ಪ್ರಸ್ತುತ ಕೋವಿಡ್ 19 ರ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ತೀವ್ರ ಗೊಂದಲ-ಅತಂತ್ರತೆಗಳು ಮನೆಮಾಡಿವೆ. ತೋರಿಕೆಗೆ ಲಾಕ್ ಡೌನ್ ಗಳು ಹಿಂತೆಗೆಯಲ್ಪಟ್ಟರೂ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಪೂರ್ಣ ಪ್ರಮಾಣದಲ್ಲಿ ರೋಗಮುಕ್ತಿಯಾಗಿ ಸಹಜತೆಗೆ ಮರಳಲು ಕಾಲಗಳೇ ಬೇಕಾದೀತೆಂದೇ ಊಹಿಸಲಾಗುತ್ತಿದೆ.
ಈ ಮಧ್ಯೆ ಜನಸಾಮಾನ್ಯರು ತಮ್ಮ ಆರೋಗ್ಯ ಸಂಪತ್ತನ್ನು ಗರಿಷ್ಠ ಮಟ್ಟದಲ್ಲಿ ಕಾಯ್ದುಕೊಳ್ಳುವಂತೆ ತಜ್ಞರು, ಅಧಿಕೃತರು ಮನವಗಳನ್ನು ಮಾಡುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಜನೋಪಯೋಗಿಯಾಗಲಿ ಎಂಬ ಉದ್ದೇಶದೊಂದಿಗೆ ಸಮರಸ ಸುದ್ದಿ ಆರೋಗ್ಯ ಸಮೃದ್ದಿಗಾಗಿ "ಜೀವ-ಜೀವನ ದರ್ಶನ" ಎಂಬ ಜಾಗೃತಿ ಲೇಖನ ಸರಣಿಯನ್ನು ಆರಂಭಿಸುತ್ತಿದೆ.
ಪ್ರಸ್ತುತ ವ್ಯಾಪಕಗೊಳ್ಳುತ್ತಿರುವ ಚರ್ಮವ್ಯಾದಿ "ಗಜಕರ್ಣ" ದ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದ್ದು, ಕಾಸರಗೋಡಿನ ಪ್ರಸಿದ್ದ ಚರ್ಮರೋಗ ತಜ್ಞೆ, ಐಎಡಿ ನಿರ್ದೇಶಕಿಯೂ ಆಗಿರುವ ಡಾ.ಪ್ರಸನ್ನಾ ನರಹರಿ ಸಮರಸದಲ್ಲಿ ವೈದ್ಯಕೀಯ ಜಾಗೃತಿ ಲೇಖನ ಮಾಲಿಕೆ ಆರಂಭಿಸುತ್ತಿದ್ದಾರೆ.
ನೀವಲ್ಲ..."ನಾನು" ಒಂದಷ್ಟು ಅರಿವಿನ ವಿಸ್ತಾರತೆಗೆ ಪ್ರಯತ್ನಿಸಿದಾಗ ಸುಭಿಕ್ಷ ನೆಲೆಸೀತೆಂಬುದು ಸಮರಸದ ಆಶಯ. ಇದರಿಂದಲೇ ನೆಮ್ಮದಿಯ ಬದುಕು-ಸಮಾಜ ನಿರ್ಮಾಣ ಸಾಕಾರತೆಯಾಗುವುದೆಂಬ ವಿಶ್ವಾಸ ನಮ್ಮದು.
