ಮಂಜೇಶ್ವರ: ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವುದರ ಜೊತೆಗೆ ಮನೋಲ್ಲಾಸಕ್ಕೆ ಕಾರಣವಾಗುವ ಕಲಾ ಪ್ರಕಾರವಾದ ರಂಗಭೂಮಿ-ನಾಟಕ ಕ್ಷೇತ್ರದ ರಚನಾತ್ಮಕ ಕಾರ್ಯಚಟುವಟಿಕೆಗಳಿಗೆ ಬೆಂಬಲ ನೀಡಿ ಪೋಶಿಸುವ ಸನ್ಮನಸ್ಸು ಎಲ್ಲರಲ್ಲೂ ಬೆಳೆದುಬರಬೇಕು. ವ್ಯಕ್ತಿ, ಸಮಾಜವನ್ನು ಶಕ್ತಿಯಾಗಿ ರೂಪಿಸುವ ಶಕ್ತಿ ಕಲಾ ಪ್ರಕಾರದ ವಿಶೇಷತೆಯಾಗಿದೆ ಎಂದು ಮಂಜೇಶ್ವರದ ಕಲಾಸ್ಪರ್ಶಂ ಕೇಂದ್ರದ ನಿರ್ದೇಶಕಿ ಜೀನ್ ಲವೀನ ಮೊಂತೇರೊ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡಿನ ರಂಗ ಕುಟೀರದ ಆಶ್ರಯದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ಭಾನುವಾರ ಸಂಜೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ಸಮೀಪವಿರುವ ಕಲಾಸ್ಪರ್ಶಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಏಕವ್ಯಕ್ತಿ ರಂಗ ಪ್ರಸ್ತುತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ತಲೆಮಾರಿಗೆ ರಂಗ ಭಾಷ್ಯವನ್ನು ಅರ್ಥೈಸುವ, ಅದರಲ್ಲಿ ಆಸಕ್ತರಾಗಿ ತೊಡಗಿಸಿಕೊಳ್ಳುವ ಪ್ರಯತ್ನಗಳು ಆಗಬೇಕು. ಅಂತರಂಗದ ತುಮುಲ, ಸಾಮಾಜಿಕ ಸ್ಥಿತ್ಯಂತರಗಳ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ರಂಗಭೂಮಿಯಲ್ಲಿ ಮಾತ್ರ ಅಡಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರಕವಿಗಳ ಪುಣ್ಯ ನೆಲದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರಲಿ ಎಂದು ಈ ಸಂದರ್ಭ ತಿಳಿಸಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ವಿಜೇತ ಚಲನಚಿತ್ರ ನಟ ಪ್ರಕಾಶ್ ಕೆ.ತೂಮಿನಾಡು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅವರು ಈ ಸಂದರ್ಭ ಮಾತನಾಡಿ, ರಂಗಭೂಮಿಯೊಳಗಿನ ವಿಭಿನ್ನ ಅವಕಾಶಗಳು ಇಂದು ಪ್ರತಿಭೆಗಳ ಬೆಳವಣಿಗೆಗೆ ಪೂರಕವಾಗಿ ವಿಸ್ಕøತಗೊಂಡಿದೆ. ಸಾಗರದಷ್ಟು ವಿಶಾಲವಾಗಿರುವ ರಂಗಭೂಮಿಯ ಒಳಹೊಕ್ಕು ಪ್ರತಿಭೆಯನ್ನು ಒರೆಗೆ ಹಚ್ಚುವ ಮೂಲಕ ಭವಿಷ್ಯವನ್ನು ಸಮರ್ಥವಾಗಿ ರೂಪಿಸಬಹುದಾಗಿದೆ. ಆದರೆ ಅಪರಿಮಿತ ಕಲಾಪ್ರೇಮ ಮತ್ತು ಸವಾಲುಗಳಿಗೆ ಎದುರಾಗಿ ಮುನ್ನಡೆಯುವ ಆಂತರಂಗಿಕ ಶಕ್ತಿ ನಮ್ಮೊಳಗಿರಬೇಕು ಎಂದು ತಿಳಿಸಿದರು. ಗಡಿನಾಡಿನ ರಂಗಭೂಮಿಯ ಸಾಧನೆಗಳು ಮಹತ್ವಪೂರ್ಣವಾದುದಾಗಿದ್ದು, ಹೊಸ ತಲೆಮಾರನ್ನು ಪರಂಪರೆಯ ಹಾದಿಯಲ್ಲಿ ಕರೆತರುವಲ್ಲಿ ಹೊಸ ತಂತ್ರಗಾರಿಕೆಗಳ ಅಗತ್ಯವಿದೆ ಎಂದರು.
ಕಾಸರಗೋಡು ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮಾತನಾಡಿ, ಗಡಿನಾಡಿನ ಕನ್ನಡ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ರಂಗಭೂಮಿ, ಯಕ್ಷಗಾನ ಸಹಿತ ತುಳು ಪರಂಪರೆಯ ಚಟುವಟಿಕೆಗಳು ಆಲದ ಮರವಾಗಿ ಬೆಳೆಸಿ ಮುನ್ನಡೆಸಿದೆ ಎಂದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ಆರ್.ಜಯಾನಂದ, ಸಾಮಾಜಿಕ ಕಾರ್ಯಕರ್ತ ಹರಿಶ್ಚಂದ್ರ ಮಂಜೇಶ್ವರ ಮಾತನಾಡಿದರು. ಯಕ್ಷಗಾನ ಗುರು ದಿವಾಣ ಶಿವಶಂಕರ ಭಟ್, ಸಾಮಾಜಿಕ ಕಾರ್ಯಕರ್ತೆ ವಿಮಲ ನಾರಾಯಣ, ರಂಗನಟ ದಯಾನಂದ ಮಾಡ, ರಂಗನಟ ಭಾಸ್ಕರ ಮಂಜೇಶ್ವರ ಉಪಸ್ಥಿತರಿದ್ದರು. ಕಲಾವಿದರ ಸಂಘಟನೆ ಸವಾಕ್ ನ ಜಿಲ್ಲಾ ಕೋಶಾಧಿಕಾರಿ ಚಂದ್ರಹಾಸ ಕಯ್ಯಾರು ಸ್ವಾಗತಿಸಿ, ರಂಗ ಕುಟೀರದ ಕಾರ್ಯದರ್ಶಿ ನಶ್ಮಿತ ಕಮಲೇಶ್ ವಂದಿಸಿದರು. ಕೇರಳ ತುಳು ಅಕಾಡೆಮಿ ಸದಸ್ಯ ರಾಮಕೃಷ್ಣ ಕಡಂಬಾರ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಎನ್.ವಿ.ರಾವ್ ಅವರ ಕಾದಂಬರಿ ಆಧಾರಿತ, ಖ್ಯಾತ ರಂಗ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಅವರು ನಿರ್ದೇಶಿಸಿದ ಸತ್ಯನಾಪುರದ ಸಿರಿ ಏಕವ್ಯಕ್ತಿ ನಾಟಕವನ್ನು ಪೂರ್ಣಿಮಾ ಸುರೇಶ್ ಅವರು ಪ್ರಸ್ತುತಪಡಿಸಿದರು.


