ನವದೆಹಲಿ: ಅಯೋಧ್ಯೆಯ ರಾಮಜನ್ಮ ಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಳೆದ ವರ್ಷದ ನವಂಬರ್ ನಲ್ಲಿ ನೀಡಿದ್ದ ಐತಿಹಾಸಿಕ ತೀರ್ಪನ್ನು ಪ್ರಶ್ನಿಸಿ ಕ್ಯೂರೆಟಿವ್ ಅರ್ಜಿ ದಾಖಲುಗೊಂಡಿದೆ.
ಈ ತೀರ್ಪು ವಾಸ್ತವಾಂಶಗಳನ್ನು ಆಧರಿಸದೆ ವಿಶ್ವಾಸಗಳ ಆಧಾರದಮೇಲೆ ನೀಡಲಾಗಿದೆ ಎಂದು ಉತ್ತರ ಪ್ರದೇಶಕ್ಕೆ ಸೇರಿದ ಪೀಸ್ ಪಾರ್ಟಿ, ಸುಪ್ರೀಂ ಕೋರ್ಟ್ ನಲ್ಲಿ ಆರ್ಜಿ ಸಲ್ಲಿಸಿದೆ. ಪೀಸ್ ಪಕ್ಷದ ಅಧ್ಯಕ್ಷ ಡಾ.ಮೊಹಮ್ಮದ್ ಅಯೂಬ್ ಅವರು 2012 ರಿಂದ 2017 ರವರೆಗೆ ಖಲಿಯಾಬಾದ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿ ಸೇವೆ ಸಲ್ಲಿಸಿದರು.
ಅಯೋಧ್ಯೆಯ ತೀರ್ಪಿನ ವಿರುದ್ಧ ಕಳೆದ ವರ್ಷ ಸಲ್ಲಿಸಿದ್ದ ಎಲ್ಲಾ 18 ಮರು ಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವ ಹಿನ್ನಲೆಯಲ್ಲಿ ಕೊನೆಯ ಅಸ್ತ್ರವಾಗಿ ಕ್ಯೂರೆಟಿವ್ ಅರ್ಜಿ ಸಲ್ಲಿಸಲಾಗಿದೆ. ಕಳೆದ ವರ್ಷ ನವೆಂಬರ್ 9 ರಂದು ಅಯೋಧ್ಯೆಯಲ್ಲಿನ ವಿವಾದಾಸ್ಪದ 2.77 ಎಕರೆ ಭೂಮಿಯನ್ನು ರಾಮ ದೇಗಲ ನಿರ್ಮಿಸಲು ಟ್ರಸ್ಟ್ ಗೆ ಹಸ್ತಾಂತರಿಸಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಲಾಗಿತ್ತು. ಮುಸ್ಲಿಮರಿಗೆ ಮಸೀದಿ ನಿರ್ಮಿಸಿಕೊಳ್ಳಲು ಪರ್ಯಾಯವಾಗಿ ಅಯೋಧ್ಯೆಯಲ್ಲಿ 5 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ಮಂಜೂರು ಮಾಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.


