ಅತಿ ಕಡಿಮೆ ಅವಧಿಯ ಹಗಲು, ಅತಿ ಹೆಚ್ಚು ಅವಧಿಯ ರಾತ್ರಿ. ಭೂಗೋಲದ ಉತ್ತರಾರ್ಧದವರಿಗೆ ಇದು ಇವತ್ತಿನ (ಡಿಸೆಂಬರ್ 22) ದಿನವಿಶೇಷ. ನಾಳೆಯಿಂದ ಹಗಲಿನ ಅವಧಿ ಸ್ವಲ್ಪಸ್ವಲ್ಪವೇ ಹೆಚ್ಚಾಗುತ್ತ ಹೋಗಿ ಆರು ತಿಂಗಳ ಬಳಿಕ ಜೂನ್ 21ರಂದು ‘ಅತಿ ಹೆಚ್ಚು ಅವಧಿಯ ಹಗಲು, ಅತಿ ಕಡಿಮೆ ಅವಧಿಯ ರಾತ್ರಿ’ ಆಗುತ್ತದೆ. ಭೂಮಧ್ಯರೇಖೆಯಿಂದ ದೂರದಲ್ಲಿ, ಹೆಚ್ಚು ಉತ್ತರಕ್ಕಿದ್ದಷ್ಟೂ ಇದು ನಮಗೆ ಹೆಚ್ಚು ಅನುಭವಕ್ಕೆ ಬರುತ್ತದೆ. ಉದಾಹರಣೆಗೆ- ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ, ಕೆನಡಾದಲ್ಲಿ, ಯುರೋಪ್ ಖಂಡದ ನಾರ್ವೇ, ಸ್ವೀಡನ್, ಫಿನ್‌ಲ್ಯಾಂಡ್, ಐಸ್‌ಲ್ಯಾಂಡ್ ಮುಂತಾದ ದೇಶಗಳಲ್ಲಿ. ಇಲ್ಲಿ ಪ್ರಕೃತಿಯಲ್ಲೂ ಸ್ಪಷ್ಟ ಬದಲಾವಣೆಗಳಾಗುತ್ತವೆ. ಗಿಡಮರಗಳು ಎಲೆಗಳನ್ನೆಲ್ಲ ಮೊದಲು ಬಣ್ಣಬಣ್ಣದವಾಗಿಸಿ ಆಮೇಲೆ ಉದುರಿಸಿ ಬೋಳಾಗುತ್ತವೆ. ವಾತಾವರಣ ನಿಸ್ತೇಜವಾಗುತ್ತದೆ. ಚಳಿ, ಹಿಮಪಾತದ ಅಬ್ಬರವೆಲ್ಲ ಮುಗಿದ ಮೇಲೆ ಗಿಡಮರಗಳು ಮತ್ತೊಮ್ಮೆ ನಿಧಾನವಾಗಿ ಚಿಗುರತೊಡಗಿ ಬೇಸಗೆಯಲ್ಲಿ ಎಲ್ಲೆಲ್ಲೂ ಹಸುರು ವನರಾಜಿಯಾಗುತ್ತದೆ.
ಭೂಮಧ್ಯರೇಖೆಗೆ ಹತ್ತಿರವಿರುವ ಪ್ರದೇಶಗಳಲ್ಲಾದರೆ ಹಗಲು ಮತ್ತು ರಾತ್ರಿಯ ಅವಧಿ ವರ್ಷದುದ್ದಕ್ಕೂ ಹೆಚ್ಚೂಕಡಿಮೆ ಒಂದೇ ರೀತಿ ಇರುತ್ತದೆ. ವಾತಾವರಣದಲ್ಲಿ, ಮುಖ್ಯವಾಗಿ ಉಷ್ಣತೆಯಲ್ಲಿ ಏರುಪೇರು ಕಡಿಮೆ. ಗಿಡಮರಗಳು ನಿತ್ಯಹರಿದ್ವರ್ಣ. ಹಾಗಾಗಿಯೇ ದಕ್ಷಿಣ ಭಾರತದಲ್ಲಿ, ನಮ್ಮ ಕರ್ನಾಟಕದಲ್ಲಿ, ಹಗಲು-ರಾತ್ರಿ ಅವಧಿ ವ್ಯತ್ಯಾಸವು ಅಷ್ಟೇನೂ ಅನುಭವಕ್ಕೆ ಬರುವಂಥ ಬದಲಾವಣೆ ಅಲ್ಲ. ಸಮಾಜ ಪರಿಚಯ ಪಠ್ಯಪುಸ್ತಕದಲ್ಲಷ್ಟೇ ‘ಡಿಸೆಂಬರ್ 22ರಂದು ವರ್ಷದ ಅತಿ ಚಿಕ್ಕ ಹಗಲು ಅತಿ ದೊಡ್ಡ ರಾತ್ರಿ’ ಎಂದು ಓದಿಕೊಂಡು ಪರೀಕ್ಷೆ ಆದ ಮೇಲೆ ಮರೆತಿರುತ್ತೇವೆ. ಇನ್ನೂ ಒಂದು ಕಾರಣವೆಂದರೆ ನಾವು ಸಾಂಪ್ರದಾಯಿಕವಾಗಿ ಮಕರ ಸಂಕ್ರಾಂತಿಯಂದು ಉತ್ತರಾಯಣ ಆರಂಭ ಎನ್ನುತ್ತೇವೆ. ಮುಂದೆ ಕೆಲವೇ ದಿನಗಳಲ್ಲಿ ಬರುವ ರಥಸಪ್ತಮಿಯಂದು ಸೂರ್ಯ ತನ್ನ ಪಥವನ್ನು ದಕ್ಷಿಣದಿಂದ ಉತ್ತರಕ್ಕೆ ಬದಲಿಸುತ್ತಾನೆ ಎಂದು ವ್ಯಾಖ್ಯಾನಿಸುತ್ತೇವೆ. ಮಕರ ಸಂಕ್ರಾಂತಿ ಮತ್ತು ರಥಸಪ್ತಮಿ ನಮಗೆ ಹಬ್ಬಗಳಾಗುತ್ತವೆ. ಸಂಕ್ರಾಂತಿಯಾದರೋ ಸೌರಮಾನವಾದ್ದರಿಂದ ಹೆಚ್ಚೂಕಡಿಮೆ ಜನವರಿ 14ರ ಆಸುಪಾಸಿನಲ್ಲಿ ಬರುತ್ತದೆ. ರಥಸಪ್ತಮಿ ಪಕ್ಕಾ ಚಾಂದ್ರಮಾನ ಲೆಕ್ಕದ್ದಾದ್ದರಿಂದ ಇಂಥದೇ ದಿನಾಂಕದಂದು ಬರುತ್ತದೆ ಎಂದು ಕೂಡ ಹೇಳಲಿಕ್ಕಾಗುವುದಿಲ್ಲ.
