ಕಣ್ಣೂರು: ಮೊಬೈಲ್ ನಲ್ಲಿ ರೇಂಜ್ ಇಲ್ಲದ್ದರಿಂದ ಆನ್ ಲೈನ್ ವೀಕ್ಷಿಸಲು ಮರ ಹತ್ತಿದ ಬಾಲಕ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕನ್ನವಂ ಅರಣ್ಯ ವಲಯದ ಕಾಲೋನಿಯಲ್ಲಿ ವಾಸಿಸುವ ಪಿ. ಅನಂತು ಬಾಬು ಮರದಿಂದ ಬಿದ್ದ ವಿದ್ಯಾರ್ಥಿ. ಬಾಲಕನಿಗೆ ಬೆನ್ನುಮೂಳೆಗೆ ತೀವ್ರ ಪೆಟ್ಟಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮಧ್ಯಾಹ್ನ 12.30 ರ ಸುಮಾರಿಗೆ ಈ ಘಟನೆ ನಡೆದಿದೆ. ಆತನು ತನ್ನ ತಂಗಿಯ ಪ್ಲಸ್ ಒನ್ ತರಗತಿ ಪ್ರವೇಶಾತಿ ಅಲೋಟ್ ಮೆಂಟ್ ವೀಕ್ಷಿಸಲು ಮರವನ್ನು ಹತ್ತಿದನು. ಆದರೆ ಅಷ್ಟರಲ್ಲಿ ಆತ ನಿಯಂತ್ರಣ ತಪ್ಪಿ ಕೆಳಗಿನ ಬಂಡೆಗೆ ಬಿದ್ದು ತೀವ್ರ ಘಾಸಿಗೊಳಗಾದನು.
ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಮೊದಲು ಕೂತುಪರಂಬ ಆಸ್ಪತ್ರೆಗೆ ಮತ್ತು ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಇಲ್ಲಿಂದ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಜ್ಞ ಚಿಕಿತ್ಸೆಗಾಗಿ ವರ್ಗಾಯಿಸಲಾಯಿತು.
ಕಾಲೊನಿಯಲ್ಲಿ ಸುಮಾರು 110 ಕುಟುಂಬಗಳು ವಾಸಿಸುತ್ತವೆ. ಇಲ್ಲಿ ಸುಮಾರು 72 ವಿದ್ಯಾರ್ಥಿಗಳಿದ್ದಾರೆ. ಮೊಬೈಲ್ ರೇಂಜ್ ಇಲ್ಲದ ಕಾರಣ, ಅವರು ರೇಂಜ್ ಹುಡುಕಿ ಕುಳಿತು ಅಧ್ಯಯನ ಮಾಡಬೇಕಿತ್ತು. ಮೊಬೈಲ್ ಪೋನಿನ ರೇಂಕ್ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಕಾಲನಿ ನಿವಾಸಿಗಳು ಪದೇ ಪದೇ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕಾಲನಿÀಗೆ ಪ್ರವೇಶಿಸಲು ಉತ್ತಮ ರಸ್ತೆ ವ್ಯವಸ್ಥೆ ಇಲ್ಲದಿರುವುದೂ ಗಮನಾರ್ಹ.


