ತಿರುವನಂತಪುರ: ನೇಪಾಳದ ಕಾಠ್ಮಂಡುವಿನ ಪ್ರವಾಸಿತಾಣ ದಾಮನ್‍ನ ರೆಸಾರ್ಟ್‍ನ ಕೊಠಡಿಯೊಳಗೆ ಮೃತಪಟ್ಟಿರುವ ಕೇರಳದ ಎಂಟುಮಂದಿಯ ಮೃತದೇಹ ಶವಮಹಜರು ನಡೆಸಿ, ಕೇರಳಕ್ಕೆ ತರಲು ಪ್ರಯತ್ನ ಮುಂದುವರಿದಿದೆ. ಅತಿಯಾದ ಚಳಿಯಿದ್ದ ಹಿನ್ನೆಲೆಯಲ್ಲಿ ರೆಸಾರ್ಟ್ ಕೊಠಡಿಯೊಳಗೆ ಗ್ಯಾಸ್ ಹೀಟರ್ ಆನ್‍ಮಾಡಿ ನಿದ್ರಿಸಿದ್ದ ಸಂದರ್ಭ ಅನಿಲಸೋರಿಕೆಯಾದ ಕಾರಣ ದಂಪತಿಗಳು ಹಾಗೂ ಇವರ ಮಕ್ಕಳು ದಆರುಣವಾಗಿ ಮೃತಪಟ್ಟಿದ್ದರು.
ತಿರುವನಂತಪುರ ನಿವಾಸಿ ದುಬೈಯಲ್ಲಿ ಇಂಜಿನಿಯರ್ ಆಗಿದ್ದ ಪ್ರವೀಣ್‍ಕುಮಾರ್ ನಾಯರ್(39), ಇವರ ಪತ್ನಿ ಎರ್ನಾಕುಳಂ ಅಮೃತಾ ಆಸ್ಪತ್ರೆಯಲ್ಲಿ ಎಂ.ಫಾರ್ಮಾ ವಿದ್ಯಾರ್ಥಿನಿ ಶರಣ್ಯಾ(34), ಮಕ್ಕಳಾದ ಶ್ರೀಭದ್ರಾ(8)ಆರ್ಚಾ(5), ಅಭಿನವ್(6), ಕೋಯಿಕ್ಕೋಡ್ ಕುಂದಮಂಗಲ ನಿವಾಸಿ ಎರ್ನಾಕುಳಂನಲ್ಲಿ ಇನ್‍ಫೋ ಪಾರ್ಕ್‍ನಲ್ಲಿ ಇಂಜಿನಿಯರ್ ಆಗಿದ್ದ ರಂಜಿತ್‍ಕುಮಾರ್(37), ಪತ್ನಿ ಇಂದುಲಕ್ಷ್ಮೀ(29), ಪುತ್ರ ವೈಷ್ಣವ್(2) ಮೃತಪಟ್ಟವರು. ದಂಪತಿಯ ಇನ್ನೊಬ್ಬ ಪುತ್ರ ಬೇರೊಂದು ಕೊಠಡಿಯಲ್ಲಿ ಮಲಗಿದ್ದ ಆರರ ಹರೆಯದ ಮಾಧವ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಎಲ್ಲ ಎಂಟುಮಂದಿಯ ಮೃತದೇಹಗಳನ್ನು ಕಾಠ್ಮಂಡುವಿನ ತ್ರಿಭುವನ್ ಯೂನಿವರ್ಸಿಟಿ ಕಾಲೇಜು ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಗಿದ್ದು, ಜ. 23ರಂದು ವಿಮಾನದ ಮೂಲಕ ಊರಿಗೆ ರವಾನೆಯಾಗಲಿದೆ. ಎಲ್ಲ ಮೃತದೇಹಗಳನ್ನೂ ಒಂದೇ ವಿಮಾನದಲ್ಲಿ ದೆಹಲಿ ಮಾರ್ಗವಾಗಿ ಕೇರಳಕ್ಕೆ ಕರೆತರುವ ಬಗ್ಗೆ ಮಾಹಿತಿ ಲಭಿಸಿರುವುದಾಗಿ ಮೃತರ ಸಂಬಂಧಿಕರು ತಿಳಿಸಿದ್ದಾರೆ. ಕೇಂದ್ರ ವಿದೇಶಾಂಗ ಖಾತೆ ಸಚಿವ ಜೈಶಂಕರ್ ಹಾಗೂ ಸಹಾಯಕ ಸಚಿವ ವಿ.ಮುರಳೀಧರನ್ ನೇಪಾಳ ಸರ್ಕಾರವನ್ನು ಸಂಪರ್ಕಿಸಿ ಮೃತದೇಹ ಊರಿಗೆ ಕರೆತರುವ ಬಗ್ಗೆ ಮಾತುಕತೆ ನಡೆಸಿದ್ದರು. ಸಿಎಂ ಪಿಣರಾಯಿ ವಿಜಯನ್ ಅವರೂ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ.


