ಮುಳ್ಳೇರಿಯ : ಮಾನವನ ಆರೋಗ್ಯ ರಕ್ಷಣೆಗೆ ಶಿಸ್ತುಬದ್ಧ ಆಹಾರ ಸೇವನೆ, ವ್ಯಾಯಾಮ, ಶಾಂತ ಮನಸ್ಸು ಅಗತ್ಯ. ಶರೀರದಲ್ಲಿ ಪ್ರತೀದಿನ ಸೃಷ್ಟಿಯಾಗುವ ವಿಷಾಂಶಗಳು, ಮಲಮೂತ್ರಾದಿಗಳ ಮತ್ತು ಬೆವರಿನ ಮೂಲಕ ಹೊರಹೋಗುತ್ತವೆ. ಅವುಗಳು ಹೊರಹೋಗದಿದ್ದರೆ ವ್ಯಕ್ತಿಗೆ ಅನಾರೋಗ್ಯ ಕಾಡುತ್ತದೆ. ಶರೀರದ ಪ್ರತಿಯೊಂದು ಅಂಗವೂ ಆರೋಗ್ಯವಾಗಿರಬೇಕಾದರೆ ನಿರಂತರ ಚಟುವಟಿಕೆ ಅಗತ್ಯ. ಅಶಿಸ್ತಿನ ಜೀವನವು ರೋಗಕ್ಕೆ ಆಹ್ವಾನ' ಎಂದು ಕೇರಳ ಆರೋಗ್ಯ ಇಲಾಖೆಯ ನಿವೃತ್ತ ಜಿಲ್ಲಾ ಸಹಾಯಕ ಆರೋಗ್ಯ ನಿರ್ದೇಶಕ ಡಾ. ರವಿಪ್ರಸಾದ್ ಬೆಳ್ಳೂರು ಹೇಳಿದರು.
ಅವರು ಭಾನುವಾರ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಅಡೂರಿನ ವಿದ್ಯಾಭಾರತೀ ವಿದ್ಯಾಲಯದಲ್ಲಿ ನಡೆದ 'ರಕ್ತದೊತ್ತಡ ಹಾಗೂ ಮಧುಮೇಹ ರೋಗ ನಿಯಂತ್ರಣ ಹಾಗೂ ಮುಂಜಾಗ್ರತೆ' ಕುರಿತು ಮಾಹಿತಿ ನೀಡಿ ಮಾತನಾಡಿದರು.
ಮೈದಾ ಹುಡಿ, ಸಕ್ಕರೆ, ಉಪ್ಪು ಹಾಗೂ ಜಂಕ್ ಫುಡ್ ಮೊದಲಾದ ಉತ್ಪನ್ನಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆರೋಗ್ಯ ಸಿದ್ಧಿಗೆ ಪ್ರತೀದಿನ 20 ನಿಮಿಷದ ವೇಗವಾದ ನಡಿಗೆ, 3 ಲೀಟರ್ ನೀರು ಸೇವನೆ ಅಗತ್ಯ. ಮಕ್ಕಳಿಗೆ ಪ್ರತೀದಿನ ಯೋಗಾಭ್ಯಾಸ ಮಾಡಿಸಬೇಕು. ಪ್ರಾಣಾಯಾಮ ಹಾಗೂ ವಿಷ್ಣು ಸಹಸ್ರನಾಮದಂತಹಾ ಸ್ತೋತ್ರಗಳನ್ನು ಪ್ರತೀದಿನ ಪಠಿಸುವುದರಿಂದ ಅಥವಾ ಕೇಳುವುದರಿಂದ ಹೃದಯಕ್ಕೆ ವಿಶ್ರಾಂತಿ ಹಾಗೂ ಮಾನಸಿಕ ದೃಢತೆ ದೊರೆಯುತ್ತದೆ. ಮಾನವನ ಆರೋಗ್ಯವು ಆತನ ಮನಸ್ಸು ಹಾಗೂ ಶರೀರವನ್ನು ಅತ್ಯಂತ ಸೂಕ್ಷ್ಮವಾಗಿ ಬೆಸೆದುಕೊಂಡಿವೆ. ರಕ್ತದೊತ್ತಡ ಹಾಗೂ ಮಧುಮೇಹಿಗಳು ಯಾವುದೇ ಉದ್ವೇಗಕ್ಕೆ ಒಳಗಾಗದೆ ಶಾಂತ ಮನಸ್ಸಿನಲ್ಲಿರಬೇಕು. ವೃದ್ಧಾಪ್ಯದಲ್ಲಿ ನಿಯಮಿತ ಆಹಾರ ಸೇವನೆ ಹಾಗೂ ನಿರಂತರ ಚಟುವಟಿಕೆ ಅಗತ್ಯ. ಯಾವುದೇ ರೋಗಗಳೂ ಕಾಡದಂತೆ ಮುಂಜಾಗ್ರತೆ ವಹಿಸುವುದು ಅತ್ಯಂತ ಅಗತ್ಯ ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ವಹಿಸಿದ್ದರು. ಸಭೆಯಲ್ಲಿ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷೆ ಸತ್ಯಪ್ರೇಮಾ ಎಂ ಭಾರಿತ್ತಾಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಿನೇಶ್ ಕುಮಾರ ಅಡಿಗ, ಶ್ರೀಪ್ರಸಾದ ಭಾರಿತ್ತಾಯ, ಮಹಾದೇವ ಕಲ್ಲೂರಾಯ, ಪದ್ಮಾ ಎಚ್, ರಾಜಾರಾಮ ಎ, ನಳಿನಾಕ್ಷಿ ಎ, ಕಮಲಾಕ್ಷಿ, ಕೃತಿಕಾ ಎ, ಆದ್ಯಂತ್ ಅಡೂರು, ಪದ್ಮಾ ಆರ್, ಲತಾ ಆರ್ ಕೆ, ಜಯಲಕ್ಷ್ಮಿ ಪಿ ತಂತ್ರಿ ಮೊದಲಾದವರು ಭಾಗವಹಿಸಿದ್ದರು. ವಲಯ ಕಾರ್ಯದರ್ಶಿ ಪ್ರಶಾಂತ ರಾಜ ವಿ ತಂತ್ರಿ ಸ್ವಾಗತಿಸಿ, ವಂದಿಸಿದರು.


