ಲಡಾಖ್: ಚೀನಾದ ತೀವ್ರ ವಿರೋಧದ ನಡುವೆಯೂ ಭಾರತ ಲಡಾಖ್ ನ ಗಾಲ್ವಾನ್ ನದಿಗೆ ಅಡ್ಡವಾಗಿ ನಿರ್ಮಿಸಲಾಗುತ್ತಿದ್ದ ಸುಮಾರು 60 ಮೀಟರ್ ಉದ್ದದ ಸೇತುವೆಯನ್ನು ಇತ್ತೀಚಿಗೆ ಪೂರ್ಣಗೊಳಿಸಲಾಗಿದೆ ಎಂದು ಶುಕ್ರವಾರ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಇತ್ತೀಚಿಗೆ ಲಡಾಖ್ ನಲ್ಲಿ ಭಾರತದೊಂದಿಗೆ ಮಲ್ಲಯುದ್ಧ ನಡೆಸಲು ಇದು ಪ್ರಮುಖ ಕಾರಣ ಎಂದು ಸಹ ಹೇಳಲಾಗುತ್ತಿದೆ.
ಗಾಲ್ವಾನ್ ನದಿಯು ಅಕ್ಸಾಯ್ ಚಿನ್ ವಲಯದಿಂದ ಲಡಾಕ್‍ಗೆ ಹರಿಯುತ್ತದೆ. ಉಭಯ ರಾಷ್ಟ್ರಗಳೂ ಅಕ್ಸಾಯ್ ಚಿನ್ ತಮ್ಮ ಪ್ರದೇಶವೆಂದು ಹಕ್ಕು ಸ್ಥಾಪಿಸಿವೆ. 1962ರಲ್ಲಿ ಯುದ್ಧ ನಡೆದದ್ದೂ ಇದೇ ಗಾಲ್ವಾನ್ ನದಿ ಕಣಿವೆ ಪ್ರದೇಶದಲ್ಲಿ. ಇದೇ ಗಾಲ್ವಾನ್ ಕಣಿವೆಯಲ್ಲಿ ಭಾರತ ಸರ್ಕಾರ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಸೇನೆಯ ಚಲನವಲನಗಳಿಗೆ ಅಗತ್ಯವಿರುವ ರಸ್ತೆ, ಸೇತುವೆಗಳನ್ನು ನಿರ್ಮಿಸುತ್ತಿದೆ. ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಕಳೆದ ಸೋಮವಾರ ಚೀನಿ ಪಡೆಯೊಡನೆ ಹೋರಾಡಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದೂ ಈ ಕಣಿವೆಯ ಪ್ಯಾಟ್ರೊಲಿಂಗ್ ಪಾಯಿಂಟ್ 14 ಮತ್ತು ಪ್ಯಾಟ್ರೊಲಿಂಗ್ ಪಾಯಿಂಟ್ 15 ಮತ್ತು ಪ್ಯಾಟ್ರೊಲಿಂಗ್ ಪಾಯಿಂಟ್ ಹಾಟ್ ಸ್ಪ್ರಿಂಗ್ಸ್ ಬಳಿ.
ಗಡಿ ಸಂಘರ್ಷದ ನಡುವೆಯೇ ಭಾರತ ಸೇತುವೆಯನ್ನು ಇತ್ತೀಚೆಗೆ ನಿರ್ಮಿಸಿದೆ. ಈ ಸೇತುವೆಯು ಲಡಾಕ್‍ನಲ್ಲಿ ಭಾರತ ನಿರ್ಮಿಸಿರುವ ಅತ್ಯಂತ ಆಯಕಟ್ಟಿನ ರಸ್ತೆಯ ಭಾಗವಾಗಿದೆ.


