ಕಾಸರಗೋಡು : ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಜೀವನದ ಬಹುಭಾಗವನ್ನು ದೇಶದ ಭದ್ರತೆಗಾಗಿ ಮೀಸಲಿಟ್ಟು ಕಷ್ಟದ ಪರಿಸ್ಥಿತಿಯಲ್ಲಿ ಬದುಕಬೇಕಾಗಿ ಬಂದ ಸೈನಿಕರ ಮೇಲಿನ ನಮ್ಮ ಜವಾಬ್ದಾರಿಯನ್ನು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ನೆನಪಿಸುತ್ತದೆ ಎಂದು ಎಂಡೋಸಲ್ಫಾನ್ ಡೆಪ್ಯೂಟಿ ಕಲೆಕ್ಟರ್ ಲಿಪು ಎಸ್ ಲಾರೆನ್ಸ್ ಅವರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಮಿನಿ ಕಾನ್ಫರೆನ್ಸ್ ಹಾಲ್‍ನಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ದೇಶ ಸೇವೆಗಾಗಿ ಪ್ರಾಣ ಕಳೆದುಕೊಂಡ ಸೈನಿಕರಿಗೆ ನಮ್ಮ ಋಣ ಕೇವಲ ನಿಧಿ ಸಂಗ್ರಹಕ್ಕೆ ಸೀಮಿತವಾಗಿಲ್ಲ ಎಂದು ಅವರು ಹೇಳಿದರು.ನಾಗರಿಕರು ದೇಶ ಸೇವೆ ಮಾಡಲು ಮತ್ತು ಮಾದಕವಸ್ತು ಸೇರಿದಂತೆ ಅಪಾಯಗಳಿಂದ ಮುಕ್ತಗೊಳಿಸಲು ಎನ್‍ಸಿಸಿ ಕೆಡೆಟ್‍ಗಳು ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಉಪ ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕ ಮತ್ತು ಗಾಂಧಿ ಪ್ರತಿಮೆಗೆ ಉಪ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪುಷ್ಪಾಂಜಲಿ ಸಲ್ಲಿಸಲಾಯಿತು. ನಂತರ ಮಿನಿ ಕಾನ್ಫರೆನ್ಸ್ ಹಾಲ್‍ನಲ್ಲಿ ನಡೆದ ಸಭೆಯಲ್ಲಿ ನಿವೃತ್ತ ಸೇನಾಧಿಕಾರಿ ಸ್ಕ್ವಾಡ್ರನ್ ಲೀಡರ್ ನಾರಾಯಣನ್ ನಾಯರ್ ಮಾತನಾಡಿದರು. ಜಿಲ್ಲಾ ಸೈನಿಕ ಕಲ್ಯಾಣಾಧಿಕಾರಿ ಸಿ.ಜೆ. ಜೋಸೆಫ್ ಸ್ವಾಗತಿಸಿದರು ಮತ್ತು ಜಿಲ್ಲಾ ಸೈನಿಕ ಕಲ್ಯಾಣ ಕಚೇರಿಯ ಉದ್ಯೋಗಿ ಎಂ. ಪವಿತ್ರನ್ ವಂದಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳು ಉಪ ಜಿಲ್ಲಾಧಿಕಾರಿ ಲಿಪು ಎಸ್. ಲಾರೆನ್ಸ್ರವರಿಗೆ ಸಶಸ್ತ್ರ ಪಡೆಗಳ ಧ್ವಜವನ್ನು ನೀಡಿ ಧ್ವಜ ಮಾರಾಟಕ್ಕೆ ಚಾಲನೆ ನೀಡಿದರು. ವಿವಿಧ ಸರಕಾರಿ ನೌಕರರು ಮತ್ತು ಮಾಜಿ ಸೈನಿಕ ಸಂಘಟನೆಗಳ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.







