ಕಾಸರಗೋಡು: ಜಿಲ್ಲಾ ಮಟ್ಟದ ಕೊರೊನಾ ಕೋರ್ ಸಮಿತಿ ಸಭೆ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿತು. ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಖಚಿತತೆ ನಡೆಸುವಂತೆ, ಶುಕ್ರವಾರ ಮಧ್ಯಾಹ್ನದ ಜುಮಾ ನಮಾಜು ಏಕಕಾಲಕ್ಕೆ ಗರಿಷ್ಠ 100 ಮಂದಿಗೆ ಮಾತ್ರ ಮಂಜೂರಾತಿ ನಡೆಸುವಂತೆ, ಸಾಧಾರಣ ಗತಿಯ ನಮಾಜು ನಡೆಸಲು ಗರಿಷ್ಠ 50 ಮಂದಿಗೆ ಅನುಮತಿ ನೀಡುವಂತೆ ನಿರ್ಧರಿಸಲಾಗಿದೆ.
ಕೋವಿಡ್ ಸೋಂಕು ನಿವಾರಣೆಯ ನಿಟ್ಟಿನಲ್ಲಿ ರಾಜ್ಯ ಸರಕಾರ ತಿಳಿಸಿರುವ ಎಲ್ಲ ಕಟ್ಟುಪಾಡುಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ನಮಾಜು ಸಹಿತ ಕಾರ್ಯಗಳಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಿನಂತಿಸಿದರು. ನಮಾಜಿಗೆ ಬರುವ ಮತ್ತು ತೆರಳುವ ವೇಳೆ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ತಿಳಿಸಿದರು.
ಹೋಂ ಕ್ವಾರೆಂಟೈನ್ ನಲ್ಲಿ ಇರಬೇಕಾದವರು ಹೊರಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಪೆÇಲೀಸರು ಕಠಿನ ಕ್ರಮ ಕೈಗೊಳ್ಳಲಿದ್ದಾರೆ. ಕೇರಳ ಅಂಟುರೋಗ ನಿಯಂತ್ರಣ ಆರ್ಡಿನೆನ್ಸ್ ಪ್ರಕಾರ 2 ವರ್ಷ ಕಠಿಣ ಸಜೆ ಲಭಿಸಬಹುದಾದ ಕೇಸು ಇದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ 9 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದ್ದು, ಇವರನ್ನು ಸರಕಾರಿ ಕ್ವಾರೆಂಟೈನ್ ಗೆ ದಾಖಲಿಸಲಾಗಿದೆ. ರೂಂ ಕ್ವಾರೆಂಟೈನ್ ನಲ್ಲಿರುವವರು ಹೊರಬಂದಿರುವ ಸಂಬಂಧ ವಿಚಾರ ಗಮನಕ್ಕೆ ಬಂದಲ್ಲಿ ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳು ಗ್ರಾಮಪಂಚಾಯತ್-ನಗರಸಭೆ ಕಾರ್ಯದರ್ಶಿಗಳಿಗೆ ತಕ್ಷಣ ಮಾಹಿತಿ ನೀಡಬೇಕು. ಸಂಪರ್ಕ ಮೂಲಕ ಸೋಂಕು ಹರಡದಂತೆ ತಡೆಗಟ್ಟಲು ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳು ಚುರುಕುಗೊಳ್ಳಬೇಕಾದುದು ಅನಿವಾರ್ಯ ಎಂದು ಸಭೆ ತಿಳಿಸಿದೆ.
ಮಾಸ್ಕ್ ಧಾರಣೆ, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಸಾರ್ವಜನಿರಲ್ಲಿ ವಿನಂತಿಸಿದರು. ತಲಪ್ಪಾಡಿ ವರೆಗೆ ಎಲ್ಲ ಬಸ್ ಗಳೂ ಸಂಚಾರ ನಡೆಸುವಂತೆ ಅವರು ತಿಳಿಸಿದರು.
ಮದುವೆ, ವೈದ್ಯಕೀಯ ಅಗತ್ಯಗಳಿಗೆ ಇತರೆಡೆಗಳಿಂದ ಜಿಲ್ಲೆಗೆ ಆಗಮಿಸುವವರು ಕೋವಿಡ್ 19 ಜಾಗ್ರತಾ ವೆಬ್ ಸೈಟ್ ನಲ್ಲಿ ಶಾರ್ಟ್ ಟೈಂ ವಿಸ್ಟ್ ಎಂಬ ಲಿಂಕ್ ನಲ್ಲಿ ನೋಂದಣಿ ನಡೆಸಿ ಪಾಸ್ ಪಡೆದು ಆಗಮಿಸಬಹುದು. ವೈದ್ಯಕೀಯ ಅಗತ್ಯದವರು ಲಿಂಕ್ ನಲ್ಲಿ ನೋಂದಣಿ ನಡೆಸುವ ವೇಳೆ ಚಿಕಿತ್ಸೆ ಪಡೆಯುವ ಆಸ್ಪತ್ರೆಯ ವಿಳಾಸ ಫ್ರಂ(from) ಎಂಬ ಕಾಲಂನಲ್ಲೂ, ರೋಗಿಯ ಮನೆಯ ವಿಳಾಸ ಟು(to) ಎಂಬ ಕಾಲಂ ನಲ್ಲೂ ದಾಖಲಿಸಬೇಕು.


