ಪೆರ್ಲ:ಜಲಕ್ಷಾಮ ಎಂದಾಕ್ಷಣ ನಾವು ಮಳೆಯನ್ನು ದೂರುತ್ತೇವೆಯೇ ಹೊರತು ನಮ್ಮ ತಪ್ಪುಗಳ ಬಗ್ಗೆ ಚಿಂತಿಸುತ್ತಿಲ್ಲ.ಅದೇ ರೀತಿ ಪರಿಹಾರ ಕ್ರಮಗಳ ಅನುಷ್ಠಾನಕ್ಕೆ ಪ್ರಯತ್ನಿಸುತ್ತಿಲ್ಲ ಎಂದು ಬಹು ಮುಖ ಸಾಧಕ ಶ್ರೀಪಡ್ರೆ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪಡ್ರೆ ವಾಣೀನಗರ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲು ಮತ್ತು ಪ್ರಾಥಮಿಕ ಶಾಲೆಯ ಮಕ್ಕಳು ಮಕ್ಕಳ ದಿನಾಚರಣೆಯ ಅಂಗವಾಗಿ ರಾಜ್ಯ ವಿದ್ಯಾಭ್ಯಾಸ ಸಚಿವರ ನಿರ್ದೇಶಾನುಸಾರ ಹಮ್ಮಿಕೊಂಡ 'ಸಾಧಕರೊಂದಿಗೆ ಸಂವಾದ' ಕಾರ್ಯಕ್ರಮದ ಭಾಗವಾಗಿ ಶ್ರೀಪಡ್ರೆ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಲಮೂಲಗಳ ಸುಧಾರಣೆಯ ಬಹಳಷ್ಟು ಅವಕಾಶಗಳಿವೆ.ಸ್ವಾತಿ ಮಳೆ ಜಲಮರು ಪೂರಣದ ಕೊನೆಯ ಅವಕಾಶವಾಗಿದ್ದು ಪ್ರಯತ್ನಿಸಿದಲ್ಲಿ ಕ್ಷಾಮ ಸ್ಥಿತಿಯನ್ನು ಬಹುಮಟ್ಟಿಗೆ ತಡೆಯಬಹುದು.ಎತ್ತರದ ಗುಡ್ಡೆಯಲ್ಲಿ ಮಳೆ ನೀರಿಂಗಿಸಿ ತಳ ಭಾಗದಲ್ಲಿ ಸರಣಿ ಕಟ್ಟಗಳನ್ನು ಕಟ್ಟಿದಲ್ಲಿ ಮಣ್ಣಿನ ರಚನೆಗೆ ಹೊಂದಿಕೊಂಡು ಕಟ್ಟದ ಸುತ್ತಲಿನ 3ಕಿ.ಮೀ.ಸುತ್ತಳತೆಯಲ್ಲಿ ಪರೋಕ್ಷವಾಗಿ ಪ್ರಯೋಜನ ಸಿಗುವುದಲ್ಲದೆ ಜಲಮಟ್ಟಕ್ಕಿಂತಲೂ ಎತ್ತರದಲ್ಲಿನ ಜಲಮೂಲಗಳೂ ಸಮೃದ್ಧವಾಗುವುದು. ಎಂದು ನೀರ್ಚಾಲು, ಚಂಬಲ್ತಿಮಾರು, ಪೆರಡಾಲ ಭಾಗದ ತೋಡುಗಳಿಗೆ ಕಟ್ಟ ಕಟ್ಟುವುದರಿಂದ ಬಹಳಷ್ಟು ಎತ್ತರದ ಬದಿಯಡ್ಕ ಪೇಟೆ, ಆಸುಪಾಸು ಪ್ರದೇಶಗಳ ಜಲ ಮೂಲಗಳು ಸಮೃದ್ಧವಾಗಿದ್ಧವಾಗಿದ್ದವು.
