ಪಾಲಕ್ಕಾಡ್ : ಕೇರಳದಲ್ಲಿ ಬಿಜೆಪಿ ಬಹುಮತ ಸಿಗಬಹುದು ಅಥವಾ ಕಿಂಗ್ ಮೇಕರ್ ಆಗಲು ಸಾಕಷ್ಟು ಸ್ಥಾನಗಳು ಸಿಗಬಹುದು ಎಂದು ಮೆಟ್ರೋ ಮ್ಯಾನ್ ಇ ಶ್ರೀಧರನ್ ಹೇಳಿದ್ದಾರೆ.
ಶ್ರೀಧರನ್ ತಾವು ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಖಂಡಿತವಾಗಿಯೂ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗೆ ಕೇರಳದಲ್ಲಿ ಉತ್ತಮ ಭವಿಷ್ಯವಿದೆ. ಈ ಬಾರಿ ಬಹುಮತ ಪಡೆದುಕೊಂಡು ಕಿಂಗ್ ಮೇಕರ್ ಆಗಲಿದೆ. ಬಿಜೆಪಿಗೆ ಮತ ಹಾಕುವುದರಿಂದ ಕೇರಳದ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದರು. ಕೇರಳದಲ್ಲಿ ಬಿಜೆಪಿ ಸ್ಥಾನಗಳನ್ನು ಗೆಲ್ಲುವ ಉತ್ತಮ ನಿರೀಕ್ಷೆಯನ್ನು ಹೊಂದಿದೆ. ಇದು ಸಂಪೂರ್ಣ ಬಹುಮತವಾಗಿರಬಹುದು ಅಥವಾ ಪ್ತವೇಶಿಸಲು ಬೇಕಾದ ಸಂಖ್ಯೆಯನ್ನು ಹೊಂದಿರಬಹುದು.
ಪಾಲಕ್ಕಾಡ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ನಲ್ಲಿ ಭಾಗಿಯಾಗಿದ್ದರು. ಕೇರಳದಲ್ಲಿ ಯಾವುದೇ ಕೈಗಾರಿಕೆಗಳಿಲ್ಲ, ಕೈಗಾರಿಕೆಗಳು ಮಾತ್ರ ರಾಜ್ಯಕ್ಕೆ ಸಂಪತ್ತನ್ನು ತರಬಲ್ಲವು. ಹೆಚ್ಚು ನಿರುದ್ಯೋಗವಿದ್ದು, ಉದ್ಯೋಗ ಸೃಷ್ಟಿಯ ಅಗತ್ಯವಿದೆ ಎಂದರು.
ಶಿಕ್ಷಣ ವ್ಯವಸ್ಥೆ ಗುಣಮಟ್ಟವನ್ನು ಹೆಚ್ಚಿಸಲು ನಾನು ಪ್ರಯತ್ನಿಸುತ್ತೇನೆ, ಪಾರದರ್ಶಕ, ಪರಿಣಾಮಕಾರಿ ಮತ್ತು ಭ್ರಷ್ಟಾಚಾರ ರಹಿತ ಸರ್ಕಾರವನ್ನು ತರಲು ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಭಾರತದ 'ಮೆಟ್ರೋ ಮ್ಯಾನ್' ಎಂದೇ ಜನಪ್ರಿಯರಾಗಿರುವ ಶ್ರೀಧರನ್ ಅವರು 2011ರಲ್ಲಿ ದೆಹಲಿ ಮೆಟ್ರೋ(Metro) ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಇನ್ನು ದೇಶದ ಇತರ ಮೆಟ್ರೋ ಪ್ರಾಜೆಕ್ಟ್ʼಗಳಾದ ಜೈಪುರ, ಲಖನೌ ಮತ್ತು ಕೊಚ್ಚಿಯಲ್ಲಿ ಎಂಜಿನಿಯರ್ ಆಗಿಯೂ ಕೂಡ ಭಾಗಿಯಾಗಿದ್ದಾರೆ. 2001ರಲ್ಲಿ ಇವರಿಗೆ ಪದ್ಮಶ್ರೀ ಹಾಗೂ 2008ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಗೌರವ ಲಭಿಸಿದೆ.
ಕೇರಳ ವಿಧಾನಸಭೆ ಚುನಾವಣೆ 2021ರಲ್ಲಿ ಮತಗಟ್ಟೆಗಳ ಸಂಖ್ಯೆಯನ್ನು 21,498ಕ್ಕೆ ಹೆಚ್ಚಿಸಲಾಗಿದೆ. ಏಪ್ರಿಲ್ 6 ರಂದು ಚುನಾವಣೆ ನಡೆಯಲಿದ್ದು, ಮೇ 2ಕ್ಕೆ ಫಲಿತಾಂಶ ಹೊರಬೀಳಲಿದೆ.





