ಮುಂಬೈ: ಜಾಖರ್ಂಡ್ ವಿಧಾನಸಭಾ ಚುನಾವಣಾ ಫಲಿತಾಂಶ ಭಾರತೀಯ ಜನತಾ ಪಕ್ಷಕ್ಕೆ ನೀಡಿರುವ ಕಪಾಳ ಮೋಕ್ಷ ಎಂದು ಎನ್‍ಸಿಪಿ-ಶಿವಸೇನೆ ಬಣ್ಣಿಸಿವೆ.
ಬಿಜೆಪಿಯ ಮೇಲೆ ದೇಶದ ಜನರ ವಿಶ್ವಾಸ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಜಾಖರ್ಂಡ್ ಜನರು ಗರ್ವ ಭಂಗ ಮಾಡಿದ್ದಾರೆ ಎಂದು ಎನ್‍ಸಿಪಿ ವಕ್ತಾರ ನವಾಬ್ ಮಲಿಕ್ ಹೇಳಿದ್ದಾರೆ.
ಜಾಖರ್ಂಡ್‍ನ ಜನರು ಮೋದಿ, ಅಮಿತ್ ಶಾ ಅಹಂಕಾರಕ್ಕೆ ತಕ್ಕ ಪಾಠ ಕಲಿಸಿ, ಪ್ರಜಾಸತ್ತೆಯನ್ನು ಗೆಲ್ಲಿಸಿದ್ದಾರೆ ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.ಮಹಾರಾಷ್ಟ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು ವಿಫಲವಾಗಿದ್ದ ಬಿಜೆಪಿ ಮೇಲೆ ಜನರ ವಿಶ್ವಾಸ ಕ್ಷೀಣಿಸುತ್ತಿದೆ ಎಂದು ಶಿವಸೇನೆ ವಕ್ತಾರೆ ಮನೀಶಾ ಕಾಯಂಡೆ ಹೇಳಿದ್ದಾರೆ. ಅವರು(ಬಿಜೆಪಿ) ಅಭಿವೃದ್ಧಿ ರಾಜಕಾರಣ ಮಾತ್ರ ಎಂದು ಹೇಳಿಕೊಂಡು, ಭಾವನೆಗಳ ಪ್ರಚೋದಿಸುವ ಮೂಲಕ ದೇಶದ ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಪ್ರಯತ್ನವಾಗಿ. ಎನ್‍ಆರ್‍ಸಿಯಂತಹ ವಿಷಯಗಳನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಮನೀಷಾ ಹೇಳಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಎಷ್ಟೇ ಹೆಣಗಾಡಿದರೂ ಜಾಖರ್ಂಡ್‍ನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಶಿವಸೇನೆ ಹಿರಿಯ ನಾಯಕ ಸಂಜಯ್ ರಾವತ್ ಲೇವಡಿ ಮಾಡಿದ್ದಾರೆ.
ಜಾಖರ್ಂಡ್ ನ 81 ಕ್ಷೇತ್ರಗಳ ಪೈಕಿ ಕಾಂಗ್ರೆಸ್, ಜೆಎಂಎ ಮೈತ್ರಿಕೂಟ 45 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಆಡಳಿತರೂಢ ಬಿಜೆಪಿ ಮೈತ್ರಿಕೂಟ 26 ಸ್ಥಾನಗಳನ್ನು ಪಡೆಯುವ ಮೂಲಕ ತೀವ್ರ ಮುಖಭಂಗಕ್ಕೆ ಈಡಾಗಿದೆ.


