ವಾಷಿಂಗ್ಟನ್: ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಭಾರತ ಮತ್ತು ಬೇರೆ ಬೇರೆ ದೇಶಗಳ ರಾಜಕೀಯ ಮುಖಂಡರ ಕುರಿತು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಬರೆದಿರುವ ಆತ್ಮಚರಿತ್ರೆ ಒಂದೇ ವಾರದಲ್ಲಿ 17 ಲಕ್ಷ ಕಾಪಿ ಸೇಲ್ ಆಗಿದೆ!
'ಎ ಪ್ರಾಮಿಸ್ಡ್ ಲ್ಯಾಂಡ್' ಎಂಬ ಹೆಸರಿನ ಈ ಪುಸ್ತಕ ಪ್ರಕಟಗೊಂಡ ನಾಲ್ಕೇ ಗಂಟೆಯಲ್ಲಿ 8.90 ಲಕ್ಷ ಪ್ರತಿಗಳು ಮಾರಾಟವಾಗಿ ದಾಖಲೆ ಸೃಷ್ಟಿಸಿತ್ತು. ಈ ಮೂಲಕ ಒಂದೇ ವಾರದಲ್ಲಿ ಅತಿ ಹೆಚ್ಚು ಮಾರಾಟವಾದ 'ನಾನ್-ಫಿಕ್ಷನ್' ಪುಸ್ತಕ ಎಂಬ ಹಿರಿಮೆ ಇವರ ಆತ್ಮಚರಿತ್ರೆ ಪಾತ್ರವಾಗಿದೆ.
ಮೊದಲ ದಿನದ ಭರ್ಜರಿ ಮಾರಾಟದ ಹಿನ್ನೆಲೆಯಲ್ಲಿ ಆರಂಭಿಕ ಮುದ್ರಣವನ್ನು 34 ಲಕ್ಷ ಪ್ರತಿಗಳಿಂದ 43 ಲಕ್ಷ ಪ್ರತಿಗಳಿಗೆ ಹೆಚ್ಚಿಸಲಾಗಿತ್ತು. ಆಡಿಯೋ ಮತ್ತು ಡಿಜಿಟಲ್ ಪುಸ್ತಕ ಕೂಡ ಮಾರಾಟವಾಗುತ್ತಿದೆ. ಒಬಾಮ ಅವರ ಪತ್ನಿ ಮಿಶೆಲ್ ಒಬಾಮ ಅವರ ಆತ್ಮಚರಿತ್ರೆ 'ಬಿಕಮಿಂಗ್' 2018ರಲ್ಲಿ ಬಿಡುಗಡೆಯಾಗಿತ್ತು. ವಿಶ್ವದಾದ್ಯಂತ ಅದರ 1 ಕೋಟಿ ಪ್ರತಿಗಳು ಮಾರಾಟವಾಗಿವೆ. ಈಗಲೂ ಈ ಪುಸ್ತಕ ಅಮೆಜಾನ್ ಡಾಟ್ ಕಾಮ್‌ನಲ್ಲಿ ಟಾಪ್ 20ರಲ್ಲಿದೆ.
768 ಪುಟಗಳಿರುವ ಈ ಪುಸ್ತಕ ಇದೇ 17ರಂದು ಬಿಡುಗಡೆಗೊಳ್ಳಲಿದೆ. ಇದರಲ್ಲಿ ಅವರು ತಮ್ಮ ಬಾಲ್ಯಾವಸ್ಥೆಯಿಂದ ಹಿಡಿದು ರಾಜಕೀಯವಾಗಿ ಉತ್ತುಂಗಕ್ಕೇರಿದ ಘಟನೆಗಳನ್ನು ಮೆಲುಕು ಹಾಕಿದ್ದಾರೆ.
