ತಿರುವನಂತಪುರ: ರಾಜ್ಯದ 10 ಮತ್ತು 12 ನೇ ತರಗತಿಯ ಶಿಕ್ಷಕರು ಡಿಸೆಂಬರ್ 17 ರಿಂದ ಶಾಲೆಗೆ ಬರಲು ಹೊಸ ಆದೇಶ ನೀಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ನಿರ್ದೇಶನ ನೀಡಿದೆ.
ಪ್ರತಿದಿನ 50 ಶೇ.ದಷ್ಟು ಶಿಕ್ಷಕರು ಡಿಸೆಂಬರ್ 17 ರಿಂದ ಶಾಲೆಗಳಿಗೆ ಹಾಜರಾಗಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಕಲಿಕೆಯ ಮಟ್ಟವನ್ನು ಬಲಪಡಿಸುವ ಮತ್ತು ರಿವಿಷನ್ ತರಗತಿಗಳಿಗೆ ತಯಾರಿ ಮಾಡುವ ಕರ್ತವ್ಯವನ್ನು ಶಿಕ್ಷಕರು ಪೂರೈಸುವಂತೆ ಸೂಚಿಸಲಾಗಿದೆ.
ವರದಿಯ ಪ್ರಕಾರ, ಶಿಕ್ಷಣ ಇಲಾಖೆಯು ಜನವರಿ 15 ರಂದು ಹತ್ತನೇ ತರಗತಿಯ ಮತ್ತು ಜನವರಿ 30 ರಂದು ಪ್ಲಸ್ ಟು ತರಗತಿಯ ಡಿಜಿಟಲ್ ತರಗತಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ. ಬಳಿಕ ಮಕ್ಕಳಿಗೆ ಶಾಲೆಗೆ ಹೋಗಲು ಅವಕಾಶ ದೊರೆತಾಗ, ಡಿಜಿಟಲ್ ಕಲಿಕೆಯ ಆಧಾರದ ಮೇಲೆ ರಿವಿಷನ್ ತರಗತಿಗಳು ಮತ್ತು ಪ್ರಾಯೋಗಿಕ ತರಗತಿಗಳನ್ನು ನಡೆಸಲಾಗುತ್ತದೆ.
ಕೈಟ್ ಮತ್ತು ಎಸ್‍ಸಿಇಆರ್‍ಟಿ ಒದಗಿಸಿದ ಅಧ್ಯಯನ ವರದಿಯ ಆಧಾರದ ಮೇಲೆ 1 ರಿಂದ 12 ರವರೆಗೆ ಡಿಜಿಟಲ್ ತರಗತಿಗಳನ್ನು ಆಯೋಜಿಸಲಾಗುವುದು. ರಾಜ್ಯದ ಶಾಲೆಗಳು ಮತ್ತು ಕಾಲೇಜುಗಳನ್ನು ಶೀಘ್ರದಲ್ಲೇ ಮತ್ತೆ ತೆರೆಯಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಹೇಳಿದ್ದರು. ಈ ನಿಟ್ಟಿನಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ತಜ್ಞರೊಂದಿಗೆ ಅಗತ್ಯ ಚರ್ಚೆ ನಡೆಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದ್ದರು.
ಸಾರ್ವತ್ರಿಕ ಪರೀಕ್ಷೆಗಳ ಮೂಲಕ ಮೌಲ್ಯಮಾಪನ ಮಾಡಲಾಗುವ ಉನ್ನತ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳು ಮತ್ತು ಕಾಲೇಜುಗಳನ್ನು ಪರಿಗಣಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಮಂಗಳವಾರ ಹೇಳಿದ್ದಾರೆ.


