ನವದೆಹಲಿ: 'ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿವಸ. ಆ ದಿನದಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ' ಎಂದು ಪ್ರಧಾನಿ ನರೇದ್ರ ಮೋದಿ ಸೋಮವಾರ ಹೇಳಿದ್ದಾರೆ.
ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಶೇ 75ರಷ್ಟು ಲಸಿಕೆಯನ್ನು ಉಚಿತವಾಗಿ ಕೇಂದ್ರ ಸರ್ಕಾರವೇ ನೀಡಲಿದೆ. ಇದರಲ್ಲಿ ರಾಜ್ಯ ಸರ್ಕಾರಗಳ ಶೇ 25ರ ಪಾಲೂ ಸೇರಿದೆ. ರಾಜ್ಯ ಸರ್ಕಾರಗಳ ಪಾಲಿನ ಲಸಿಕೆಯನ್ನೂ ಕೇಂದ್ರ ಸರ್ಕಾರವೇ ಖರೀದಿಸಿ ಆಯಾ ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ' ಎಂದು ಹೇಳಿದ್ದಾರೆ.
ಶೇ 25ರಷ್ಟು ಲಸಿಕೆ ಖರೀದಿಗೆ ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗಿರುವ ಅವಕಾಶ ಮುಂದುವರಿಯಲಿದೆ. ಆದರೆ, ಅವರು ಅವರು ಗರಿಷ್ಠ ₹ 150 ಸೇವಾ ಶುಲ್ಕ ತೆಗೆದುಕೊಂಡು, ಲಸಿಕೆಯನ್ನು ನೀಡಬಹುದು. ಸಾಮರ್ಥ್ಯವಿದ್ದವರು ಲಸಿಕೆ ಖರೀದಿಸಲೂ ಈ ಮೂಲಕ ಅವಕಾಶ ನೀಡಲಾಗಿದೆ ಎಂದು ಮೋದಿ ಹೇಳಿದ್ದಾರೆ.
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ರಾಜ್ಯಗಳು ಅನ್‌ಲಾಕ್ ಪ್ರಕ್ರಿಯ ಆರಂಭಿಸಿವೆ. ಇಂಥ ಸಂದರ್ಭದಲ್ಲಿ ಲಸಿಕೆಯೇ ರಕ್ಷಣೆಗೆ ಪ್ರಮುಖ ಅಸ್ತ್ರವಾಗಿದೆ. ಮುಂದಿನ ದಿನಗಳಲ್ಲಿ ಲಸಿಕೆ ಪೂರೈಕೆ ಪ್ರಕ್ರಿಯೆ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಇಂದು, ದೇಶದಲ್ಲಿ 7 ಕಂಪನಿಗಳು ವಿಭಿನ್ನ ರೀತಿಯ ಲಸಿಕೆಗಳನ್ನು ಉತ್ಪಾದಿಸಲು ಆರಂಭಿಸಿವೆ. ಬೇರೆ ದೇಶಗಳಿಂದಲೂ ಲಸಿಕೆ ಖರೀದಿ ಪ್ರಕ್ರಿಯೆಗಳಿಗೆ ವೇಗ ನೀಡಲಾಗಿದೆ. ಮೂಗಿನ ಮೂಲಕ ಸಿಂಪಡಿಸಲಾಗುವ ಲಸಿಕೆಯ ಪ್ರಯೋಗವೂ ನಡೆಯುತ್ತಿದೆ. ಇದಕ್ಕೆ ಯಶಸ್ಸು ಸಿಕ್ಕಿದರೆ, ಭಾರತದ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಗುತ್ತದೆ ಎಂದು ಮೋದಿ ಹೇಳಿದ್ದಾರೆ.
'ರಾಜ್ಯಗಳಿಗೆ ಲಸಿಕೆ ನೀಡಿಕೆಯ ಸವಾಲು ಅರ್ಥವಾಗಿದೆ'
ಭಾರತದಂಥ ದೊಡ್ಡ ದೇಶದಲ್ಲಿ ಲಸಿಕೆ ನೀಡಿಕೆ ಅಭಿಯಾನ ಸವಾಲಿನಿಂದ ಕೂಡಿದ್ದಾಗಿದೆ. ಎಲ್ಲರಿಗೂ ಉಚಿತ ಲಸಿಕೆ ನೀಡುವ ನಿಟ್ಟಿನಲ್ಲಿ ದೇಶವು ಮುನ್ನಡೆಯುತ್ತಿದ್ದಾಗ ಹಲವು ಪ್ರಶ್ನೆಗಳು ಎದುರಾದವು ಎಂದು ಮೋದಿ ಹೇಳಿದ್ದಾರೆ.
