ವಾಷಿಂಗ್ಟನ್: ವಿಶ್ವದ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಮುಂದುವರೆಸಿರುವ ಮಾರಕ ಕೊರೋನಾ ವೈರಸ್ ಸಾವಿನ ಸಂಖ್ಯೆ 290,000 ಗಡಿ ದಾಟಿದ್ದು, 290,269ಕ್ಕೆ ಏರಿಕೆಯಾಗಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವ ವಿದ್ಯಾಲಯ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ಈ ಮಾರಕ ಕೊರೋನಾ ವೈರಸ್ ಗೆ ಜಗತ್ತಿನಾದ್ಯಂತ 4,531 ಮಂದಿ ಸೋಂಕಿತರು ಬಲಿಯಾಗಿದ್ದು, ಆ ಮೂಲಕ ಜಗತ್ತಿನಾದ್ಯಂತ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 290,269ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಘಟಕ, ದೇಶದ 180ಕ್ಕೂ ಅಧಿಕ ದೇಶಗಳಲ್ಲಿ ಪಸರಿಸಿರುವ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 4,238,703ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ. ಈ ಪೈಕಿ ಕಳೆದ 24 ಗಂಟೆಗಳಲ್ಲಿ 88,891 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಸೋಂಕಿತರ ಸಂಖ್ಯೆ 13, 58,901ಕ್ಕೆ ಏರಿಕೆಯಾಗಿದೆ. ಅಂತೆಯೇ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ ಕೂಡ 81,805ಕ್ಕೆ ಏರಿಕೆಯಾಗಿದೆ. ಬಳಿಕದ ಸ್ಥಾನದಲ್ಲಿ ರಷ್ಯಾ ಇದ್ದು, ಇಲ್ಲಿ ಸೋಂಕಿತರ ಸಂಖ್ಯೆ 2,32,243ಕ್ಕೆ ಏರಿಕೆಯಾಗಿದೆ. ಮೂರನೇ ಸ್ದಾನದಲ್ಲಿ 2,28,030 ಸೋಂಕಿತರನ್ನು ಹೊಂದಿರುವ ಸ್ಪೇನ್ ಇದ್ದು, 2,26,463 ಸೋಂಕಿತರನ್ನು ಹೊಂದಿರುವ ಯುಕೆ ನಾಲ್ಕನೇ ಸ್ಥಾನದಲ್ಲಿದೆ.
ಭಾರತದಲ್ಲಿಯೂ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಮತ್ತೆ 3,604 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 74,281ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 122 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 2,415ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈ ವರೆಗೂ 24,453 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ದೇಶದಲ್ಲಿ 47480 ಮಂದಿ ಸೋಂಕಿತರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


