ಬದಿಯಡ್ಕ: ಕೋವಿಡ್ ಸೋಂಕಿನ ಎರಡನೇ ಅಲೆಯ ತೀವ್ರ ಹರಡುವಿಕೆಯ ಮಧ್ಯೆ ಸರ್ಕಾರ ವೀಕೆಂಡ್ ನಿಯಂತ್ರಣಗಳನ್ನು ಹೇರುತ್ತಿದ್ದು, ಕೇರಳದಲ್ಲಿ ಮುಂದಿನ ಮೂರು ವಾರಗಳ ಕಾಲ ಶನಿವಾರ ಹಾಗೂ ಭಾನುವಾರ ಸಂಪೂರ್ಣ ನಿಯಂತ್ರಣಗಳಿಗೆ ಸರ್ಕಾರ ಆದೇಶ ನೀಡಿದೆ. ಜೀವನಾವಶ್ಯಕ ಅಗತ್ಯ ವಸ್ತುಗಳ ವ್ಯಾಪಾರ ಕೇಂದ್ರಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಹೋಟೆಲ್, ಇತರ ಅಂಗಡಿಗಳು, ವಾಹನ ಸಂಚಾರ ನಿಷೇಧಿಸಲಾಗಿದೆ. ಅನಗತ್ಯ ಪ್ರಯಾಣವನ್ನು ಮೊಟಕುಗೊಳಿಸಲು ಸರ್ಕಾರ ಸೂಚಿಸಿದ್ದು, ಕಾನೂನು ಮೀರಿದರೆ ಕಠಿಣ ನಿಲುವುಗಳನ್ನು ತಳೆಯಲು ಪೋಲೀಸರಿಗೆ ಅಧಿಕಾರ ನೀಡಲಾಗಿದೆ.
ಈ ಮಧ್ಯೆ ಕಾಸರಗೋಡು ಜಿಲ್ಲೆಯಲ್ಲೂ ನಿಯಂತ್ರಣಗಳ ಕರಿಛಾಯೆ ಗುರುವಾರದಿಂದಲೇ ಕಾಣಿಸತೊಡಗಿದ್ದು ಬಸ್ ಸಂಚಾರದಲ್ಲಿ ಬಹುತೇಕ ಜನದಟ್ಟಣೆ ಕುಸಿದಿದೆ. ಪೇಟೆಗಳಲ್ಲೂ ಜನಸಂಚಾರ ಗಮನಾರ್ಗ ಕಡಿತ ಕಂಡುಬಂದಿದೆ. ಕಾಸರಗೋಡು ಮಂಗಳೂರು ಅಂತರ್ ರಾಜ್ಯ ಹೆದ್ದಾರಿ ಬಸ್ ಸೇವೆಯಲ್ಲಿ ಜನರ ಕೊರತೆಯಿಂದ ಎರಡೂ ರಾಜ್ಯ ಸಾರಿಗೆ ಬಸ್ ಗಳು ಖಾಲಿಯಾಗಿ ಸಂಚರಿಸುತ್ತಿವೆ. ಜೊತೆಗೆ ಕಾಸರಗೋಡು ತಲಪಾಡಿ, ಕಾಸರಗೋಡು-ಸುಳ್ಯ, ಕಾಸರಗೋಡು-ಮುಳ್ಳೇರಿಯ, ಕಾಸರಗೋಡು ಪೆರ್ಲ, ಕಾಸರಗೋಡು-ಪುತ್ತೂರು, ಕುಂಬಳೆ-ಬದಿಯಡ್ಕ-ಮುಳ್ಳೇರಿಯ, ಕುಂಬಳೆ-ಪೆರ್ಲ, ತಲಪ್ಪಾಡಿ-ಮಂಜೇಶ್ವರ-ಹೊಸಂಗಡಿ-ವರ್ಕಾಡಿ,ಉಪ್ಪಳ-ಬಾಯಾರು, ಉಪ್ಪಳ-ವಿಟ್ಲ ಮೊದಲಾದ ಬಸ್ ರೂಟ್ ಗಲ್ಲಿ ಜನಸಂಚಾರ ಕಡಿಮೆಯಾಗಿದ್ದು, ಅಘೋಶಿತ ಬಂದ್ ನ ವಾತಾವರಣ ಪೇಟೆಗಳಲ್ಲಿ ಕಂಡುಬಂದಿದೆ.


