ಕಾಸರಗೋಡು: ಬೇರೆ ದೇಶಗಳಿಂದ ಭಾರತಕ್ಕೆ ಬಂದ ನಿರಾಶ್ರಿತರಿಗೆ ಭಾರತದಲ್ಲಿ ಪೌರತ್ವ ನೀಡಲಾಗುತ್ತದೆ. ಆದರೆ ಅಕ್ರಮವಾಗಿ ಬಂದ ವಲಸಿಗರಿಗೆ ಪೌರತ್ವದ ಪ್ರಶ್ನೆಯೇ ಇಲ್ಲ. ಈ ನಿಟ್ಟಿನಲ್ಲಿ ಇದೀಗ ಕಾನೂನು ಪರವಾಗಿ ಸಮಗ್ರ ತಿದ್ದುಪಡಿ ಜಾರಿಗೊಳಿಸಲಾಗಿದೆ ಎಂದು ಬೆಂಗಳೂರಿನ ಉಪನ್ಯಾಸಕ ರಾಜೇಶ್ ಪದ್ಮಾರ್ ಹೇಳಿದ್ದಾರೆ.
ಕಾಸರಗೋಡು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ರವಿವಾರ ಅಪರಾಹ್ನ ಅವೇಕ್ ಕಾಸರಗೋಡು ಇದರ ನೇತೃತ್ವದಲ್ಲಿ ಜರಗಿದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.
ನೆಹರೂ ಅವರಿಂದ ಹಿಡಿದು ಈಗಿನ ವರೆಗಿನ ಎಲ್ಲ ಪ್ರಧಾನಮಂತ್ರಿಗಳು ಕಾನೂನು ತಿದ್ದುಪಡಿ ಮಾಡಬೇಕು ಎಂದು ಬಯಸಿದ್ದರು. ಆದರೆ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವ ಎದೆಗಾರಿಕೆ ತೋರಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆ ಮೂಲಕ ಅಂಗೀಕಾರ ಲಭಿಸಿದ ಈ ಮಸೂದೆಯನ್ನು ಇದೀಗ ಕಾನೂನಾಗಿ ಕಾರ್ಯಗತಗೊಳಿಸಲಾಗಿದೆ ಎಂದರವರು.
ಈ ತಿದ್ದುಪಡಿ ಕಾಯ್ದೆಯಿಂದ ಭಾರತದಲ್ಲಿ ಮುಸ್ಲಿಮರ ವಿಶ್ವಾಸಕ್ಕೆ ಯಾವುದೇ ಧಕ್ಕೆ ತರಲಾಗುತ್ತಿಲ್ಲ. ಆದರೆ ಬಾಂಗ್ಲಾದೇಶ, ಅಪಘಾನಿಸ್ಥಾನ, ಪಾಕಿಸ್ಥಾನಗಳಲ್ಲಿ ಹಿಂದುಗಳು ಆರಾಧನೆ ಮಾಡುವಂತಹ ದೇವರ ವಿಗ್ರಹಗಳನ್ನು ಕೆಡವಲಾಗುತ್ತಿದೆ. ನಮ್ಮ ದೇಶದಲ್ಲಿ ಎಲ್ಲ ಧರ್ಮ ಮತದವರಿಗೂ ಒಂದೇ ರೀತಿಯ ಕಾನೂನು ಜಾರಿಯಲ್ಲಿದೆ. ಆದರೆ ಪಾಕಿಸ್ಥಾನದಲ್ಲಿ ಹಿಂದುಗಳಿಗೆ ಬೇರೆ ಕಾನೂನಿದ್ದು, ಅವರನ್ನು ಮತಾಂತರಗೊಳಿಸಲಾಗುತ್ತಿದೆ. ಈಗಿನ ಬಾಂಗ್ಲಾದೇಶ, ಅಪಘಾನಿಸ್ಥಾನ, ಪಾಕಿಸ್ಥಾನದಲ್ಲಿರುವವರು ಭಾರತದವರೇ ಆಗಿದ್ದಾರೆ. ಆದರೆ ಈಗ ಅವರನ್ನು ಮುಸ್ಲಿಂ ಆಗಿ ಮತಾಂತರಗೊಳಿಸಲಾಗಿದೆ. ಪೌರತ್ವ ತಿದ್ದುಪಡಿ ಕಾನೂನು ಕುರಿತು ಚರ್ಚೆ ನಡೆಯುತ್ತಿದೆ. ಇಂತಹ ಚರ್ಚೆಗಳು ನಡೆಯಲೇಬೇಕು. ಹೀಗೆ ನಡೆದರೆ ಮಾತ್ರವೇ ಜನರಿಗೆ ಹೆಚ್ಚಿನ ತಿಳುವಳಿಕೆ ಮೂಡುತ್ತದೆ ಎಂದವರು ತಿಳಿಸಿದರು.
