ಕುಂಬಳೆ: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಆಯ್ಕೆಯಾದ ವಿದ್ಯಾರ್ಥಿಯ ಮನೆಗೆ ತೆರಳಿ ವಿದ್ಯಾರ್ಥಿಯ ಕೈಯಿಂದ ಗಿಡ ನೆಡಿಸಿ, ಆ ಮಗುವಿನ ಕೈಗೆ ಗಿಡ ಸಂರಕ್ಷಣೆಯ ಹೊಣೆಯನ್ನು ನೀಡುವ ಸಿರಿಚಂದನ ಕನ್ನಡ ಯುವಬಳಗದ ' ಕನ್ನಡ ಕಂದನ ಸಿರಿಚಂದನ ಗಿಡ' ವಿಶೇಷ ಯೋಜನೆಯು ಏಕ ಕಾಲದಲ್ಲಿ ಕನ್ನಡ ಜಾಗೃತಿಯನ್ನೂ ಪರಿಸರ ಪ್ರೀತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಹೆಚ್ಚು ಸಹಕಾರಿ ಎಂದು ವಿಶ್ರಾಂತ ಪ್ರಾಧ್ಯಾಪಕ ಪೆÇ್ರ. ಎ. ಶ್ರೀನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕುಂಬಳೆ, ನಾಯ್ಕಾಪು ಸಮೀಪದ ಮುಳಿಯಡ್ಕ ಯೋಗೀಶ್ ಮತ್ತು ಮಮತಾ ದಂಪತಿಗಳ ಪುತ್ರ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹತ್ತನೆಯ ತರಗತಿ ವಿದ್ಯಾರ್ಥಿ ರಾಕೇಶ್ ಅವರ ಮನೆ ಪರಿಸರದಲ್ಲಿ ಶನಿವಾರ ನಡೆದ ಸಿರಿಚಂದನ ಕನ್ನಡ ಯುವಬಳಗದ ಕನ್ನಡ ಕಂದನ ಸಿರಿಚಂದನ ಗಿಡ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಹಿಂದಿನ ಕಾಲದವರ ಪರಿಸರ ಪ್ರೀತಿ ಸಮಾಜ ಪ್ರೀತಿ ಉದಾತ್ತವಾದುದಾಗಿತ್ತು. ಅವರು ತಮ್ಮಷ್ಟೆ ಮಹತ್ವವನ್ನು ಪ್ರಕೃತಿಗೂ ಸಮಾಜಕ್ಕೂ ನೀಡುತ್ತಿದ್ದರು. ಆದುದರಿಂದ ಇಂದಿನ ಕಾಲದವರು ಸುಖದಿಂದ ಬದುಕುವಂತಾಗಿದೆ. ಈ ಪ್ರವಣತೆ ಮುಂದುವರಿಯಬೇಕು. ಅದಕ್ಕಾಗಿ ಇಂದಿನ ಜನತೆ ಸಾಮಾಜಿಕ ಕೈಂಕರ್ಯಗಳ ಜೊತೆಗೆ ಪ್ರಕೃತಿ ಪ್ರೀತಿಯನ್ನು ಬೆಳೆಸಬೇಕು. ವಿದ್ಯಾರ್ಥಿಗಳಲ್ಲಿ ಈ ಮನೋಭಾವ ಬೆಳೆಯಬೇಕು. ಪರಿಸರದ ಮೇಲಿನ ಪ್ರೀತಿ ಮನುಷ್ಯ ಬಾಂಧವ್ಯಗಳನ್ನು ಗಟ್ಟಿಗೊಳಿಸುವಲ್ಲಿಯೂ ಸಹಕಾರಿ. ಪ್ರಕೃತಿಯಿಂದ ಅಪಾರ ಸೌಲಭ್ಯಗಳನ್ನು ಪಡೆಯುತ್ತಿರುವ ನಾವು ಗಿಡಗಳನ್ನು ಬೆಳೆಸುವುದರ ಮೂಲಕ ಮುಂದಿನ ಪೀಳಿಗೆಯು ಸುಖದಿಂದ ಬಾಳಲು ಅನುವು ಮಾಡಿಕೊಡಬೇಕು ಎಂದು ಪೆÇ್ರ.ಎ. ಶ್ರೀನಾಥ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಗಿಡದ ಸಂರಕ್ಷಣೆ ವಹಿಸಿಕೊಂಡ ರಾಕೇಶ್ ಅವರಿಗೆ ಪ್ರಮಾಣಪತ್ರವನ್ನು ನೀಡಲಾಯಿತು.
ವಿದ್ಯಾರ್ಥಿ ರಾಕೇಶ್ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿರಿಚಂದನ ಕನ್ನಡ ಯುವಬಳಗದ ಉಪಾಧ್ಯಕ್ಷ ಹಾಗೂ ಅಧ್ಯಾಪಕ ಪ್ರಶಾಂತ ಹೊಳ್ಳ ಎನ್ ವಹಿಸಿದ್ದರು. ಮಾರ್ಗದರ್ಶಕ ಡಾ. ರತ್ನಾಕರ ಮಲ್ಲಮೂಲೆ, ಮನೆಯೊಡತಿ ಮಮತಾ ಈ ಸಂದರ್ಭದಲ್ಲಿ ಮಾತನಾಡಿದರು. ಕನ್ನಡ ಕಂದನ ಸಿರಿಚಂದನ ಗಿಡ ಯೋಜನೆ ಸಮಿತಿ ಸಂಚಾಲಕ ಕೀರ್ತನ್ ಕುಮಾರ್ ಸಿ ಎಚ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿ ರಾಕೇಶ್ ಸ್ವಾಗತಿಸಿ, ಸಮಿತಿಯ ಸಹಸಂಚಾಲಕ, ಅಧ್ಯಾಪಕ ಸುಜಿತ್ ಕುಮಾರ್ ಉಪ್ಪಳ ವಂದಿಸಿದರು. ಸಮಿತಿಯ ಸಹಸಂಚಾಲಕ ಹಾಗೂ ಅಧ್ಯಾಪಕನ ಪ್ರದೀಪ್ ಕುಮಾರ್ ಎಡನೀರು ಅವರು ಗಿಡವನ್ನು ಕೊಡುಗೆಯಾಗಿ ನೀಡಿದ್ದರು. ಬಳಗದ ಪದಾಧಿಕಾರಿಗಳಾದ ಮಹೇಶ್ ಏತಡ್ಕ, ಸೌಮ್ಯಾಪ್ರಸಾದ್, ಅಜಿತ್ ಕುಮಾರ್ ಬೋವಿಕ್ಕಾನ, ಕುಟುಂಬ ಸದಸ್ಯರಾದ ಶಶಿಕಲ, ವೇದವತಿ, ನೈತಿಕ್, ವಿಮಲ, ಶ್ರೀನಿವಾಸ, ನಾರಾಯಣ, ಅಭಿಷೇಕ್, ವಿಮಲ, ಪ್ರಕಾಶ, ಕಿಶೋರ, ಅಕಾಂಕ್ಷ, ಯಶಿಕ ಮುಂತಾದವರು ಉಪಸ್ಥಿತರಿದ್ದರು.