ಆದರೆ ವೈಜ್ಞಾನಿಕವಾಗಿ ನಿಜವಾದ ‘ಉತ್ತರಾಯಣ’ ಆರಂಭವಾಗುವುದು ಸಾಮಾನ್ಯವಾಗಿ ಡಿಸೆಂಬರ್ 22ರಂದೇ. ಸಾಮಾನ್ಯವಾಗಿ ಎಂದಿದ್ದೇಕೆಂದರೆ ಕೆಲವೊಮ್ಮೆ ಅದು ಡಿಸೆಂಬರ್ 21ರಂದು ಆಗಬಹುದು. ತೀರ ಅಪರೂಪಕ್ಕೆ ಸ್ವಲ್ಪ ಬೇಗ ಡಿಸೆಂಬರ್ 20ರಂದು (2080ರಲ್ಲಿ ಹಾಗೆ ಆಗಲಿದೆಯಂತೆ), ಮತ್ತೂ ಅಪರೂಪಕ್ಕೊಮ್ಮೆ ಸ್ವಲ್ಪ ತಡವಾಗಿ ಡಿಸೆಂಬರ್ 23ರಂದು (2303ರಲ್ಲಿ ಹಾಗೆ ಆಗುವುದಿದೆಯಂತೆ) ಆಗಬಹುದು. ಒಟ್ಟಾರೆಯಾಗಿ ಈ ಲೇಖನದ ಮಟ್ಟಿಗೆ ಗೊಂದಲ ಮೂಡದಂತೆ ಡಿಸೆಂಬರ್ 22 ಎಂದೇ ಇಟ್ಟುಕೊಳ್ಳೋಣ. ನಿರ್ದಿಷ್ಟ ದಿನಾಂಕವಷ್ಟೇ ಅಲ್ಲ, ಆ ದಿನದಂದು ನಿರ್ದಿಷ್ಟವಾದೊಂದು ಸಮಯದಲ್ಲಿ ಉತ್ತರಾಯಣ ಆರಂಭ ಪ್ರಕ್ರಿಯೆ ಸಂಭವಿಸುತ್ತದೆ. ಇದನ್ನು ಅರ್ಥಮಾಡಿಕೊಳ್ಳಲಿಕ್ಕೆ ಎರಡು ಪ್ರಾಥಮಿಕ ಸಂಗತಿಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಒಂದನೆಯದಾಗಿ ಭೂಮಿಯು ತನ್ನದೇ ಅಕ್ಷಕ್ಕೆ 23.5 ಡಿಗ್ರಿಗಳಷ್ಟು ವಾಲಿಕೊಂಡು ಇರುತ್ತದೆ ಎಂಬುದು, ಮತ್ತು, ಹಾಗೆ ವಾಲಿಕೊಂಡಿರುವಾಗಲೇ ಭೂಮಿಯು ಸೂರ್ಯನ ಸುತ್ತ ಪ್ರದಕ್ಷಿಣೆ ಬರುತ್ತದೆ ಎಂಬುದು. ಯಾವ ಕ್ಷಣದಲ್ಲಿ ಭೂಮಿಯ ಉತ್ತರ ಧ್ರುವವು ಸೂರ್ಯನಿಂದ ಅತಿ ಹೆಚ್ಚು ದೂರದಲ್ಲಿರುತ್ತದೋ ಅದೇ ಉತ್ತರಾಯಣ ಆರಂಭಕಾಲ. ಆಗ ಸೂರ್ಯನ ಬೆಳಕು ಮತ್ತು ಶಾಖ ಅತಿಹೆಚ್ಚು ಸಿಗುವುದು ಭೂಗೋಲದ ದಕ್ಷಿಣಾರ್ಧದಲ್ಲಿರುವ ಮಕರ ವೃತ್ತ ಪ್ರದೇಶಕ್ಕೆ. ಈ ವರ್ಷ 2019ರಲ್ಲಿ ಇಂತಹ ಕ್ಷಣ ಬರುವುದು UTC (Universal Time Coordinated) ಕಾಲಮಾಪನ ಪ್ರಕಾರ ಡಿಸೆಂಬರ್ 22ರಂದು ಭಾನುವಾರ ಬೆಳಗಿನ ಜಾವ 4:19ಕ್ಕೆ. ಆಗ ಭಾರತೀಯ ಸಮಯ ಡಿಸೆಂಬರ್ 22ರಂದು ಬೆಳಗ್ಗೆ 9:49 ಆಗಿರುತ್ತದೆ. ಇಲ್ಲಿ ವಾಷಿಂಗ್ಟನ್ ಡಿಸಿ.ಯಲ್ಲಿ ಆಗಿನ್ನೂ ಶನಿವಾರ ಡಿಸೆಂಬರ್ 21ರಂದು ರಾತ್ರಿ 11:19. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಜಗತ್ತಿನಾದ್ಯಂತ ಏಕಕಾಲಕ್ಕೆ ನಡೆಯುವ ಪ್ರಕ್ರಿಯೆ ಇದು. ಸ್ಥಳೀಯ ಸಮಯ ಎಷ್ಟು ಎಂದು ಗುರುತಿಸಿಕೊಳ್ಳಬೇಕು ಅಷ್ಟೇ.
