ಕಾಸರಗೋಡು: ಮುಂಬರುವ ಚುನಾವಣೆಯಲ್ಲಿ ಮತಗಟ್ಟೆಗಳ ಸಿದ್ಧತೆ ಸಂಬಂಧ ಅಂಗೀಕೃತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರಗಿತು.
ಈ ಸಂಬಂಧ ದೂರುಗಳಿದ್ದಲ್ಲಿ ಜೂ.27ರ ಸಂಜೆ 5 ಗಂಟೆಗೆ ಮುಂಚಿತವಾಗಿ ನೀಡುವಂತೆ ಸಭೆ ಆಗ್ರಹಿಸಿದೆ. ಜಿಲ್ಲೆಯಲ್ಲಿ ಈಗಿರುವ 968 ಮತಗಟ್ಟೆಗಳಲ್ಲದೆ 15 ಹೆಚ್ಚುವರಿ ಮತಗಟ್ಟೆಗಳನ್ನು ಸೇರಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಮತಗಟ್ಟೆಗಳ ಸಂಬಂಧ 60 ಸಲಹೆಗಳನ್ನು ಸಭೆ ಪರಿಶೀಲಿಸಿದೆ. 176 ಮಂದಿ ಮತದಾರರ ಪುನರ್ ಸೇರ್ಪಡೆ, 23 ಮತಗಟ್ಟೆಗಳ ಹೆಸರಿನಲ್ಲಿ ತಿದ್ದುಪಡಿ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇಲೆಕ್ಷನ್ ಕಮೀಷನ್ ಆಫ್ ಇಂಡಿಯಾದ ಆದೇಶ ಪ್ರಕಾರ ಈ ಪುನರ್ ರಚನೆ ನಡೆದಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಗೋವಿಂದನ್ ಪಳ್ಳಿಕ್ಕಾಪಿಲ್, ಎಂ.ಕುಂಞಂಬು ನಂಬ್ಯಾರ್, ಮೂಸಾ ಬಿ.ಚೆರ್ಕಳ, ಮ್ಯಾನ್ಯುವೆಲ್ ಮೇಲತ್, ಕೆ.ಎಮುಹಮ್ಮದ್ ಹನೀಫ, ಅಬ್ದುಲ್ ಹಮೀದ್, ತಹಸೀಲ್ದಾರರಾದ ಎ.ವಿ.ರಾಜನ್, ಪಿ.ಜೆ.ಆಂಟೋ, ಎನ್.ಮಣಿರಾಜ್ ಮೊದಲಾದವರು ಉಪಸ್ಥಿತರಿದ್ದರು.