ಒಬಾಮಾ 2009ರಿಂದ 2017ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದರು. 2013-14ರವರೆಗೆ ಭಾರತದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಆಗ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರೊಂದಿಗೆ ಒಬಾಮಾ ಸಂಪರ್ಕದಲ್ಲಿ ಇದ್ದರು. ಆ ಸಂದರ್ಭದಲ್ಲಿ ಇವರೆಲ್ಲರೂ ವ್ಯವಹರಿಸಿದ ರೀತಿಯ ಕುರಿತು ತಮ್ಮ ಅನಿಸಿಕೆಗಳನ್ನು ನೇರವಾಗಿ ಒಬಾಮಾ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋನಿಯಾಗಾಂಧಿ ಕುಟುಂಬದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಕುರಿತ ವಿವಾದ ಕೋರ್ಟ್ ಮೆಟ್ಟಿಲು ಕೂಡ ಏರಿದೆ.
ರಾಹುಲ್ ಗಾಂಧಿಯವರು ಪುಕ್ಕಲು ಮತ್ತು ಅಸ್ಥಿರ ಗುಣಗಳನ್ನು ಹೊಂದಿದ್ದಾರೆ. ಶಿಕ್ಷಕರ ಮೆಚ್ಚುಗೆ ಗಳಿಸಲು ಪ್ರಯತ್ನಿಸುವ ಆದರೆ ಯಾವುದೇ ವಿಷಯದ ಬಗ್ಗೆ ಪರಿಣತಿ ಸಾಧಿಸುವ ಪ್ರವೃತ್ತಿ ಮತ್ತು ಒಲವು ಹೊಂದಿಲ್ಲದ ವಿದ್ಯಾರ್ಥಿಯಂತೆ ಕಾಣುತ್ತಾರೆ ಎಂದು ಹೇಳಿದ್ದಾರೆ.
ಪಠ್ಯವನ್ನು ಓದಿ ಮುಗಿಸಿ ಶಿಕ್ಷಕರಿಗೆ ಒಪ್ಪಿಸುವ ತವಕದಲ್ಲಿರುವ ವಿದ್ಯಾರ್ಥಿಯಂತೆ ರಾಹುಲ್ ಕಾಣುತ್ತಾರೆ. ಪಠ್ಯವಿಷಯಗಳನ್ನು ಸಂಪೂರ್ಣ ಕರಗತ ಮಾಡಿಕೊಳ್ಳುವ ಚಾತುರ್ಯತೆ ಅಥವಾ ಅಭಿಲಾಷೆ ಇಲ್ಲದ ವಿದ್ಯಾರ್ಥಿಯಾಗಿ ತೋರುವ ಅವರಲ್ಲಿ ಸದಾ ಒಂದು ರೀತಿಯ ತಳಮಳ, ಅಸ್ಪಷ್ಟ ಗುಣ ಇದೆ ಎಂದು ಪುಸ್ತಕದಲ್ಲಿ ಒಬಾಮಾ ವಿಶ್ಲೇಷಿಸಿದ್ದಾರೆ.
ಸೋನಿಯಾಗಾಂಧಿಯವರು ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಏಕೆ ಬಿಟ್ಟುಕೊಟ್ಟರು ಎಂಬ ವಿಚಾರದ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೆ ಕಾರಣ ನೀಡಿರುವ ಒಬಾಮಾ, ರಾಹುಲ್ ಗಾಂಧಿಯ ರಾಜಕೀಯ ಬೆಳವಣಿಗೆಗೆ ಮೃದು ಸ್ವಭಾವದ ಮನಮೋಹನ್ ಸಿಂಗ್ ಯಾವುದೇ ಕಾರಣಕ್ಕೂ ಮುಳುವಾಗಲಾರರು ಎಂಬುದನ್ನು ಅರಿತೇ ಸೋನಿಯಾ ಗಾಂಧಿ ಈ ನಿರ್ಧಾರ ಕೈಗೊಂಡಿದ್ದಾರೆ. ಯಾವುದೇ ರಾಷ್ಟ್ರ ರಾಜಕಾರಣದ ಹಿನ್ನೆಲೆ ಹೊಂದಿರದ ಮನಮೋಹನ್ ಸಿಂಗ್ ತಮ್ಮ ಮಗನ ರಾಜಕೀಯ ಬೆಳವಣಿಗೆಗೆ ತೊಡಕಾಗೋದಿಲ್ಲ ಅನ್ನುವುದು ಸೋನಿಯಾ ಗಾಂಧಿಯವರಿಗೆ ಗೊತ್ತಿತ್ತು ಎಂದು ಬರೆದಿದ್ದಾರೆ.