'ಕೆಲವು ರಾಜ್ಯ ಸರ್ಕಾರಗಳು, ಲಸಿಕೆ ವಿತರಣೆಯನ್ನು ವಿಕೇಂದ್ರೀಕರಿಸಬೇಕು, ಕೇಂದ್ರವೇ ಯಾಕೆ ನಿರ್ಧರಿಸಬೇಕು ಎಂದು ಪ್ರಶ್ನಿಸಿದವು. ವೃದ್ಧರಿಗೇ ಏಕೆ ಲಸಿಕೆ ಮೊದಲು ನೀಡಬೇಕು? ಎಲ್ಲ ವರ್ಗದವರಿಗೆ ಯಾಕೆ ಕೊಡುತ್ತಿಲ್ಲ ಎಂಬೆಲ್ಲಾ ಪ್ರಶ್ನೆಗಳೂ ಕೇಳಿಬಂದವು. ರಾಜ್ಯಗಳ ಈ ಬೇಡಿಕೆಯನ್ನು ಮನಸ್ಸಿನಲ್ಲಿರಿಸಿಕೊಂಡು, ಶೇ 25ರಷ್ಟು ಲಸಿಕೆ ನೀಡಿಕೆ ಕೆಲಸವನ್ನು ಅವರಿಗೇ ನೀಡುವುದೆಂದು ತೀರ್ಮಾನಿಸಲಾಯಿತು. ಮೇ 1ರಿಂದ ಇದು ಜಾರಿಗೆ ಬಂತು. ಇಷ್ಟು ದೊಡ್ಡ ಕಾರ್ಯದಲ್ಲಿ ಏನೆಲ್ಲ ಕಷ್ಟ ಇದೆ ಎಂಬುದು ಈಗ ರಾಜ್ಯಗಳಿಗೂ ತಿಳಿಯತೊಡಗಿತು. ರಾಜ್ಯಗಳಿಗೂ ಪರಿಸ್ಥಿತಿಯು ಅರಿವಿಗೆ ಬಂದಿತು. ಲಸಿಕೆಗಾಗಿ ಜನರ ಸರದಿ ಹೆಚ್ಚತೊಡಗಿತು, ಮೇ ತಿಂಗಳ ಎರಡು ವಾರಗಳಲ್ಲಿ ಸಮಸ್ಯೆಯೂ ಹೆಚ್ಚಾಗತೊಡಗಿತು. ಇದನ್ನು ನೋಡಿ, ಲಸಿಕೆಯ ಕೆಲಸವನ್ನು ರಾಜ್ಯಗಳಿಗೇ ಬಿಡಬೇಕು ಎಂದು ಹೇಳಿದವರ ಮಾತುಗಳೂ ಬದಲಾಗತೊಡಗಿದವು. ಹೀಗಾಗಿ ಹಿಂದಿನ ವ್ಯವಸ್ಥೆಯೇ ಚೆನ್ನಾಗಿತ್ತು ಎಂದು ರಾಜ್ಯಗಳು ಹೇಳತೊಡಗಿದವು. ರಾಜ್ಯಗಳ ಈ ಸಮಸ್ಯೆಯಿಂದಾಗಿ, ದೇಶವಾಸಿಗಳಿಗೆ ಯಾವುದೇ ಸಮಸ್ಯೆಯಾಗಬಾರದೆಂಬ ಕಾರಣಕ್ಕೆ, ಮೇ 1ಕ್ಕಿಂತ ಹಿಂದಿನ ವ್ಯವಸ್ಥೆಯನ್ನೇ ಮರುಸ್ಥಾಪಿಸಲಾಯಿತು. ಲಸಿಕಾಕರಣದ ರಾಜ್ಯಗಳ ಶೇ 25 ಭಾಗವನ್ನೂ ಕೇಂದ್ರ ಸರ್ಕಾರವೇ ವಹಿಸಿಕೊಂಡಿತು. ಮುಂದಿನ ಎರಡು ವಾರಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿಕೊಂಡು, ಹೊಸ ಮಾರ್ಗಸೂಚಿ ಅನುಸರಿಸಬೇಕಿದೆ' ಎಂದು ಪ್ರಧಾನಿ ಹೇಳಿದ್ದಾರೆ.


