ಕುಂಬಳೆ: ಕಾಸರಗೋಡಿನ ಕನ್ನಡ ಭಾಷಾ ಸಂಪನ್ನತೆಯನ್ನು ಕಾಪಿಡುವ ನಿಟ್ಟಿನಲ್ಲಿ ಬಹುಮುಖಿ ಆಯಾಮಗಳ ಚಟುವಟಿಕೆಗಳಿಗೆ ತೆರೆಸಿಕೊಳ್ಳುವ ಸದುದ್ದೇಶದಿಂದ ಅನಂತಪುರದಲ್ಲಿ ಏಪ್ರಿಲ್ 10 ರಿಂದ 12ರ ವರೆಗೆ ನಡೆಯಲಿರುವ ಕನ್ನಡ ಸಿರಿ ಸಮ್ಮೇಳನದ ಪೂರ್ವಭಾವಿಯಾಗಿ ವಿವಿಧೆಡೆ ಸಂಘಟಿಸಲಾಗುವ ಪ್ರಾದೇಶಿಕ ಮತ್ತು ಯುವ ಸಮಿತಿಗಳ ರೂಪೀಕರಣದ ಭಾಗವಾಗಿ ಕಾಸರಗೋಡು ನಗರ ಸಮಿತಿಯ ರೂಪೀಕರಣ ಸಭೆ ಬುಧವಾರ ಸಂಜೆ ಕೋಟೆಕಣಿ ರಸ್ತೆಯ ರಾಮನಾಥ ಭವನದಲ್ಲಿ ನಡೆಯಿತು.
ನ್ಯಾಯವಾದಿ ಸದಾನಂದ ರೈ, ನ್ಯಾಯವಾದಿ ಮುರಳೀಧರ, ಜೋಗಿಲ ಸಿದ್ದರಾಜು, ಪದ ದೇವರಾಜ್, ಲಕ್ಷ್ಮಣ ಪ್ರಭು ಕುಂಬಳೆ, ರಾಜೇಶ್ ಆಳ್ವ ಬದಿಯಡ್ಕ, ಸುಬ್ಬಣ್ಣ ಶೆಟ್ಟಿ ಕಾಸರಗೋಡು, ಜಗದೀಶ ಕೂಡ್ಲು, ರವಿ ನಾಯ್ಕಾಪು, ಗುರುಪ್ರಸಾದ್ ಕೋಟೆಕಣಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಕನ್ನಡ ಸಿರಿ ಸಮ್ಮೇಳನ ಕಾಸರಗೋಡು ನಗರ ಸಮಿತಿಯನ್ನು ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ನ್ಯಾಯವಾದಿ ಸದಾನಂದ ರೈ, ಉಪಾಧ್ಯಕ್ಷರುಗಳಾಗಿ ಸುಬ್ಬಣ್ಣ ಶೆಟ್ಟಿ, ಕೃಷ್ಣಪ್ರಸಾದ್ ಕೋಟೆಕಣಿ, ಶಶಿಧರ ಶೆಟ್ಟಿ, ಕಾರ್ಯದರ್ಶಿಯಾಗಿ ಜಗದೀಶ್ ಕೂಡ್ಲು, ಜೊತೆ ಕಾರ್ಯದರ್ಶಿಗಳಾಗಿ ಡಾ.ಸಾಯಿರತ್ನ, ಪುರುಷೋತ್ತಮ ನಾೈಕ್, ಸಂಚಾಲಕರಾಗಿ ಗುರುಪ್ರಸಾದ್ ಕೋಟೆಕಣಿ ಅವರನ್ನು ಆರಿಸಲಾಯಿತು. ಸಿರಿ ಸಮ್ಮೇಳನದ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಫೆ.22 ರಮದು ಹೊಸದುರ್ಗ ತಾಲೂಕು ಮಟ್ಟದ ಸಭೆ:
ಕನ್ನಡ ಸಿರಿ ಸಮ್ಮೇಳನದ ಪೂರ್ವಭಾವಿಯಾಗಿ ರಚಿಸಲಾಗುವ ಪ್ರಾದೇಶಿಕ ಸಮಿತಿಗಳ ಭಾಗವಾಗಿ ಹೊಸದುರ್ಗ ತಾಲೂಕು ಮಟ್ಟದ ಸಭೆಯು ಫೆ. 22 ರಂದು ಸಂಜೆ 4 ರಿಂದ ಕಾಞಂಗಾಡ್ ಶ್ರೀಕೃಷ್ಣ ಭಜನಾ ಮಂದಿರದ ಪರಿಸರದಲ್ಲಿ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

