಡ ಕಾಮಗಾರಿ ಶೀಘ್ರ ಪೂರ್ತಿಗೊಳಿಸಬೇಕು, ಈ ವರ್ಷದ ಬಜೆಟ್‍ನಲ್ಲಿ ಅಗತ್ಯ ಮೊತ್ತ ಮೀಸಲಿರಿಸಬೇಕು, ಚೆರ್ಕಳ-ಕಲ್ಲಡ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ತಿಗೊಳಿಸಬೇಕು, ವೈದ್ಯಕೀಯ ಕಾಲೇಜು ಆಸ್ಪತ್ರೆಗಿರುವ ರಸ್ತೆನಿರ್ಮಾಣಕಾರ್ಯವನ್ನೂ ಶೀಘ್ರ ಪೂರ್ತಿಗೊಳಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಅಭಿಯಾನ ನಡೆಯಲಿದೆ ಎಂದು ಕ್ರಿಯಾ ಸಮಿತಿ ಪದಾಧಿಕಾರಿ ಮಾಹಿನ್‍ಕೇಳೋಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನ. 20ರಂದು ಮಧ್ಯಾಹ್ನ 3.30ಕ್ಕೆ ಕಾಸರಗೋಡು ಹೊಸಬಸ್‍ನಿಲ್ದಾಣ ವಠಾರದಲ್ಲಿ ಅಭಿಯಾನದ ಉದ್ಘಾಟನೆ ನಡೆಯಲಿದೆ. ನಂತರ ಬದಿಯಡ್ಕ, ಪೆರ್ಲ, ಸೀತಾಂಗೋಳಿ, ಕುಂಬ್ಡಾಜೆ ಸಹಿತ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನಾ ಸಂಗಮ ನಡೆಯಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎ.ಕೆ ಶ್ಯಾಮ ಪ್ರಸಾದ್, ಅಹಮ್ಮದ್ ಶೆರೀಫ್, ಕೆ. ಗಿರೀಶ್, ಪಿ.ಜಿ ಚಂದ್ರಹಾಸ ರೈ, ಫಾರುಕ್ ಕಾಸಿಮಿ, ಅಬ್ದುಲ್ ತಾಸಿರ್, ಎಂ.ಕೆ ರಾಧಾಕೃಷ್ಣನ್, ಅಬ್ದುಲ್ ಖಾದರ್ ಚಟ್ಟಂಚಾಲ್ ಉಪಸ್ಥಿತರಿದ್ದರು.


