ನವದೆಹಲಿ: ಅಲೆಮಾರಿ ಜೀವನ ಕೊಟ್ಟ ದೇವರ ಮೇಲೆ ಕೋಪಗೊಂಡ ಯುವಕನೊಬ್ಬ ದೇವಸ್ಥಾನಕ್ಕೆ ಕಲ್ಲೆಸೆದಿದ್ದು ಇದೀಗ ಜೈಲುವಾಸ ಅನುಭವಿಸುವಂತಾಗಿದೆ.
ವಿಕ್ಕಿ ಮಲ್(28) ಹೆಸರಿನ ಯುವಕ ದೆಹಲಿಯ ಪಂಜಾಬಿ ಬಾಗ್ನಲ್ಲಿ ಕಸ ಹಾಯ್ದುಕೊಂಡು ಜೀವನ ನಡೆಸುತ್ತಿದ್ದಾನೆ. ಕಡುಬಡುತನದಲ್ಲಿರುವ ಅವನಿಗೆ ದೇವರ ಬಗ್ಗೆ ಅಪಾರ ಸಿಟ್ಟಿದೆಯಂತೆ. ನನ್ನದು ಅಲೆಮಾರಿ ಜೀವನ, ಅದಕ್ಕೆ ಕಾರಣ ದೇವರೇ ಎಂದು ಆತ ನಂಬಿದ್ದಾನೆ. ಅದೇ ಸಿಟ್ಟಿನಿಂದಾಗಿ ಶನಿವಾರ ಮುಂಜಾನೆ ದೇವಸ್ಥಾನದ ಬಳಿ ನಿಂತು ದೇವರತ್ತ ಕಲ್ಲು ಎಸೆದಿದ್ದಾನೆ. ನಿನ್ನಿಂದ ನನ್ನ ಬದುಕು ಹೀಗಿದೆ ಎನ್ನುವ ಸಿಟ್ಟನ್ನು ತೋಡಿಕೊಂಡಿದ್ದಾನೆ.
ಶುಕ್ರವಾರ ರಾತ್ರಿ ದೇವಸ್ಥಾನದಲ್ಲೇ ತಂಗಿದ್ದ ರಂಜೀತ್ ಫತಾಕ್ ಹೆಸರಿನ ವ್ಯಕ್ತಿಯಿಂದ ಈ ವಿಚಾರ ತಿಳಿದುಬಂದಿದೆ. ಅವರ ದೂರಿನ ಆಧಾರದ ಮೇಲೆ ದೇವಸ್ಥಾನದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ವಿಕ್ಕಿ ದೇವಸ್ಥಾನದ ಹೊರಗಡೆ ನಿಂತು ಕಲ್ಲು ಎಸೆದಿರುವುದು ಅದರಲ್ಲಿ ಸೆರೆಯಾಗಿದ್ದು, ಇದೀಗ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೆಕ್ಷನ್ 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು) ಮತ್ತು ಐಪಿಸಿಯ ಸೆಕ್ಷನ್ 475 (ಅತಿಕ್ರಮಣ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