ಜಲ ಸಮೃದ್ಧ ಪ್ರದೇಶವಾಗಿದ್ದ ಪಡ್ರೆಯ 200ಕ್ಕೂ ಹೆಚ್ಚು ಬಾವಿಗಳು ಸ್ವಾತಿ ಮಳೆಯ ಕೊರತೆಯಿಂದ ಕಳೆದ ಬೇಸಗೆಯಲ್ಲಿ ಬತ್ತಿದೆ.ಅದೇ ರೀತಿ ಕೇವಲ ಎರಡು ಗಂಟೆ ನಿರಂತರವಾಗಿ ಮಳೆಯಾದಲ್ಲಿ ತುಂಬಿ ಹರಿಯುವ ಸ್ವರ್ಗ ತೋಡು ಅಭೂತಪೂರ್ವ ಎಂಬಂತೆ ಈ ಬಾರಿ ಬತ್ತಿದೆ. ಪಡ್ರೆ ತೋಡಿನ ಅಲ್ಲಲ್ಲಿ ಈ ಹಿಂದೆ 42 ಕಟ್ಟಗಳನ್ನು ನಿರ್ಮಿಸಲಾಗುತ್ತಿದ್ದು ಇದೀಗ ಅವುಗಳ ಸಂಖ್ಯೆ 12ಕ್ಕೆ ಇಳಿದಿದೆ.ನೀರ ನೆಮ್ಮದಿಯತ್ತ ಪಡ್ರೆ ಜಲಯೋಧರ ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ಕಟ್ಟಗಳ ಹಬ್ಬ ಪ್ರತೀತಿಯಲ್ಲಿ ಪಡ್ರೆಯ ತೋಡುಗಳಿಗೆ 42 ಸರಣಿ ಕಟ್ಟಗಳನ್ನು ಕಟ್ಟಲು ನ.18ರಂದು ಚಾಲನೆ ನೀಡಲಾಗುತ್ತಿದ್ದು ಸ್ಥಳೀಯ ಎಲ್ಲಾ ಶಾಲೆಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಟ್ಟಗಳು, ನಿರ್ಮಾಣ ರೀತಿಯ ಬಗ್ಗೆ ಮಾಹಿತಿ ಪಡೆಯುವುದರ ಮೂಲಕ ಅವಕಾಶವನ್ನು ಸದುಪಯೋಗ ಪಡಿಸುವಂತೆ ವಿನಂತಿಸಿದರು.
ಶಿಕ್ಷಕ ಬಟ್ಯ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಪಡ್ರೆ ಅವರು ಪತ್ರಕರ್ತರಾಗಿ, ಪರಿಸರ ತಜ್ಞ, ಜಲ ತಜ್ಞ, ಹಲಸಿನ ಹಣ್ಣು ತಜ್ಞರಾಗಿ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.ಹನಿ ನೀರು ಉಳಿಸಿ ನೀರ ನೆಮ್ಮದಿ ತಂದುಕೊಳ್ಳಬಹುದು ಎಂಬುದನ್ನು ಸಾರ್ವತ್ರಿಕವಾಗಿ ತಿಳಿಸಿದ್ದಾರೆ.ಎಂಡೋಸಲ್ಫಾನ್ ವಿರುದ್ಧ ಧ್ವನಿಯಾಗಿ ಸಮಸ್ಯೆಗಳ ಬಗ್ಗೆ ತಿಳಿಸಿ ಹೋರಾಟದ ಹಾದಿ ಹಿಡಿದ ಬಹುಮುಖ ಸಾಧಕ ಎಂದರು.
ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಪ್ರಶಸ್ತಿ ಪುರಸ್ಕøತ ಕರಾಟೆ ಪಟು ಕೃತಿಕಾ ಕರಾಟೆ ಪ್ರದರ್ಶನ ನಡೆಸಿದರು.ಪ್ರೀತಿಕಾ ಕವನ ಹಾಡಿದರೆ, ದೀಕ್ಷಿತ್ ಯಕ್ಷಗಾನ ಅರ್ಥಗಾರಿಕೆಯಲ್ಲಿ ಮಿಂಚಿದರು. ಮುಖ್ಯ ಶಿಕ್ಷಕ ವಾಸುದೇವ ನಾಯಕ್ ವಂದಿಸಿದರು.ಶಿಕ್ಷಕ ಶೀನಪ್ಪ ಬಿ., ಶಿಕ್ಷಕಿಯರಾದ ಸರಸ್ವತಿ ಕೆ.ಎನ್., ಮರಿಯಾಂಬಿ ಸಹಕರಿಸಿದರು.ಅಜಿತ್ ಸ್ವರ್ಗ ಜೊತೆಗಿದ್ದರು.
