ಉಪ್ಪಳ: ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ 95 ನೇ ವಾರ್ಷಿಕೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ. ಸದಸ್ಯ ಹರೀಶ್ ಬೊಟ್ಟಾರಿ ವಹಿಸಿ ಮಾತನಾಡಿ, ಶಾಲೆಯು ಸಮಾಜದ ಆಸ್ತಿಯಾಗಿದ್ದು,ಎಲ್ಲರ ನೆರವಿನೊಂದಿಗೆ ಶಾಲಾ ವಾರ್ಷಿಕೋತ್ಸವವನ್ನು ನಾಡ ಹಬ್ಬದಂತೆ ಆಚರಿಸುವುದು ಹೆಮ್ಮೆಯೆನಿಸುತ್ತದೆ ಎಂದರು.
ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ.ಜೆ.ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲೆಯು ಶಾಂತಿ ಸಹಬಾಳ್ವೆಯ ಪಾಠವನ್ನು ಹೇಳಿಕೊಡುವುದರ ಮೂಲಕ ದೇಶಪ್ರೇಮವನ್ನು ಬೆಳೆಸುವಂತೆ ಮಾಡಿದೆ ಎಂದು ಅಭಿಪ್ರಾಯ ಪಟ್ಟರು.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್.ವಿ,ಕ್ಷೇತ್ರ ಸಂಪನ್ಮೂಲ ಅಧಿಕಾರಿ ಗುರುಪ್ರಸಾದ್ ರೈ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಸೀಸ್ ಚೇವಾರ್, ಮಾತೃಸಂಘದ ಅಧ್ಯಕ್ಷೆ ಕವಿತಾ ಪಟ್ಲ ಶುಭ ಹಾರೈಸಿದರು. ವೇದಿಕೆಯಲ್ಲಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಅಚ್ಯುತ ಚೇವಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಮಾರ ಸುಬ್ರಹ್ಮಣ್ಯ, ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣ ಭಟ್, ವ್ಯವಸ್ಥಾಪಕ ಪ್ರತಿನಿಧಿ ಶಂಕರನಾರಾಯಣ ಭಟ್,ಸಮಾಜ ಸೇವಕ ಬಶೀರ್,ಮೊಹಮ್ಮದ್ ಹನೀಫ್ ಚೇವಾರ್ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ರವಿಕುಮಾರ್ ವಾರ್ಷಿಕ ವರದಿ ಮಂಡಿಸಿದರು.
ಇದೇ ಸಂದರ್ಭದಲ್ಲಿ ಚೇವಾರು ಅಂಗನವಾಡಿಯಲ್ಲಿ ಸುಮಾರು 20 ವರ್ಷಗಳ ಕಾಲ ಶಿಕ್ಷಕಿಯಾಗಿ ದುಡಿದು ಇತ್ತೀಚೆಗೆ ನಿವೃತ್ತಿ ಹೊಂದಿದ ನಗಜಾತೆ ಚಂದ್ರ ಶೇಖರ ರಾವ್ ರನ್ನು ಶಾಲಾ ವಾರ್ಷಿಕೋತ್ಸವ ಸಮಿತಿಯ ವತಿಯಿಂದ ಸಮ್ಮಾನಿಸಲಾಯಿತು. ಮತ್ತು ಅಂಗನವಾಡಿ ಕ್ಷೇಮ ಸಮಿತಿಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪೈವಳಿಕೆಯ ಉದ್ಯಮಿ ಇಬ್ರಾಹಿಂ ಖಲೀಲ್ ಶಾಲೆಗೆ ಕೊಡಮಾಡಿದ ನೀರು ಶುದ್ದೀಕರಣ ಉಪಕರಣವನ್ನು ಹಸ್ತಾಂತರಿಸಲಾಯಿತು.ದಿ. ವಿಜಯಕುಮರ್ ಸ್ಮರಣಾರ್ಥ ಅವರ ಪುತ್ರ ದಯಾನಂದ ಚೇವಾರ್, ಅಂಗನವಾಡಿ ಮತ್ತು ಶಾಲಾ ಎಲ್.ಕೆ.ಜಿ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಶ್ಯಾಮ್ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಹ್ಯಾರಿಸ್ ವಂದಿಸಿದರು. ಚೇವಾರು ವಿನೋದ ಕಾರ್ಯಕ್ರಮ ನಿರೂಪಿಸಿದರು.ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು.