ಸಮರಸ ಸುದ್ದಿ ಬಳಗ:
ಗುಣವಾಗದ ಚರ್ಮರೋಗ ಗಜಕರ್ಣ
ದೇಶಾದ್ಯಂತ ಹೊಸದಾಗಿ ಈಗ ಹರಡುತ್ತಿರುವ ತೊಡೆ ಸಮದಿನ ತುರಿಕೆ(ಗಣಕರ್ಣ) ಚರ್ಮರೋಗ ತಜ್ಞರಿಗೂ ತಲೆನೋವಾಗಿದೆ. ಇದು ಯಾಕೆ ಈ ಪರಿಯಿಂದ ಹಬ್ಬುತ್ತದೆ.ಇದರ ಗುಣಲಕ್ಷಣಗಳೇನು? ಇದರ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯ ಬಗ್ಗೆ ವಿಚಾರಗಳು ಈ ಲೇಖನದಲ್ಲಿ ಚರ್ಚಿಸಲಾಗಿದೆ. ಪ್ರತಿನಿತ್ಯ ಸುಮಾರು 20 ಶೇಕಡ ಜನರು ಇದೇ ವ್ಯಾದಿಯ ಚಿಕಿತ್ಸೆಗಾಗಿ ಆಸ್ಪತ್ರೆಗಳನ್ನು ಸಂದರ್ಶಿಸುತ್ತಿದ್ದಾರೆ. ಒಂದೇ ಮನೆಯ 12 ಮಂದಿ ಸದಸ್ಯರಲ್ಲಿ 11 ಮಂದಿಗಳೂ ಈ ರೋಗಾಧಿತರಾದ ಸಂದರ್ಭಗಳೂ ಇವೆ. ಎಲ್ಲರೂ "ಡಾಕ್ಟ್ರೇ ಏನು ತುರಿಕೆಯಪ್ಪಾ, ಕೆಂಪಗೆ, ಕಂಕುಳ, ಹೊಟ್ಟೆಯ ಬದಿ, ತೊಡೆ ಸಂಧಿಗಳಲ್ಲಿ ಆರಂಭವಾಗಿ ನಮ್ಮ ಮನೆಯಲ್ಲಿ ಒಬ್ಬರನ್ನೇ ಬಿಟ್ಟು ಉಳಿದ 11 ಜನರಿಗೂ ಈ ಖಾಯಿಲೆ ಬಂದಿದೆ. ಎಲ್ಲಿಂದ, ಹೇಗೆ ಬಂತೆಂಬುದು ನಮಗೆ ಗೊತ್ತಾಗುವುದಿಲ್ಲ.ತುಂಬಾ ವೈದರಲ್ಲಿ ಚಿಕಿತ್ಸೆ ಈವರೆಗೆ ಪಡೆಯಲಾಗದೆ. ಅವರು ಸಾಬೂನು, ಹಚ್ಚುವ ಔಷಧಿ, ಹೊಟ್ಟೆಯ ಔಷಧಿಗಳನ್ನು ನೀಡಿ ಬೇರೇನೂ ಹೇಳಲಿಲ್ಲ. ಹೆಚ್ಚು ರೋಗದ ವಿವರಗಳನ್ನು ಕೇಳಿದಾಗ ವೈದ್ಯರೂ ಸರಿಯಾದ ಉತ್ತರಗಳನ್ನು ಕೊಡುವುದಿಲ್ಲ. ಎಲ್ಲಿಹೋದರೂ ಔಷಧಿ, ಮುಲಾಮುಗಳನ್ನು ಬದಲಿಸಿ ಕೊಟ್ಟು 15 ದಿನ ಬಿಟ್ಟುಬನ್ನಿ ಎಂದಷ್ಟೇ ಹೇಳುತ್ತಾರೆ. ಮನೆಯಲ್ಲಿ ಅಂಗಡಿ ಇಡುವಷ್ಟು ಮುಲಾಮುಗಳಿವೆ. ಇದರ ಜೊತೆಗೆ ರೋಗ ವಾಸಿಯಾಗಬಹುದೆಂಬ ಆಸೆಗೆ ಆಯುರ್ವೇದ, ಹೋಮಿಯೋಪತಿ ಔಷಧಿಯನ್ನೂ ಮಾಡಿ ಆಯ್ತು. ಆದರೆ ಒಮ್ಮೆಗೆ ರೋಗ ವಾಸಿಯಾದಂತೆ ಅನಿಸಿದರೂ, ಪುನಃ ರೋಗ ಮರುಕಳಿಸುತ್ತದೆ. ರೋಗ ಗುಣವಾಗುವ ಲಕ್ಷಣ ಕಾಣಿಸುವುದೇ ಇಲ್ಲ. ಕೆಲವೊಮ್ಮೆ ಯಾಕಾದ್ರೂ ಈ ರೋಗ ವಾಸಿಯಾಗುತ್ತಿಲ್ಲ ಎಂದೆನಿಸುವುದೂ ಇದೆ. ಹೀಗಿರುವ ರೋಗಿಗಳು ನಿಮ್ಮ ಬಳಿಗೆ ಬರುತ್ತಾರೆಯೇ" ಎನ್ನುವುದನ್ನು ನಾವು ರೋಗಿಗಳ ಬಾಯಿಯಿಂದ ಕೇಳುವ ಸರ್ವೇ ಸಾಮಾನ್ಯ ಮಾತುಗಳು. ಹೀಗೆ ಹಲವಾರು ವೈದ್ಯರ ಬಳಿ ಸಾಗಿ ಚಿಕಿತ್ಸೆಗಾಗಿ ಒಂದು ಲಕ್ಷ ರೂ. ಖರ್ಚು ಮಾಡಿದವರೂ ಇದ್ದಾರೆ. ನಮ್ಮ ಚರ್ಮರೋಗ ಸಮ್ಮೇಳನದಲ್ಲಿ ಈ ರೋಗದ ಬಗೆಗೂ ಚರ್ಚೆಗಳು ಸಾಕಷ್ಟು ನಡೆಯುತ್ತಿವೆಯಾದರೂ ಸರಿಯಾದ ಶೀಘ್ರ ಉಪಶಮನದ ಬಗ್ಗೆ ಎಲ್ಲಾ ವೈದ್ಯರಿಗೂ ಒಪ್ಪಿಗೆ ಆಗುವಂತಹ ಪರಿಹಾರ ಇಲ್ಲಿಯವರೆಗೂ ಸಿಕ್ಕಿಲ್ಲ!
ರೋಗಿಗಳು ಹೇಳುವಂತೆ ಮೈಯಲ್ಲಿ, ತೊಡೆ ಸಂದಿಯಲ್ಲಿ, ಎದೆ, ಕಂಕುಳಗಳಲ್ಲಿ, ಕೆಲವೊಮ್ಮೆ ಮುಖ, ಕಿವಿಗಳಲ್ಲಿ ತುರಿಕೆ ಉಂಟಾಗಿ ಸಿಪ್ಪೆ ಹೋದ ಹಾಗಿದ್ದು, ಕೆಂಪಗೆ ಅಥವಾ ಕಪ್ಪಗೆ 50 ಪೈಸೆಯ ನಾಣ್ಯದ ಆಕಾರದಲ್ಲಿ ಕಜ್ಜು ಕಂಡುಬರುತ್ತದೆ. ಕೆಲವೇ ದಿವಸಗಳಲ್ಲಿ ಇದು ದೊಡ್ಡಾಗಿ ವ್ಯಾಪಿಸುತ್ತದೆ. ಕೆಲವೊಂದು ಬಾರಿ ಕೆಂಪು ನೋವಿನಿಂದ ಕೂಡಿದ ಗುಳ್ಳೆ ಅಥವಾ ಕೀವಿನಿಂದ ಕೂಡಿದ ಚಿಕ್ಕಿ-ಚಿಕ್ಕ ಗುಳ್ಳೆಗಳು ನಾಣ್ಯದ ಹೊರಭಾಗದಲ್ಲಿ ಇರಬಹುದು.
ಕೆಲವೇ ದಿನಗಳಲ್ಲಿ ಇದು ದೊಡ್ಡದಾಗುತ್ತದೆ. ಸ್ವಲ್ಪ ದಿನಗಳ ನಂತರ ಈ ಕೆಂಪು ನಾಣ್ಯದ ಒಳಗಿನ ಬದಿ ಗುಣವಾಗಿ ಹೊರಬದಿ ವಿಸ್ತರಿಸುತ್ತಾ ಹೋಗುತ್ತದೆ. ಆಗ ಅದು ರಿಂಗ್(ವೃತ್ತಾಕಾರ) ನಂತೆ ಗೋಚರಿಸುವುದರಿಂದ ಈ ರೋಗವನ್ನು ರಿಂಗ್ ವರ್ಮ್(ಗಜಕರ್ಣ) ಎಂದು ಗುರುತಿಸಲಾಗಿದೆ.
ಬರಹ:ಡಾ.ಪ್ರಸನ್ನ ನರಹರಿ.ಕಾಸರಗೋಡು
(ಮುಂದುವರಿಯುವುದು)





