ಕಾಸರಗೋಡು/ತುಮಕೂರು: ಪೆರಿಯ ಕೇಂದ್ರೀಯ ವಿ.ವಿ.ಯ ಕನ್ನಡ ವಿಭಾಗ ಮುಖ್ಯಸ್ಥ ಡಾ.ಸ್ವಾಮಿ.ನಾ.ಕೋಡಿಹಳ್ಳಿ(35) ಅವರು ಭಾನುವಾರ ತುಮಕೂರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟರು.
ಮೂಲತಃ ತುಮಕೂರು ಕೋರಾ ಹೋಬಳಿಯ ಕೆಸ್ತೂರ್ ಕೋಡಿಹಳ್ಳಿ ನಿವಾಸಿ ದಿ.ನರಸಿಂಹ-ನರಸಮ್ಮ ದಂಪತಿಗಳ ಪುತ್ರನಾದ ಡಾ.ಸ್ವಾಮಿ ನಾ.ಕೋಡಿಹಳ್ಳಿ ಅವರು ತುಮಕೂರು ವಿ.ವಿ.ಯಿಂದ ಕನ್ನಡ ಎಂ.ಎ.ಗಳಿಸಿ ಬಳಿಕ ಬೆಳಗಾವಿ ವಿ.ವಿ.ಯಿಂದ ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಭಾಷಾ ವಿಜ್ಞಾನದ ಅನ್ವಯಿಕತೆ ಎಂಬ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ.ಪದವಿ ಗಳಿಸಿಕೊಂಡವರಾಗಿದ್ದರು. ತಮ್ಮ ಆರಂಭಿಕ ಉದ್ಯೋಗವನ್ನು ಕಾಸರಗೋಡಿನಿಂದಲೇ ಆರಂಭಿಸಿ ಪೆರಿಯ ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ಊರು ಕೋಡಿಹಳ್ಳಿಗೆ ತೆರಳಿದ್ದರು. ಭಾನುವಾರ ಮಧ್ಯಾಹ್ನ ತಮ್ಮ ಅತ್ತೆ ಉಗ್ರಮ್ಮ ಅವರೊಂದಿಗೆ ಸಂಚರಿಸುತ್ತಿದ್ದಾಗ ತುಮಕೂರು ಚೆಕ್‍ಪೋಸ್ಟ್ ಸನಿಹ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಅಪಘಾತ ಸಂಭವಿಸಿದ್ದು ಇಬ್ಬರೂ ಮೃತಪಟ್ಟರು.
ಮಿತಭಾಷಿ-ವಿಶಾಲ ಚಿಂತಕ:
ಡಾ.ಸ್ವಾಮಿ ನಾ.ಕೋಡಿಹಳ್ಳಿ ಅವರು ಕೇಂದ್ರೀಯ ವಿ.ವಿ.ಕನ್ನಡ ವಿಭಾಗ ಮುಖ್ಯಸ್ಥರಾಗಿ ವೃತ್ತಿ ಆರಂಭಿಸಿದಂದಿನಿಂದ ಜಿಲ್ಲೆಯ ಎಲ್ಲ ಕನ್ನಡ ಸಾಹಿತ್ಯ-ಭಾಷಾ-ಕಲಾ ಪ್ರೇಮಿಗಳೊಂದಿಗೆ ನಿಕಟ ಸಂಬಂಧ ಹೊಂದಿದವರಾಗಿದ್ದರು. ಮಿತ ಭಾಷಿಯಾದ ಅವರು ಪೆರಿಯ ಕೇಂದ್ರೀಯ ವಿ.ವಿ.ಯಲ್ಲಿ ಹೊಸತಾಗಿ ಆರಂಭಗೊಂಡ ಕನ್ನಡ ಅಧ್ಯಯನ ಕೇಂದ್ರದ ಸಮಗ್ರ ಅಭಿವೃದ್ದಿಗೆ ತೊಂಕಕಟ್ಟಿ ಕಾರ್ಯನಿರ್ವಹಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿ, ಸಾಹಿತ್ಯ, ಕಲಾ ಕ್ಷೇತ್ರದ ಸ್ನೇಹಿತರೊಂದಿಗೆ ಸಸ್ನೇಹಿಯಾಗಿ, ಆತ್ಮೀಯ ಗೆಳೆಯರ ಆತ್ಮಸಂಗಾತರಾಗಿ ಮರೆಯಲಾರದ ಸ್ನೇಹ ವಲಯ ಹೊಂದಿದ್ದರು.
ಮೃತರು ತಾಯಿ, ಪತ್ನಿ, ಸಹೋದರ, ಸಹೋದರಿಯ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.


