ಲಖನೌ: ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಯಾಗರಾಜ್‌ನಲ್ಲಿ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮದಲ್ಲಿ ಗುರುವಾರ ಪುಣ್ಯಸ್ನಾನ ಮಾಡಿ, ಮನಕಾಮೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಗಮನ ಸೆಳೆದರು.
ಕಾಂಗ್ರೆಸ್ ಪಕ್ಷ ಮುಸ್ಲಿಂ ಪಕ್ಷಪಾತಿ ಅಲ್ಲ ಹಾಗೂ ಮೃದು ಹಿಂದುತ್ವ ಪಾಲಿಸುತ್ತದೆ ಎಂಬ ಸಂದೇಶವನ್ನು ಪ್ರಿಯಾಂಕಾ ಅವರು ಈ ನಡೆ ಮೂಲಕ ರವಾನಿಸುವ ಪ್ರಯತ್ನ ಮಾಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಮೌನಿ ಅಮಾವಾಸ್ಯೆಯಂದು ದೇಶದ ಹಲವೆಡೆ ನದಿಗಳ ಸಂಗಮ ಸ್ಥಳದಲ್ಲಿ ಜನರು ಪುಣ್ಯಸ್ನಾನ ಮಾಡುವ ರೂಢಿ ಇದೆ.
ಪುತ್ರಿ ಮಿರಾಯಾಳೊಂದಿಗೆ ಪುಣ್ಯಸ್ನಾನ ಮಾಡಿದ ಪ್ರಿಯಾಂಕಾ, ಸಂಪ್ರದಾಯದಂತೆ ನದಿ ದಡದಲ್ಲಿ ಕಾಯಿ ಒಡೆದು, ಹೂ ಅರ್ಪಿಸಿ ಪೂಜೆ ನೆರವೇರಿಸಿದರು. ಮುಂಗೈಯಲ್ಲಿ ರುದ್ರಾಕ್ಷ ಮಣಿಯನ್ನೂ ಧರಿಸಿದ್ದರು.
ಮನಕಾಮೇಶ್ವರ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಪಡೆದ ನಂತರ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರನ್ನೂ ಭೇಟಿಯಾಗಿ, ಆಶೀರ್ವಾದ ಪಡೆದರು.
ಇದಕ್ಕೂ ಮೊದಲು ಅವರು ಇಲ್ಲಿನ ಆನಂದಭವನದಲ್ಲಿರುವ ಜವಾಹರಲಾಲ್ ನೆಹರು ಸ್ಮೃತಿ ಸ್ಥಳಕ್ಕೆ ಭೇಟಿ ನೀಡಿ, ಪುಷ್ಪನಮನ ಸಲ್ಲಿಸಿದರು. ಅಲ್ಲಿರುವ ಅನಾಥಾಶ್ರಮದ ಮಕ್ಕಳೊಂದಿಗೆ ಕೆಲ ಕಾಲ ಕಳೆದರು.
ಈ ಎಲ್ಲ ಸಂದರ್ಭಗಳಲ್ಲಿ ಅವರು ಮಾಧ್ಯಮಗಳೊಂದಿಗೆ ಅಂತರ ಕಾಯ್ದುಕೊಂಡರು. ಕೆಲವೊಮ್ಮೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆಗಳನ್ನು ಕೇಳಿದರೂ ಅವರು ಉತ್ತರಿಸದೇ ಮುಂದೆ ಸಾಗಿದರು.
ಬುಧವಾರ ಅವರು ಸಹಾರನ್‌ಪುರದಲ್ಲಿರುವ ಶಾಕಾಂಬರಿ ದೇವಿ ದೇವಸ್ಥಾನಕ್ಕೆ ತೆರಳಿ, ಪೂಜೆ ನೆರವೇರಿಸಿದ್ದರು.
ಪುಣ್ಯಸ್ನಾನ ಮಾಡಿ, ದೇವಸ್ಥಾನಕ್ಕೆ ಭೇಟಿ ನೀಡಿರುವ ಪ್ರಿಯಾಂಕಾ ಅವರ ಈ ನಡೆಗೆ ಅನೇಕ ಮಠಾಧೀಶರಿಂದ ಮೆಚ್ಚುಗೆ ವ್ಯಕ್ತವಾಗಿದೆ. 'ಪಕ್ಷದ ನಾಯಕರು ಇದೇ ರೀತಿ ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಮುಂದುವರಿಸಿದ್ದೇ ಆದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬಹುದು' ಎಂದು ಮಠಾಧೀಶರೊಬ್ಬರು ಅಭಿಪ್ರಾಯಪಟ್ಟರು.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, 'ಕೇಸರಿ ಪಕ್ಷವು ತೋರಿರುವ ಮಾರ್ಗದಲ್ಲಿ ಈಗ ಕಾಂಗ್ರೆಸ್ ಸಾಗುತ್ತಿದೆ ಎಂಬುದಕ್ಕೆ ಪ್ರಿಯಾಂಕಾ ಗಾಂಧಿ ಅವರ ಈ ನಡೆ ಸಾಕ್ಷಿ' ಎಂದಿದ್ದಾರೆ.