ಆಗಲೇ ಹೇಳಿದಂತೆ ಇದು ಭೂಗೋಲದ ಉತ್ತರಾರ್ಧದಲ್ಲಿ, ಹೆಚ್ಚುಹೆಚ್ಚು ಉತ್ತರಕ್ಕಿರುವ ಪ್ರದೇಶಗಳವರಿಗೆ ಹೆಚ್ಚು ಅನ್ವಯಿಸುವ ವಿಚಾರ. ಹಗಲಿನ ಅವಧಿ ಕಡಿಮೆಯಾಗುತ್ತ ಬರುವುದು, ಡಿಸೆಂಬರ್ 22ರಂದು ಅತಿ ಕಡಿಮೆಯಾಗುವುದು, ಆಮೇಲೆ ಕ್ರಮೇಣ ಹೆಚ್ಚಾಗತೊಡಗುವುದು ಇಲ್ಲಿ ವಾರ್ಷಿಕ ವಿದ್ಯಮಾನ. ಎಷ್ಟು ವ್ಯತ್ಯಾಸವಾಗುತ್ತದೆಂಬ ಕಲ್ಪನೆ ಬೇಕಾದರೆ- ನಮ್ಮ ವಾಷಿಂಗ್ಟನ್ ಡಿಸಿ.ಯಲ್ಲಿ ಈಗ ದಿನದ 24 ಗಂಟೆಗಳಲ್ಲಿ ಒಟ್ಟು ಸುಮಾರು ಒಂಬತ್ತೂಕಾಲು ಗಂಟೆ ಅವಧಿಯಷ್ಟು ಮಾತ್ರ (ಜೂನ್‌ನಲ್ಲಾದರೆ ಸುಮಾರು 15 ಗಂಟೆಗಳಿಗೂ ಹೆಚ್ಚು ಅವಧಿ) ಹಗಲು. ಸಂಜೆ ನಾಲ್ಕೂವರೆಗೆಲ್ಲ ಕತ್ತಲಾಗುತ್ತದೆ. ಇಲ್ಲಿಗಿಂತಲೂ ಹೆಚ್ಚು ವ್ಯತ್ಯಾಸ ಗೊತ್ತಾಗುವುದು ಫಿನ್‌ಲ್ಯಾಂಡ್‌ನ ಹೆಲ್ಸಿಂಕಿಯಲ್ಲಿ. ಅಲ್ಲೀಗ ದಿನಕ್ಕೆ ಒಟ್ಟು ಸುಮಾರು ಐದುಮುಕ್ಕಾಲು ಗಂಟೆಗಳಷ್ಟೇ ಬೆಳಕು, ಮತ್ತೆಲ್ಲ ಕತ್ತಲೆ. ಅಲಾಸ್ಕಾದ ಬಾರೊ ಎಂಬಲ್ಲಂತೂ ನವೆಂಬರ್ ತಿಂಗಳ ಬಳಿಕ ಸೂರ್ಯೋದಯವೇ ಆಗಿಲ್ಲ. ಮುಂದಿನ ಸೂರ್ಯೋದಯಕ್ಕೆ ಜನವರಿ 22ರವರೆಗೆ ಕಾಯಬೇಕು. ಉತ್ತರ ಧ್ರುವದಲ್ಲಿ ಕೇಳಲೇಬೇಡಿ, ಸುಮಾರು ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಸೂರ್ಯದರ್ಶನವೇ ಇಲ್ಲ!
