ಕಾಸರಗೋಡು: ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಸಾಮಥ್ರ್ಯ, ಸಮತೋಲನ, ಆರೋಗ್ಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದು. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವುದರಿಂದ ಮಾನಸಿಕ ಒತ್ತಡ ನಿವಾರಣೆಯ ಜತೆಯಲ್ಲಿ ಮನೋಬಲ ಹೆಚ್ಚಿಸಿಕೊಳ್ಳಲು ಸುಲಭವಾಗುತ್ತದೆ. ದೈಹಿಕ ಆರೋಗ್ಯದ ಜತೆಯಲ್ಲಿ ಜ್ಞಾನ ವಿಕಸನವು ಸಾಧ್ಯವಾಗುತ್ತದೆ. ಅಲ್ಲದೆ ಪರಸ್ಪರ ಪ್ರೀತಿ, ಗೌರವ, ಸಂಘಟನೆ ಸಾಧ್ಯ ಎಂದು ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಮಾರ್ ಹೇಳಿದರು.
ಅವರು ಕೋಟೆ ಕ್ಷತ್ರಿಯ ಯುವ ಸೇನೆ ಪ್ರಾಯೋಜಿಸಿದ ಹುಡುಗರ ಡಬಲ್ಸ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಬೀರಂತಬೈಲಿನ ಕೋಸ್ಮೋಸ್ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಭೆಯ ಮಾಜಿ ಸದಸ್ಯ ರಾಧಾಕೃಷ್ಣ ಅಣಂಗೂರು, ಕೋಟೆ ಕ್ಷತ್ರಿಯ ಯುವ ಸೇನೆ ಸಂಚಾಲಕರಾದ ಚಂದ್ರಕಾಂತ ನಾಗರಕಟ್ಟೆ, ವರ ಪ್ರಸಾದ್ ಕೋಟೆಕಣಿ ಮೊದಲಾದವರು ಉಪಸ್ಥಿತರಿದ್ದರು. ಮೋದಕ್ ರಾಜ್ ಸ್ವಾಗತಿಸಿದರು. ಪೃಥ್ವಿರಾಜ್ ವಂದಿಸಿದರು.