ಅಭಿಮತ:
ಬಾವಿ ವರ್ಸಸ್ ಕೊಳವೆ ಬಾವಿ: ಕೇರಳದ ತೆರೆದ ಬಾವಿಗಳು ಬಹಳ ಸಾಂಧ್ರತೆಯಿಂದ ಕೂಡಿದೆ.ನಾವು ಬಾವಿ ನಿರ್ಮಾಣದ ಕಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು.ಬಾವಿಯ ಭಾಷೆ ನಮಗೆ ಅರ್ಥವಾದಲ್ಲಿ ಪ್ರತಿನಿತ್ಯ ಅದು ನಮ್ಮೊಂದಿಗೆ ಮಾತನಾಡುವುದು. ಮಳೆಗಾಲದಲ್ಲಿ ತುಂಬಿದ ಬಾವಿ ನಾನು ಸಮೃದ್ಧವಾಗಿದ್ದೇನೆ ಎಂದು ತಿಳಿಸಿದರೆ.ಮಳೆಗಾಲ ಕೊನೆಯಾದಂತೆ ಜಲ ಮಟ್ಟದಲ್ಲಿ ಇಳಿಕೆಯಾಗಿ ಎಪ್ರಿಲ್ ಮೇ ಸಮೀಪಿಸಿದಂತೆ ಎಚ್ಚರವಹಿಸಿ ಉಪಯೋಗಿಸು ಎಂಬ ಸಂದೇಶ ರವಾನಿಸುತ್ತದೆ.ಮಳೆಗಾಲದಲ್ಲಿ ಛಾವಣಿ ನೀರನ್ನು ಶೋಧಿಸಿ ಬಾವಿಗೆ ಇಂಗಿಸಿದಲ್ಲಿ ಜಲ ಮಟ್ಟ ಸುಧಾರಿಸುವುದು.
ಕೊಳವೆ ಬಾವಿಯ ಇತಿಹಾಸ ಕೇವಲ 50 ವರ್ಷ.ಅಗತ್ಯವೇ ಇಲ್ಲದ ಪ್ರದೇಶಗಳಲ್ಲೂ ಶೇ.70ರಷ್ಟು ಕೊಳವೆ ಬಾವಿ ತೋಡಲಾಗಿದೆ.ಕೊಳವೆ ಬಾವಿ ಕೇವಲ ಎರಡೇ ಎರಡು ಬಾರಿ ನೀರಿದೆ, ನೀರಿಲ್ಲ ಎಂದಷ್ಟೇ ನಮ್ಮಲ್ಲಿ ಮಾತನಾಡುವುದು.ಇದರ ನೀರನ್ನು ಕುಡಿಯಲು ಉಪಯೋಗಿಸುವುದು ಅಷ್ಟೊಂದು ಒಳ್ಳೆಯದಲ್ಲ.
ಸುರಂಗ:ಏಕೈಕ ಶುದ್ಧ ನೀರಿನ ಆಗರವಾದ ಸುರಂಗ ಕಾಸರಗೋಡಿನ ವೈಶಿಷ್ಟ್ಯ.ಸುರಂಗ ನಿರ್ಮಾಣ ಕಷ್ಟ ಹಾಗೂ ಸಾಹಸದ ಕೆಲಸ.ಸುರಂಗದ ನೀರು ಬಾವಿಗಳಲ್ಲಿ ನಿಕ್ಷಿಪ್ತವಾಗುವಂತಿದ್ದರೆ ಇದರಿಂದ ಅಂತರ್ಜಲ ಮಟ್ಟ ಸುಧಾರಿಸಲು ಸಾಧ್ಯ.
ಶ್ರೀಪಡ್ರೆ.
ಅಂತರಾಷ್ಟ್ರೀಯ ಜಲತಜ್ಞ