ಡಿಸೆಂಬರ್ 22ರ ಈ ವಿಶೇಷತೆಗೆ ಇಂಗ್ಲಿಷ್‌ನಲ್ಲಿ Winter Solstice ಎಂದು ಹೆಸರು. ಈ ಪದಮೂಲವೂ ಸ್ವಾರಸ್ಯಕರವಾದುದೇ. ಲ್ಯಾಟಿನ್ ಭಾಷೆಯಲ್ಲಿ sol ಎಂದರೆ ಸೂರ್ಯ (solar ಎಂದರೆ ಸೂರ್ಯನಿಗೆ ಸಂಬಂಧಿಸಿದ್ದು ಅಥವಾ ಸೂರ್ಯನದು). ಅದಕ್ಕೆ stitium ಎಂಬ ಪದ ‘ನಿಂತಿರುವುದು’ ಎಂಬ ಅರ್ಥದ್ದು ಸೇರಿ ಆಮೇಲೆ ಆ ಸಂಯುಕ್ತಪದ ಹಾಗೆಯೇ ಇಂಗ್ಲಿಷ್‌ಗೆ ರೂಪಾಂತರಗೊಂಡು Solstice ಆಗಿದೆ. ಬಹುಶಃ ಸಂಸ್ಕೃತದಲ್ಲಿ ಇದಕ್ಕೆ ಸಮಾನಾರ್ಥಕವಾಗಿ ‘ಸೂರ್ಯಸ್ತಂಭನ’ ಎನ್ನಬಹುದೇನೋ. ಪ್ರಾಚೀನ ರೋಮನ್ನರ ಕಲ್ಪನೆಯೇನಿತ್ತೆಂದರೆ ಡಿಸೆಂಬರ್ 22ರಂದು ಮತ್ತು ಆಸುಪಾಸಿನ ಕೆಲ ದಿನಗಳಲ್ಲಿ ಮಧ್ಯಾಹ್ನವಾದರೂ ಸೂರ್ಯನು ಆಕಾಶದಲ್ಲಿ ಮಾಮೂಲಿನಂತೆ ಸಂಚರಿಸದೆ ದೂರದಲ್ಲೆಲ್ಲೋ ಸ್ತಬ್ಧನಾಗಿ ನಿಂತುಬಿಟ್ಟನೇನೋ ಎಂದು ಅನಿಸುತ್ತದೆ. ಆಗೆಲ್ಲ ‘ಚಪ್ಪಟೆಯಾಗಿರುವ ಭೂಮಿ ಸ್ಥಿರವಾಗಿ ಒಂದುಕಡೆ ನಿಂತಿದೆ. ಚೆಂಡಿನಂತಿರುವ ಸೂರ್ಯ ಪ್ರತಿದಿನವೂ ಆಕಾಶದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಾನೆ’ ಎಂಬ ನಂಬಿಕೆಯೇ ಇದ್ದದ್ದು ತಾನೆ? ವರ್ಷದ ಬೇರೆ ದಿನಗಳಲ್ಲೆಲ್ಲ ಸೂರ್ಯನ ಚಲನೆ ಗೊತ್ತಾಗುತ್ತಿತ್ತು. ಡಿಸೆಂಬರ್ ಕೊನೆಯೆನ್ನುವಾಗ ಸೂರ್ಯನು ದಣಿದು ನಿಂತನೇನೋ ಅಂತ ಜನರು ಅಂದುಕೊಂಡಿರಬೇಕು.
ಈ ನಂಬಿಕೆಯೇ ‘ವಿಂಟರ್ ಸೊಲ್ಸ್‌ಟೈಸ್’ಅನ್ನು ವಿಶೇಷ ದಿನವಾಗಿ ಆಚರಿಸುವುದಕ್ಕೆ ಆ ಕಾಲದ ಜನರಿಗೆ ಪ್ರೇರಣೆಯಾಗಿರಬಹುದು. ಆ ಕಾಲ ಅಂದರೆ ಕೇವಲ ಶತಮಾನಗಳ ಹಿಂದೆಯಲ್ಲ, ಶಿಲಾಯುಗದಲ್ಲಿ, ಕ್ರಿಸ್ತಪೂರ್ವ ಸುಮಾರು 10000 ವರ್ಷಗಳಷ್ಟು ಹಿಂದೆ! ಐರ್‌ಲ್ಯಾಂಡ್‌ನಲ್ಲಿರುವ ನ್ಯೂಗ್ರಾಂಜ್ ಎಂಬ ಶಿಲಾಸ್ಮಾರಕ ಮತ್ತು ಸ್ಕಾಟ್‌ಲ್ಯಾಂಡ್‌ನಲ್ಲಿರುವ ಮೇಶೋ ಎಂಬ ಶಿಲಾಸ್ಮಾರಕಗಳಲ್ಲಿ ವಿಂಟರ್ ಸೊಲ್ಸ್‌ಟೈಸ್ ದಿನದಂದು ಸೂರ್ಯೋದಯದ ವೇಳೆ ಸೂರ್ಯಕಿರಣಗಳು ತೂರಿ ಬರುವುದಕ್ಕೆ ಅನುವಾಗುವಂತೆ ಕಿಂಡಿಗಳಿರುವುದು, ಹಾಗೆಯೇ ಇಂಗ್ಲೇಂಡ್‌ನಲ್ಲಿ ಸ್ಟೋನ್‌ಹೆಂಜ್ ಎಂಬ ಪ್ರಾಚೀನ ಶಿಲಾಸ್ಮಾರಕದಲ್ಲಿ ವಿಂಟರ್ ಸೊಲ್ಸ್‌ಟೈಸ್ ದಿನದಂದು ಸೂರ್ಯಾಸ್ತದ ವೇಳೆ ಸೂರ್ಯಕಿರಣಗಳು ತೂರಿ ಬರುವುದಕ್ಕೆ ಅನುವಾಗುವಂತೆ ಕಿಂಡಿಗಳಿರುವುದು ಇದಕ್ಕೆ ಸಾಕ್ಷಿ. ಸೂರ್ಯಕಿರಣಗಳ ಸಮ್ಮುಖದಲ್ಲಿ ‘ಪಿತೃಗಳ ಆರಾಧನೆ’ಯಂತಹ ವಿಧಿವಿಧಾನಗಳನ್ನೇನೋ ಆ ಜನರು ಆಚರಿಸುತ್ತಿದ್ದರಿರಬಹುದು ಎಂದು ಇತಿಹಾಸಜ್ಞರ, ಉತ್ಖನನಕಾರರ ಅಭಿಪ್ರಾಯ. ಈಗ ಪ್ರವಾಸಿಗರು ಡಿಸೆಂಬರ್ 22ರಂದು ಸೂರ್ಯಕಿರಣಗಳನ್ನು ನೋಡಲಿಕ್ಕೆಂದೇ ಈ ಶಿಲಾಸ್ಮಾರಕಗಳಿಗೆ ಲಗ್ಗೆಯಿಡುತ್ತಾರೆ. ನ್ಯೂಗ್ರಾಂಜ್‌ನಲ್ಲಿ ದೇವಾಲಯದಂಥ ಒಂದು ಕಟ್ಟಡ, ಅದರೊಳಗೆ ಒಂದು ಗೋರಿ. ಸೂರ್ಯೋದಯದ ವೇಳೆ ಕಿಂಡಿಯಿಂದ ಬರುವ ಕಿರಣಗಳು ಕಟ್ಟಡದೊಳಗೆಲ್ಲ ತುಂಬಿ ಸುಮಾರು ಹದಿನೈದು ನಿಮಿಷಗಳವರೆಗೆ ಸೂರ್ಯಜ್ಯೋತಿಯ ಸುಂದರ ವಿನ್ಯಾಸ ಮೂಡುತ್ತದೆ. ಆ ಸಂದರ್ಭದಲ್ಲಿ ದೇವಾಲಯದ ಒಳಗೆ ಕೆಲವೇ ಜನರಿಗೆ ಸ್ಥಳಾವಕಾಶವಾದ್ದರಿಂದ ನೋಂದಾಯಿತ ಪ್ರವಾಸಿಗರ ಹೆಸರುಗಳನ್ನು ಲಾಟರಿ ಎತ್ತಿ ಅದೃಷ್ಟಶಾಲಿಗಳನ್ನು ನಿರ್ಧರಿಸಿ ಒಳಗೆ ಬಿಡುತ್ತಾರೆ.