ಭಾರತವು ವಿಶಾಲ ರಾಷ್ಟ್ರವಾಗಿದೆ. ಇಲ್ಲಿ ಒಂದೇ ರೀತಿಯ ಜೀವನ ಪದ್ಧತಿಯಿದೆ. ವಿವಿಧತೆಯಲ್ಲಿ ಏಕತೆಯಿದೆ. ಜಗತ್ತಿನ ಇತರ ಹೆಚ್ಚಿನ ಎಲ್ಲ ದೇಶಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಅದೇ ರೀತಿಯಲ್ಲಿ ಭಾರತದಲ್ಲೂ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇದರಿಂದ ಇಲ್ಲಿನ ಮುಸ್ಲಿಮರಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಕೆಲವು ರಾಜಕೀಯ ಪಕ್ಷಗಳ ಷಡ್ಯಂತ್ರದಿಂದಾಗಿ ಇಡೀ ರಾಷ್ಟ್ರದಲ್ಲಿ ಹಿಂಸಾಚಾರ ನಡೆಸಲಾಗುತ್ತಿದೆ ಎಂದರು.
ಈ ತಿದ್ದುಪಡಿಯಲ್ಲಿ ಮುಸ್ಲಿಮರನ್ನು ಭಾರತದಿಂದ ಹೊರಹಾಕುವುದು ಎಂಬುದು ಇಲ್ಲವೇ ಇಲ್ಲ. ನಿರಾಶ್ರಿತರಾಗಿ ಭಾರತಕ್ಕೆ ಬರುವವರಿಗೆ ಇಲ್ಲಿ ಆಶ್ರಯ ನೀಡಬಾರದು ಎಂಬುದು ಕೆಲವು ರಾಜಕೀಯ ಪಕ್ಷಗಳ ಮತ್ತು ಮುಸ್ಲಿಂ ಮೂಲಭೂತವಾದಿಗಳ ನಿಲುವಾಗಿದ್ದರೆ, ಇಲ್ಲಿನ ಮುಸ್ಲಿಮರು ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವುದಕ್ಕೆ ಯಾವ ಕಾನೂನು ಜಾರಿಗೊಳಿಸಬೇಕು ಎಂಬುದನ್ನು ತಿಳಿಸಬೇಕಾಗಿದೆ ಎಂದು ರಾಜೇಶ್ ಪದ್ಮಾರ್ ಹೇಳಿದರು.
ಪಾಕಿಸ್ಥಾನದಲ್ಲಿ ಹಿಂದೂಗಳನ್ನು ಮತಾಂತರಗೊಳಿಸಲಾಗುತ್ತಿದೆ. ಜೊತೆಗೆ ಹಿಂದೂ ತರುಣಿಯರನ್ನು ಬ್ಲ್ಯಾಕ್‍ಮೇಲ್ ಮಾಡಿ ಅತ್ಯಾಚಾರ ನಡೆಸಿ ಮತಾಂತರ ಮಾಡಲಾಗುತ್ತಿದೆ. ಇದಕ್ಕೆ ಇಲ್ಲಿನ ಕೆಲವು ರಾಜಕೀಯ ಪಕ್ಷಗಳು ಏನು ಹೇಳುತ್ತವೆ ಎಂದವರು ಪ್ರಶ್ನಿಸಿದರು.
ಸಮಾರಂಭದಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ, ನ್ಯಾಯವಾದಿ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ಟೀಚರ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ನಾರಂಪಾಡಿ, ಸುಕುಮಾರ ಕುದ್ರೆಪ್ಪಾಡಿ ಮುಂತಾದವರು ಉಪಸ್ಥಿತರಿದ್ದರು.


