ಬದಿಯಡ್ಕ: ಆದಿ ಚುಂಚನಗಿರಿಯಲ್ಲಿ ನ.29 ಹಾಗೂ 30 ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಮಕ್ಕಳ ಪ್ರಥಮ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷೆಯಾಗಿ ಪೆರ್ಲ ಕಾಟುಕುಕ್ಕೆಯ ಬಾಲ ಪ್ರತಿಭೆ ಸೃಷ್ಟಿ ಕೆ.ಶೆಟ್ಟಿ ಆಯ್ಕೆಯಾಗಿದ್ದಾಳೆ. ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರದ ಉದ್ದಗಲದ 30 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವರು. ಸಮ್ಮೇಳನದ ಸರ್ವಾಧ್ಯಕ್ಷತಾಗಿ ತುಮಕೂರಿನ ಕೀರ್ತನ ನಾಯಕ್ ಆಯ್ಕೆಯಾಗಿದ್ದಾಳೆ.
ಕಾಸರಗೋಡಿನ ಬಹುಮುಖ ಪ್ರತಿಭೆ, ಡ್ರಾಮಾ ಜ್ಯೂನಿಯರ್ಸ್ ವಿಜೇತ ಮುಳ್ಳೇರಿಯದ ಅನೂಪ್ ರಮಣ ಶರ್ಮನ ಪ್ರತಿಭಾ ಪ್ರದರ್ಶನಕ್ಕೂ ಸಮ್ಮೇಳನದಲಲಿ ವಿಶೇಷ ವೇದಿಕೆ ಕಲ್ಪಿಸಲಾಗಿದೆ. ಕವಿಗೋಷ್ಠಿಯ ನಿರೂಪಣೆಯಲ್ಲಿ ಅನೂಪ್ ರಮಣ ಶರ್ಮ ಗಮನ ಸೆಳೆಯಲಿದ್ದಾನೆ. ಈತ ಮುಳ್ಳೇರಿಯದ ಸರ್ಕಾರಿ ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಎಂಟನೇ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಯಾಗಿದ್ದು, ಪೆರ್ಲ ಸತ್ಯನಾರಾಯಣ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್. ಹಾಗೂ ಮುಳ್ಳೇರಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಪದ್ಮಾ ದಂಪತಿಗಳ ಪುತ್ರ. ಝಿ ಟಿಯ ಡ್ರಾಮಾ ಜ್ಯೂನಿಯರ್ಸ್ ನ ಬಹುಮಾನಿತನಾದ ಅನೂಪ್, ಪ್ರಸ್ತುತ ಸಾಲಿನ ಜಿಲ್ಲಾ ಕ್ರೀಡಾ ಕೂಟದ ಚೆಸ್ ಪಂದ್ಯಾಟದಲ್ಲೂ ಬಹುಮಾನಿತನಾಗಿದ್ದಾನೆ. ಹಲವಾರು ಚಲನಚಿತ್ರ, ಕಿರುಚಿತ್ರ, ಧಾರಾವಾಹಿಗಳಲ್ಲಿ ಈ ಪ್ರತಿಭೆ ಈಗಾಗಲೇ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾನೆ.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿರುವ ಸೃಷ್ಟಿ ಕೆ.ಶೆಟ್ಟಿ ಕಾಟುಕುಕ್ಕೆಯ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮ ಎಂಟನೇ ತರಗತಿಯ ವಿದ್ಯಾರ್ಥಿನಿ. ಕಾಟುಕುಕ್ಕೆ ಪಟ್ಲದ ರಾಜಾರಾಮ ಶೆಟ್ಟಿ-ಸವಿತಾ ದಂಪತಿಗಳ ಪುತ್ರಿಯಾಗಿದ್ದು, ಇತ್ತೀಚೆಗೆ ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ನಡೆದ ಕಾಸರಗೋಡು ಜಿಲ್ಲಾ 5ನೇ ಚುಟುಕು ಸಾಹಿತ್ಯ ಸಮ್ಮೇಳನದ ವಿದ್ಯಾರ್ಥಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಅಲಂಕರಿಸಿದ್ದಳು. ಕವಿತಾ ರಚನೆ, ಭಾಷಣ, ಪ್ರಬಂಧ, ಯಕ್ಷಗಾನ, ಕರಾಟೆ ಮೊದಲಾದ ಬಹುಮುಖ ಪ್ರತಿಭೆಯಲ್ಲಿ ಈಕೆ ಮಿಂಚುತ್ತಿದ್ದಾಳೆ.
ಕಳೆದ ವಾರ ಹಾಸನದಲ್ಲಿ ನಡೆದ ಪ್ರತಿಭಾ ಸ್ಪರ್ಧೆಯಲ್ಲಿ ಸೃಷ್ಟಿ ಶೆಟ್ಟಿ ಕೆ ಮತ್ತು ಅನೂಪ್ ರಮಣ ಶರ್ಮ ಭಾಗವಹಿಸಿದ್ದರು. 300 ಮಂದಿ ಸ್ಪರ್ಧಾಳುಗಳಿಗೆ ಹಮ್ಮಿಕೊಳ್ಳಲಾಗಿದ್ದ ಈ ಆಯ್ಕೆ ಪ್ರಕ್ರಿಯೆಯಲ್ಲಿ 15 ಮಂದಿಗಳಲ್ಲಿ ಸೃಷ್ಟಿ ಹಾಗೂ ಅನೂಪ್ ಒಳಗೊಂಡಿರುವುದು ಗಡಿನಾಡಿಗೆ ಹೆಮ್ಮೆ ಎನಿಸಿದೆ.ಅಖಿಲ ಭಾರತ ಕನ್ನಡ ಮಕ್ಕಳ ಪ್ರಥಮ ಸಮ್ಮೇಳನದಲ್ಲಿ ಪ್ರತಿಭಾನ್ವಿತರನ್ನು ಪರಿಚಯಿಸುವಲ್ಲಿ ಕಾಸರಗೋಡಿನ ಸಾಹಿತ್ಯ-ಸಾಂಸ್ಕøತಿಕ ಸಂಸ್ಥೆಯಾದ ಸವಿ ಹೃದಯದ ಕವಿ ಮಿತ್ರರು ವೇದಿಕೆ ನೇತೃತ್ವ ವಹಿಸಿದ್ದು ಸೃಷ್ಟಿ ಹಾಗೂ ಅನೂಪ್ ಅವರಿಗೆ ವೇದಿಕೆ ಅಭಿನಂದನೆ ಸಲ್ಲಿಸಿದೆ.


