ಕುಂಬಳೆ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ದಿನಗಳು ಬಾಕಿ ಇರುವಂತೆ, ಪುತ್ತಿಗೆ ಪಂಚಾಯತಿ ಕಾಂಗ್ರೆಸ್ ಸಮಿತಿಯಲ್ಲಿ ಜನನ ಪ್ರಮಾಣಪತ್ರ ವಿವಾದ ಕಾವೇರಿದೆ. ಜನನ ಪ್ರಮಾಣಪತ್ರ ತಿದ್ದುಪಡಿ ಮಾಡಿದ ನಂತರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜುನೈದ್ ಅವರನ್ನು ಬ್ಲಾಕ್ ಪಂಚಾಯತ್ ಪುತ್ತಿಗೆ ವಿಭಾಗಕ್ಕೆ ಅಭ್ಯರ್ಥಿಯನ್ನಾಗಿ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ ಎಂದು ಕಿಸಾನ್ ರಕ್ಷಾ ಸೇನಾ ಜಿಲ್ಲಾಧ್ಯಕ್ಷ ಶುಕೂರ್ ಕೇನಾಜೆ ಕುಂಬಳೆಯಲ್ಲಿ ನಿನ್ನೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಜನಪ್ರತಿನಿಧಿಯಾಗಿ ಆಯ್ಕೆಯಾದರೆ ಜನರು ಯಾವ ರೀತಿಯ ಸೇವೆಯನ್ನು ನಿರೀಕ್ಷಿಸಬೇಕು ಎಂಬುದನ್ನು ಅವರು ತಮ್ಮದೇ ಆದ ಜನನ ಪ್ರಮಾಣಪತ್ರವನ್ನೂ ತಿದ್ದಿ ತೋರಿಸಿಕೊಂಡಿದ್ದಾರೆ. ಅರ್ಹ ನಾಯಕರನ್ನು ನಿರ್ಲಕ್ಷಿಸಿ ಕೆಲವರು ಜುನೈದ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಹೆಚ್ಚಿನ ನಾಯಕರು ಜುನೈದ್ ಅವರ ಉಮೇದುವಾರಿಕೆಯ ಬಗ್ಗೆ ಅತೃಪ್ತರಾಗಿದ್ದಾರೆ. ಅವರು ಅನೇಕ ಚುನಾವಣೆಗಳಲ್ಲಿ ಯುಡಿಎಫ್ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದವರು.
ತಾನು ಕಳೆದ ನಲ್ವತ್ತು ವರ್ಷಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯನಾಗಿರುವೆ. ತಾನು ಕಾಂಗ್ರೆಸ್‍ನ ವಿವಿಧ ಘಟಕಗಳಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವೆ. ಈ ನಿರ್ಲಕ್ಷ್ಯದ ವಿರುದ್ಧ ಮುಂದಿನ ದಿನಗಳಲ್ಲಿ ಇನ್ನಷ್ಟು ನಾಯಕರು ರಾಜೀನಾಮೆ ನೀಡಲು ಮುಂದೆ ಬರಲಿದ್ದಾರೆ.
ತಾನು ಕಟ್ಟಾ ಕಾಂಗ್ರೆಸ್ಸಿಗರಾಗಿರುವುದರಿಂದ, ವಾರ್ಡ್ ಮಟ್ಟ ಮತ್ತು ಇತರ ಹಂತಗಳಲ್ಲಿ ಯುಡಿಎಫ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವೆ. ಜುನೈದ್ ಅವರನ್ನು ಉಚ್ಚಾಟಿಸಿ ಅವರ ಉಮೇದುವಾರಿಕೆಯನ್ನು ಸ್ಥಗಿತಗೊಳಿಸುವ ಮೂಲಕ ಕಾಂಗ್ರೆಸ್ ಗೌರವ ತೋರಿಸಬೇಕು ಎಂದು ಶುಕೂರ್ ಕೇನಾಜೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಿಸಾನ್ ರಕ್ಷಾ ಸೇನಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಜಿ ಕಾಡಮನೆ, ಏಮ್ಸ್ ಜನಪರ ಕ್ರಿಯಾ ಸಮಿತಿ ಮಾಜಿ ಜಿಲ್ಲಾ ಖಜಾಂಚಿ ಅನಂತನ್ ಕೆ, ಮತ್ತು ಸಾಮಾಜಿಕ ಕಾರ್ಯಕರ್ತ ಬಶೀರ್ ನೆಡುಗಳ ಉಪಸ್ಥಿತರಿದ್ದರು.





