ಲಡಾಕ್: ಭಾರತ-ಚೀನಾ ಗಡಿಯ ಪೂರ್ವ ಲಡಾಕ್ ನಲ್ಲಿನ ವಾಸ್ತವ ಸಂಗತಿಗಳನ್ನು ತಿಳಿದುಕೊಳ್ಳಲು ಮತ್ತು ಚೀನಾದ ಮಿಲಿಟರಿ ಜೊತೆಗೆ ನಡೆದಿರುವ ಮಾತುಕತೆಯ ಬೆಳವಣಿಗೆಗಳ ಕುರಿತು ಪರಾಮರ್ಶೆ ನಡೆಸಲು ಲಡಾಕ್ ಭೇಟಿಯಲ್ಲಿರುವ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಬುಧವಾರ ಪೂರ್ವ ಲಡಾಕ್ ನ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿ ಸೇನಾಪಡೆಗಳೊಂದಿಗೆ ಸಂವಾದ ನಡೆಸಿದ್ದಾರೆ.
ನಿನ್ನೆ ಪೂರ್ವ ಲಡಾಕ್ ಗೆ ಭೇಟಿ ನೀಡಿದ ಜ.ಎಂ.ಎಂ.ನರವಣೆ ಅವರನ್ನು ಯೋಧರು ಗೌರವಾದರಗಳಿಂದ ಬರಮಾಡಿಕೊಂಡರು. ಅವರನ್ನು ಮಾತನಾಡಿಸಿ ಅಲ್ಲಿನ ಪರಿಸ್ಥಿತಿ ತಿಳಿದುಕೊಂಡರು. ಈ ಕಠಿಣ ಪರಿಸ್ಥಿತಿಯಲ್ಲಿ ನೀವು ತೋರುತ್ತಿರುವ ಮನೋಸ್ಥೈರ್ಯ, ಉತ್ಸಾಹ ಮೆಚ್ಚುವಂಥದ್ದು, ಇದನ್ನು ಮುಂದುವರಿಸಿ ಎಂದು ಹುರಿದುಂಬಿಸಿದರು.
ಮೊನ್ನೆ ಲೇಹ್ ಗೆ ತೆರಳಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಾಮರ್ಶೆ ನಡೆಸಿದ್ದ ಜ.ಎಂ.ಎಂ.ನರವಣೆ ನಂತರ ಲಡಾಕ್ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಜೊತೆ ಕೂಡ ಮಾತುಕತೆ ನಡೆಸಿದ್ದರು. ಉತ್ತರ ಭಾಗದ ಸೇನಾ ಕಮಾಂಡರ್ ಮತ್ತು ಲೇಹ್ ಕಾಪ್ರ್ಸ್ ಕಮಾಂಡರ್ ಕೂಡ ಸಂವಾದದ ವೇಳೆ ಹಾಜರಿದ್ದರು. ಕಳೆದ ಜೂನ್ 15ರಂದು ಘರ್ಷಣೆಯಲ್ಲಿ ಗಾಯಗೊಂಡು ಸೇನಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈನಿಕನನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.
ಕಳೆದ ಸೋಮವಾರ ಸೇನಾ ಮುಖ್ಯಸ್ಥರು ದೆಹಲಿಯಲ್ಲಿ ಸೇನೆಯ ಉನ್ನತ ಕಮಾಂಡರ್ ಗಳ ಜೊತೆ ದೇಶದ ಗಡಿ ಭಾಗದಲ್ಲಿ ಭದ್ರತೆ ಸ್ಥಿತಿಗತಿಗಳ ಕುರಿತು ಪರಾಮರ್ಶೆ ನಡೆಸಿದ್ದರು. ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಗಡಿ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿ, 43 ಮಂದಿ ಚೀನಾ ಯೋಧರು ಸಾವು-ನೋವು ಕಂಡ ಬಳಿಕ ಕೂಡ ಭಾರತ-ಚೀನಾ ಮಿಲಿಟರಿ ಮಟ್ಟದ ಮಾತುಕತೆಗಳನ್ನು ನಡೆಸುತ್ತಲೇ ಬಂದಿವೆ.


