ಕಾಸರಗೋಡು: ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರಲ್ಲಿ ಸರ್ಕಾರ ತೋರುವ ಇಬ್ಬಗೆ ಧೋರಣೆ ಕೈಬಿಟ್ಟು, ಅವರಿಗೆ ನ್ಯಾಯ ಒದಗಿಸಿಕೊಡಲು ಮುಂದಾಗಬೇಕು ಎಂದು ಖ್ಯಾತ ಸಮಾಜಸೇವಕಿ, ಎಂಡೋಸಂತ್ರಸ್ತರಪರ ಹೋರಾಟಗಾರ್ತಿ ದಯಾಬಾಯಿ ತಿಳಿಸಿದ್ದಾರೆ.
ಅವರು ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಜನಕೀಯ ಒಕ್ಕೂಟ ಕಾಸರಗೋಡಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ'ಹೋರಾಟ ಜ್ಯೋತಿ'ಕಾರ್ಯಕ್ರಮ ಹೊಸಬಸ್‍ನಿಲ್ದಾಣ ವಠಾರದಲ್ಲಿ ಉದ್ಘಾಟಿಸಿ ಮಾತನಾಡಿದರು.
ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಪುನರ್ವಸತಿ ಹಾಗೂ ಅವರ ನ್ಯಾಯಯುತ ಬೇಡಿಕೆ ಈಡೇರಿಸಿಕೊಡದಿರುವುದನ್ನು ಪ್ರತಿಭಟಿಸಿ ಹೋರಾಟ ಮುಂದುವರಿಸಿದಲ್ಲಿ, ಮುಂಚೂಣಿ ನೇತೃತ್ವ ವಹಿಸಲು ತಾನು ಸಿದ್ಧಳಾಗಿದ್ದೇನೆ. ಎಂಡೋಸಲ್ಫಾನ್ ಕೀಟನಾಶಕದಿಂದ ಯಾವುದೇ ದುಷ್ಪರಿಣಾಮ ಇಲ್ಲ ಎಂಬ ಹೇಳಿಕೆ ನೀಡಿರುವ ಕಾಸರಗೋಡು ಜಿಲ್ಲಾಧಿಕಾರಿಯಿಂದ ಸಂತ್ರಸ್ತರ ಪುನರ್ವಸತಿಕಾರ್ಯಗಳ ಬಗ್ಗೆ ಹೆಚ್ಚಿನ ನಿರೀಕ್ಷೆ ಬೇಕಾಗಿಲ್ಲ. ಸಂತ್ರಸ್ತರು ನಡೆಸುತ್ತಿರುವ ಹೋರಾಟಕ್ಕೆ ಇವರಿಂದ ಯಾವುದೇ ನ್ಯಾಯಲ ಲಭಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಕಣ್ಣುತೆರೆಸಲು ಹೋರಾಟ ಮತ್ತಷ್ಟು ತೀವ್ರಗೊಳಿಸುವುದು ಅನಿವಾರ್ಯ ಎಂದು ತಿಳಿಸಿದರು. ಸಂತ್ರಸ್ತರು ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಪೂರ್ಣ ಬೆಂಬಲ ಸೂಚಿಸಿದ ಅವರು, ಏಕಾಭಿನಯದ ಮೂಲಕ ವಿವಿಧ ಭಂಗಿಗಳಲ್ಲಿ ಕಾಣಿಸಿಕೊಂಡು ಸಂತ್ರಸ್ತರು ಎದುರಿಸುತ್ತಿರುವ ಸಂಕಷ್ಟವನ್ನು ಪ್ರಸ್ತುತಪಡಿಸಿದರು.
ಎಂಡೋಸಲ್ಫಾನ್ ಸಂತ್ರಸ್ತೆ ಹಾಗೂ ಹೋರಾಟದ ಮುಂಚೂಣಿ ನಾಯಕಿ ಮುನಿಸಾ ಅಂಬಲತ್ತರ ಅಧ್ಯಕ್ಷತೆ ವಹಿಸಿದ್ದರು. ನಾರಾಯಣನ್ ಪೆರಿಯ, ಸುಬೈರ್ ಪಡ್ಪು, ಅಬ್ದುಲ್ ಖಾದರ್ ಚಟ್ಟಂಚಾಲ್, ಕೆ.ಚಂದ್ರಾವತಿ, ಅಂಬಲತ್ತರ ಕುಞÂಕೃಷ್ಣನ್, ಗೋವಿಂದನ್ ಕಯ್ಯೂರ್, ಶಿವಕುಮಾರ್ ಎಣ್ಮಕಜೆ, ಜಮೀಲಾ ಎಂ.ಪಿ. ಸಮೀರಾ, ಸುಬೈದಾ ಪಿ, ಶ್ರೀಕಲಾ ಪಿ, ಆಮಟನಿ ಪಿ.ಜೆ, ಶೈನಿ ಪಿ.ಉಪಸ್ಥಿತರಿದ್ದರು.