ಪ್ರಾಚೀನ ರೋಮನ್ನರು ಆಚರಿಸುತ್ತಿದ್ದ ‘ಸ್ಯಾಟರ್ನಾಲಿಯಾ’ ಹಬ್ಬವು ವಾರವಿಡೀ ನಡೆದು ಸೊಲ್ಸ್‌ಟೈಸ್ ದಿನದಂದು ಸಮಾಪ್ತಿಯಾಗುತ್ತಿತ್ತಂತೆ. ಕೃಷಿಯ ದೇವತೆ ಸ್ಯಾಟರ್ನ್‌ನ ಗೌರವಕ್ಕೆಂದು ಆ ಹಬ್ಬ. ಯಥೇಚ್ಛ ತಿಂಡಿತಿನಸುಗಳು, ಪಾನಗೋಷ್ಠಿಗಳು. ಆ ವಾರದ ಮಟ್ಟಿಗೆ ಸಮಾಜವ್ಯವಸ್ಥೆಯೂ ತಲೆಕೆಳಗಾಗುತ್ತಿತ್ತು- ಅಂದರೆ ಆಳುಗಳು ಒಡೆಯರಾಗುತ್ತಿದ್ದರು, ರೈತರು ನಗರಪ್ರಮುಖರಾಗುತ್ತಿದ್ದರು. ಮುಖವಾಡಗಳನ್ನು ಧರಿಸಿ, ವೇಷಭೂಷಣಗಳನ್ನು ತೊಟ್ಟು ಈ ತಾತ್ಕಾಲಿಕ ಬದಲಾವಣೆಗಳು ಆಗುತ್ತಿದ್ದವು. ಈಗಿನ ಇರಾನ್ ಪ್ರದೇಶದಲ್ಲಿ ಇಸ್ಲಾಂ ಧರ್ಮ ಬೇರೂರುವುದಕ್ಕೆ ಮುಂಚೆ, ಪರ್ಶಿಯನ್ ಜನರು ವಿಂಟರ್ ಸೊಲ್ಸ್‌ಟೈಸ್ ದಿನದಂದು ‘ಯಾಲ್ಡಾ’ ಹಬ್ಬವನ್ನು ಆಚರಿಸುತ್ತಿದ್ದರಂತೆ. ಝೊರಾಷ್ಟ್ರಿಯನ್ ಧರ್ಮದಲ್ಲಿ ಬೆಳಕಿನ ದೇವತೆ ‘ಮಿತ್ರ’ನ ಜನ್ಮದಿನವೇ ಆ ಹಬ್ಬ. ಇಲ್ಲೊಂದು ಅದ್ಭುತ ಸಾಮ್ಯವನ್ನು ನಾವು ಗಮನಿಸಬಹುದು. ಸಂಸ್ಕೃತದಲ್ಲಿ ಸೂರ್ಯನ ಇನ್ನೊಂದು ಹೆಸರು ‘ಮಿತ್ರ’ ಎಂದೇ ಇರುವುದು. ಸೂರ್ಯನಮಸ್ಕಾರದಲ್ಲಿ ಮೊತ್ತಮೊದಲನೆಯದೇ ‘ಓಂ ಮಿತ್ರಾಯ ನಮಃ’. ಅಂದರೆ ಸನಾತನ ಭಾರತೀಯ ಸಂಸ್ಕೃತಿಯಲ್ಲಿರುವ ‘ಮಿತ್ರ’ ಮತ್ತು ಝೊರಾಷ್ಟ್ರಿಯನ್ ‘ಮಿತ್ರ’ ಬೇರೆಬೇರೆಯಲ್ಲ ಒಬ್ಬನೇ!
