ಚೆನ್ನೈ: ತಮಗೆ ಸಂಬಂಧಿಸಿದ ವಿವಾದಾತ್ಮಕ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ತಮಿಳುನಾಡು ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕೆ.ಟಿ.ರಾಘವನ್ ಮಂಗಳವಾರ ರಾಜೀನಾಮೆ ನೀಡಿದರು.
ರಾಜೀನಾಮೆ ನಿರ್ಧಾರ ಕುರಿತು ಅವರು ಟ್ವೀಟ್ ಮಾಡಿದ್ದಾರೆ. 'ಮಹಿಳೆಯೊಂದಿಗೆ ವಿಡಿಯೊ ಕರೆಯಲ್ಲಿ ನಿರತನಾಗಿದ್ದೇನೆ ಎಂಬಂತೆ ತೋರಿಸಲಾಗಿದೆ. ಈ ವಿಡಿಯೊದಲ್ಲಿ ನನ್ನ ಪಾತ್ರವಿಲ್ಲ. ನನ್ನ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಈ ವಿಡಿಯೊ ಮಾಡಲಾಗಿದೆ' ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ವಿವಾದಾತ್ಮಕ ವಿಡಿಯೊ ವೈರಲ್ ಆಗಿರುವ ಕುರಿತು ಮಾಹಿತಿ ಸಿಗುತ್ತಿದ್ದಂತೆಯೇ ರಾಘವನ್ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಸಮಿತಿ ರಚನೆ: 'ರಾಘವನ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಅವರು ಹಾಗೂ ಪಕ್ಷದ ಇತರ ಕೆಲ ಕಾರ್ಯಕರ್ತರ ವಿರುದ್ಧ ಮಾಡಲಾಗಿರುವ ಆರೋಪಗಳ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ' ಎಂದು ಅಣ್ಣಾಮಲೈ ಸುದ್ದಿಗಾರರಿಗೆ ತಿಳಿಸಿದರು.
'ರಾಘವನ್ ತಾವು ನಿರಪರಾಧಿ ಎಂಬುದನ್ನು ಸಾಬೀತುಪಡಿಸುವರು ಎಂಬ ವಿಶ್ವಾಸ ಇದೆ' ಎಂದೂ ಹೇಳಿದರು.