ವಿಂಟರ್ ಸೊಲ್ಸ್‌ಟೈಸ್‌ನ ದೀರ್ಘರಾತ್ರಿಯಲ್ಲಿ ತಾಮಸ ಶಕ್ತಿಗಳು ಸಂಚರಿಸುತ್ತಿರುತ್ತವೆ, ಅವುಗಳ ವಿನಾಶಕ್ಕಾಗಿ ಮಿತ್ರ ಹುಟ್ಟಿ ಬರುತ್ತಾನೆ ಎಂದು ಪರ್ಶಿಯನ್ನರ ನಂಬಿಕೆ. ಕ್ಷುದ್ರಶಕ್ತಿಗಳು ಆಕ್ರಮಿಸದಂತೆ ಜನರು ಆ ರಾತ್ರಿಯಿಡೀ ಜಾಗರಣೆಯಿದ್ದು ತಿಂಡಿತೀರ್ಥ ಸಮಾರಾಧನೆ, ಮಾತು-ಹರಟೆ, ಗೀತಗಾಯನ ಗೋಷ್ಠಿಗಳಿಂದ ಕಾಲಕ್ಷೇಪ ಮಾಡುವುದಿತ್ತಂತೆ. ವಿಂಟರ್ ಸೊಲ್ಸ್‌ಟೈಸ್‌ನ ದೀರ್ಘ ರಾತ್ರಿಯಲ್ಲಿ ಕ್ಷುದ್ರಶಕ್ತಿಗಳು ಸಂಚರಿಸುತ್ತವೆಯೆಂಬ ನಂಬಿಕೆ ಸೆಲ್ಟಿಕ್ ಮತ್ತು ಜರ್ಮನಿಯ ಜನಪದಗಳಲ್ಲೂ ಇದೆಯಂತೆ. ಸ್ಕಾಂಡಿನೇವಿಯಾದಲ್ಲಿ ಬೆಳಕಿನ ಹಬ್ಬ ‘ಸೈಂಟ್ ಲೂಸಿಯಾ’ ದಿನಾಚರಣೆ, ಚೈನಾದಲ್ಲಿ ಸುಗ್ಗಿಯಾಚರಣೆಯ ‘ಡೊಂಗ್-ಝಿ’ ಹಬ್ಬ, ವಾಂಕ್ಯುವರ್‌ನಲ್ಲಿ ಲಾಂಟರ್ನ್‌ಗಳನ್ನು ಉರಿಸಿ ಆಚರಿಸುವ ಹಬ್ಬ, ಜಪಾನ್‌ನಲ್ಲಿ ಆಚರಿಸುವ ಕೃಷಿ ಹಬ್ಬ ‘ಟೋಜಿ’, ಅಮೆರಿಕದ ಅರಿಝೋನಾ ಸಂಸ್ಥಾನದಲ್ಲಿ ಹೋಪಿ ಮೂಲನಿವಾಸಿಗಳು ಆಚರಿಸುವ ‘ಸೊಯಲ್’ ಹಬ್ಬ, ನ್ಯೂ ಮೆಕ್ಸಿಕೊ ಸಂಸ್ಥಾನದಲ್ಲಿ ಝುನಿ ಮೂಲನಿವಾಸಿಗಳು ಆಚರಿಸುವ ‘ಶಲಾಕೊ’ ನೃತ್ಯ ಹಬ್ಬ, ಇಂಗ್ಲೇಂಡ್‌ನಲ್ಲಿ ನಡೆಯುವ ‘ಬರ್ನಿಂಗ್ ಆಫ್ ಕ್ಲಾಕ್ಸ್’ ಹಬ್ಬ - ಇವೆಲ್ಲವೂ ವಿಂಟರ್ ಸೊಲ್ಸ್‌ಟೈಸ್ ವಿಶೇಷಗಳೇ. ಕಷ್ಟದ ದಿನಗಳು ಮುಗಿದವು, ಇನ್ನುಮುಂದೆ ಒಳ್ಳೆಯ ದಿನಗಳು ಬರಲಿವೆ ಎಂಬ ಹಿಗ್ಗಿನಿಂದ ಜನರೆಲ್ಲ ಸೇರಿ ಅನುಭವಿಸುವ ಸಂಭ್ರಮದವೇ.
ವಿಂಟರ್ ಸೊಲ್ಸ್‌ಟೈಸ್‌ಗೆ ಸಂಬಂಧಿಸಿದಂತೆ ಪ್ರಾಚೀನ ಕಾಲದಲ್ಲಿದ್ದ, ಬಹುಶಃ ಈಗಲೂ ಕೆಲವೆಡೆ ಪ್ರಚಲಿತದಲ್ಲಿರುವ, ನಂಬಿಕೆಗಳೂ ಭಲೇ ಸ್ವಾರಸ್ಯಕರವಾಗಿವೆ. ಸೆಲ್ಟಿಕ್ ಪಂಥದವರ ನಂಬಿಕೆಯ ಪ್ರಕಾರ ಓಕ್ ಕಿಂಗ್ ಮತ್ತು ಹೋಲ್ಲಿ ಕಿಂಗ್ ಎಂಬ ಇಬ್ಬರು ದೇವತೆಗಳು ಯಾವಾಗಲೂ ಪರಸ್ಪರ ಕಾದಾಟದಲ್ಲಿರುತ್ತಾರೆ. ವಿಂಟರ್ ಸೊಲ್ಸ್‌ಟೈಸ್‌ನಂದು ಹೋಲ್ಲಿ ಕಿಂಗ್‌ನ ಆರು ತಿಂಗಳ ಅಧಿಕಾರ ಪರಮಾವಧಿ ಹಂತ ತಲುಪಿ ಅಂತ್ಯಗೊಳ್ಳುತ್ತದೆ. ಮಾರನೆಯ ದಿನದಿಂದ ಆರು ತಿಂಗಳ ಕಾಲ ಓಕ್ ಕಿಂಗ್‌ನ ಅಧಿಕಾರ. ಮತ್ತೆ ಜೂನ್‌ನಲ್ಲಿ ಅದೇ ಪುನರಾವರ್ತನೆ. ಬೇಸಗೆಯ ಸುಖದ ದಿನಗಳಲ್ಲಿ ಮುಂದೆ ಕಷ್ಟದ ದಿನಗಳೂ ಬರಲಿವೆ ಎಂಬ ಎಚ್ಚರಿಕೆ, ಚಳಿಗಾಲದ ಕಷ್ಟದ ದಿನಗಳಲ್ಲಿ ಮುಂದೆ ಒಳ್ಳೆಯ ದಿನಗಳೂ ಬರಲಿವೆ ಎಂಬ ಆಶಾಭಾವ ಇಟ್ಟುಕೊಳ್ಳಲಿಕ್ಕೆ ಇದು ನೆರವಾಗುತ್ತಿತ್ತು. ಗ್ರೀಕರ ನಂಬಿಕೆಯಂತೆ ಝೀಯಸ್‌ನ ಮಗಳು ಪರ್ಸಿಫೋನ್‌ಳನ್ನು ಭೂಗತ ಜಗತ್ತಿನ ದೇವತೆ ಹೇಡಸ್‌ನು ಅಪಹರಿಸಿ ಅತ್ಯಾಚಾರಗೈದನಂತೆ. ಪರ್ಸಿಫೋನ್‌ಳ ತಾಯಿ, ಕೃಷಿದೇವತೆ ಡೆಮಿಟರ್ ಇದರಿಂದ ಕ್ರುದ್ಧಳಾಗಿ ಭೂಮಿಯ ಮೇಲೆ ಸಸ್ಯಾದಿಗಳು ಬೆಳೆಯುವುದನ್ನು ನಿಲ್ಲಿಸಿಬಿಟ್ಟಳು. ಕೊನೆಗೂ ಪರ್ಸಿಫೋನ್ ಪತ್ತೆಯಾದಳು. ಆದರೆ ಹೇಡಸ್ ಒಂದು ಷರತ್ತೊಡ್ಡಿದ. ತಾನು ವರ್ಷಕ್ಕೊಮ್ಮೆ ಪರ್ಸಿಫೋನ್‌ಳನ್ನು ಎತ್ತಿಕೊಂಡು ಹೋಗುವುದಾಗಿಯೂ, ಆರು ತಿಂಗಳು ಆಕೆ ಭೂಗತ ಜಗತ್ತಿನಲ್ಲೇ ರಾಣಿಯಾಗಿ ಇರಬೇಕೆಂದೂ ಹೇಳಿದ. ವಿಧಿಯಿಲ್ಲದೆ ಡೆಮಿಟರ್ ಒಪ್ಪಬೇಕಾಯ್ತು. ಇದರ ಪರಿಣಾಮವೇ ಆರು ತಿಂಗಳು ಚಳಿ, ಹಿಮಪಾತ, ಕತ್ತಲೆ. ಕೃಷಿ ಇತ್ಯಾದಿ ಏನೂ ಇಲ್ಲ. ಚಟುವಟಿಕೆಗಳೆಲ್ಲ ಸ್ಥಗಿತ. ಉಳಿದ ಆರು ತಿಂಗಳು ಸಸ್ಯಸಮೃದ್ಧಿ. ವಿಂಟರ್ ಸೊಲ್ಸ್‌ಟೈಸ್‌ನಂದು ‘ತಮಸೋ ಮಾ ಜ್ಯೋತಿರ್ಗಮಯ’ ಪರಿವರ್ತನೆಗೆ ಮುಹೂರ್ತ. ನೋರ್ಸ್ ಪಂಥದವರು ನಂಬುವ ಪ್ರಸವದೇವತೆ ಫ್ರಿಗ್ಗ್‌ಳ ಕಥೆಯೂ ಇದೇ ರೀತಿಯದು. ಆಕೆಯ ಮಗ ಬೆಳಕಿನ ದೇವತೆ ಬಾಲ್ಡರ್‌ನನ್ನು ಬೇರೆ ಕೆಲವು ಮತ್ಸರಿ ದೇವತೆಗಳು ಕೊಲ್ಲುತ್ತಾರೆ. ಆ ದುರ್ಘಟನೆ ನಡೆಯುವುದು ವಿಂಟರ್ ಸೊಲ್ಸ್‌ಟೈಸ್ ದಿನದಂದು. ಫ್ರಿಗ್ಗ್ ಪಾತಾಳಕ್ಕೆ ಹೋಗಿ ಮಗನನ್ನು ಮತ್ತೆ ಬದುಕಿಸಲು ಯತ್ನಿಸುತ್ತಾಳೆ. ಜಗತ್ತಿನ ಜೀವಿಗಳೆಲ್ಲ ಆತನ ಮರಣಕ್ಕಾಗಿ ದುಃಖಿಸಿದರೆ ಮಾತ್ರ ಮತ್ತೆ ಜೀವ ಬರುತ್ತದೆ ಎಂಬ ಷರತ್ತಿಗೆ ಆಕೆ ಒಪ್ಪಬೇಕಾಗುತ್ತದೆ. ಜನರು ದುಃಖಿಸುವ ಆ ಅವಧಿಯೇ ಚಳಿಗಾಲದ ನಿಶ್ಚೇಷ್ಟತೆ.
ಇವೆಲ್ಲಕ್ಕಿಂತ ಸ್ವಾರಸ್ಯಕರವಾದದ್ದು ಹಂಗೇರಿಯನ್ ಜನರ ನಂಬಿಕೆ. ಕ್ಸೊಡಸ್ಜಾರ್ವಸ್ ಎಂಬ ಹೆಸರಿನ ಮಾಯಾ ಸಾರಂಗವೊಂದು (ಜಿಂಕೆಯಂಥದ್ದೇ, ಕೋಡುಗಳುಳ್ಳದ್ದು) ಅವರಿಗೆ ಧಾರ್ಮಿಕವಾಗಿ ಎಲ್ಲಿಲ್ಲದ ಮಹತ್ತ್ವವುಳ್ಳದ್ದು. ಹಂಗೇರಿಯನ್ನರ ಪುರಾಣಕಥೆಗಳಲ್ಲಿ ಕ್ಸೊಡಸ್ಜಾರ್ವಸ್ ಸಾರಂಗದ ಪ್ರಸ್ತಾವ ಬರಲೇಬೇಕು. ಒಮ್ಮೆ ಹೂನರ್ ಮತ್ತು ಮೇಗರ್ ಎಂಬ ಅವಳಿಸೋದರ ದೇವತೆಗಳು ಬೇಟೆಯಾಡುತ್ತಿದ್ದಾಗ ಅವರೆದುರಿಗೆ ಕ್ಸೊಡಸ್ಜಾರ್ವಸ್ ಕಾಣಿಸಿಕೊಂಡಿತು. ಅವಳಿಸೋದರರು ಅದನ್ನು ಅಟ್ಟಿಸಿಕೊಂಡು ಹೋದರು. ಸ್ವರ್ಗದಿಂದ ಭೂಮಿಯವರೆಗೂ ತಲುಪಿದರು. ಎಷ್ಟು ಹಿಂಬಾಲಿಸಿದರೂ ಅವರ ಕೈಗೆ ಕ್ಸೊಡಸ್ಜಾರ್ವಸ್ ಸಿಗಲೇ ಇಲ್ಲ. ಬೇಟೆಯ ಆಯಾಸದಿಂದ ಬಸವಳಿದ ಸೋದರರು ಭೂಮಿಯಲ್ಲೇ ನೆಲೆನಿಂತು ಹೂನ್ ಮತ್ತು ಹಂಗೇರಿಯನ್ ವಂಶಗಳ ಸ್ಥಾಪನೆಗೆ ಕಾರಣರಾದರು. ಕ್ಸೊಡಸ್ಜಾರ್ವಸ್ ಸಾರಂಗವು ಅವರ ಕೈಗೆ ಸಿಗಲಿಲ್ಲವಾದರೂ ಪ್ರತಿವರ್ಷ ವಿಂಟರ್ ಸೊಲ್ಸ್‌ಟೈಸ್‌ನಂದು ಸೂರ್ಯನನ್ನು ತನ್ನ ಕೋಡುಗಳ ಮೇಲೆ ಎತ್ತಿಕೊಂಡು ಬರುತ್ತದಂತೆ. ಅಲ್ಲಿಂದ ಮುಂದೆ ಸೂರ್ಯನು ದಿನೇದಿನೇ ಬೆಳಕು ಶಾಖ ಹೆಚ್ಚಿಸಿ ಭೂಮಿಯಲ್ಲಿ ಸಸ್ಯಗಳೆಲ್ಲ ಬೆಳೆಯುವುದಕ್ಕೆ, ಜೀವಕಳೆ ತುಂಬುವುದಕ್ಕೆ ನೆರವಾಗುತ್ತಾನೆ.
ಮಹಾವಿಷ್ಣುವು ವರಾಹಾವತಾರದಲ್ಲಿ ದಾಡೆಗಳ ಮೇಲೆ ಭೂಮಿಯನ್ನು ಎತ್ತಿಕೊಂಡು ಬಂದನು ಎನ್ನುತ್ತವೆ ನಮ್ಮ ಹಿಂದೂ ಪುರಾಣಗಳು. ಈ ಸಾರಂಗವೋ ವರಾಹನಿಗಿಂತಲೂ ಶಕ್ತಿಶಾಲಿಯಿರಬೇಕು, ಸೂರ್ಯನನ್ನೇ ತನ್ನ ಕೋಡುಗಳ ಮೇಲೆ ಎತ್ತಿಕೊಂಡು ಬರುತ್ತದೆ! ಒಂದಂತೂ ನಿಜ, ಪ್ರಾಚೀನ ಕಾಲದಲ್ಲಿ ಮನುಷ್ಯನು ಪ್ರಕೃತಿಯನ್ನು ಒಂದು ದೈವಿಕ ಶಕ್ತಿಯಾಗಿ ಪರಿಗಣಿಸಿದ್ದಾನೆ. ಸೂರ್ಯ-ಚಂದ್ರರನ್ನು, ನೀರು-ಗಾಳಿ-ಬೆಂಕಿಗಳನ್ನು ಪೂಜ್ಯ ಭಾವದಿಂದ ನೋಡಿದ್ದಾನೆ. ಅವುಗಳಲ್ಲೇ ದೇವರನ್ನು ಕಂಡಿದ್ದಾನೆ. ಈಗಿನ ಕಾಲದ ಮನುಷ್ಯನಿಗೆ ಅದೆಲ್ಲಿಂದ ಬಂತೋ ಪ್ರಕೃತಿಯ ಮೇಲೆ ಮನಬಂದಂತೆ ಅತ್ಯಾಚಾರಗೈಯುವ ದುಷ್ಟ ಬುದ್ಧಿ. ಮನುಷ್ಯನ ಅಹಂಕಾರವನ್ನು ಕೋಡುಗಳಿಂದ ತಿವಿದು ಕೊನೆಗಾಣಿಸಲಿಕ್ಕೆ ಇನ್ನು ಯಾವ ಮಾಯಾಮೃಗ ಬರಬೇಕೋ!




