HEALTH TIPS

ಭಯಪಡಬೇಡಿ, ಮಕ್ಕಳ ಮೇಲೆ ಕೊರೊನಾ ಪ್ರಭಾವ ಪ್ರಬಲವಿರುವುದಿಲ್ಲ ಎಂದ WHO ವಿಜ್ಞಾನಿ

                 ನವದೆಹಲಿ: ದೇಶದಲ್ಲಿ ಸಂಭಾವ್ಯ ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುವ ಕುರಿತು ಹಲವು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್, ಸಮಾಧಾನಕರ ಸಂಗತಿಯನ್ನು ತಿಳಿಸಿದ್ದಾರೆ. 


           ಮಕ್ಕಳಲ್ಲಿ ಕೊರೊನಾ ಸೋಂಕಿನ ಪರಿಣಾಮ ಬಹುಪಾಲು ಸೌಮ್ಯವಾಗಿರುತ್ತದೆ. ವಯಸ್ಕರಂತೆ, ಮಕ್ಕಳಲ್ಲಿ ಸೋಂಕು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಅತಿ ಕಡಿಮೆ ಇದೆ ಎಂದಿದ್ದಾರೆ. ಇದಾಗ್ಯೂ ಎಚ್ಚರ ತಪ್ಪುವಂತಿಲ್ಲ ಎಂದು ತಿಳಿಸಿದ್ದಾರೆ.

           ಮಕ್ಕಳಲ್ಲಿನ ಕೊರೊನಾ ಸೋಂಕಿನ ಸಂಬಂಧ ಬೇರೆ ದೇಶಗಳಲ್ಲಿ ನಡೆಸಲಾಗಿರುವ ಸೆರೊ ಸರ್ವೇಗಳನ್ನು ಉಲ್ಲೇಖಿಸಿ ಮಾತನಾಡಿದ ಸೌಮ್ಯಾ ಸ್ವಾಮಿನಾಥನ್, 'ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಬಹುದು. ಆದರೆ ಬಹುಪಾಲು ಪ್ರಕರಣಗಳಲ್ಲಿ ಸೋಂಕು ಸೌಮ್ಯವಾಗಿರುವುದು ಕಂಡುಬಂದಿದೆ. ಸಣ್ಣ ಪ್ರಮಾಣದಷ್ಟು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಬಹುದು. ಕೆಲವೇ ಮಕ್ಕಳಿಗೆ ಆರೋಗ್ಯದಲ್ಲಿ ತೊಡಕು ಕಂಡುಬರಬಹುದು. ಮರಣ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ವಯಸ್ಕ ಜನಸಂಖ್ಯೆಗಿಂತ ಮಕ್ಕಳಲ್ಲಿ ಸೋಂಕಿನ ಪ್ರಭಾವ ಕಡಿಮೆಯಿರುತ್ತದೆ' ಎಂದು ಹೇಳಿದರು.

'ಹಾಗೆಂದು ನಿರ್ಲಕ್ಷ್ಯ ತೋರುವಂತಿಲ್ಲ. ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಒಳ್ಳೆಯದು' ಎಂದು ಸಲಹೆ ನೀಡಿದ್ದಾರೆ. ಮಕ್ಕಳ ದಾಖಲಾತಿ, ತೀವ್ರ ನಿಗಾ ಘಟಕ ವ್ಯವಸ್ಥೆಗಳೊಂದಿಗೆ ಆಸ್ಪತ್ರೆಗಳು ಸಿದ್ಧವಾಗಿರಬೇಕು. ಐಸಿಯುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ದಾಖಲಾದರೂ ಆತಂಕ, ಭಯ ಪಡಬಾರದು ಎಂದು ಹೇಳಿದ್ದಾರೆ.

              ಇದೇ ಸಂದರ್ಭ, ಕೊರೊನಾ ಸೋಂಕಿನ ವಿರುದ್ಧ ಬಳಸಲಾಗುತ್ತಿರುವ ರೆಮ್ಡೆಸಿವಿರ್ ಔಷಧದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 'ಕೊರೊನಾ ಸೋಂಕಿತರಿಗೆ ರೆಮ್ಡೆಸಿವಿರ್ ಔಷಧದಿಂದ ಕನಿಷ್ಠ ಲಾಭವಿದೆ. ಇದರಿಂದ ಸೋಂಕಿನಿಂದ ಮರಣ ಸಂಭವಿಸುವುದನ್ನು ತಡೆಯಲು ಸಾಧ್ಯವಾಗಿಲ್ಲ. ಜೊತೆಗೆ ಅದು ದುಬಾರಿ ಕೂಡ ಆಗಿದೆ' ಎಂದಿದ್ದಾರೆ. ಪರ್ಯಾಯ ಆಯ್ಕೆಗಳ ಕುರಿತು ಚಿಂತನೆ ನಡೆಸುತ್ತಿರುವುದಾಗಿಯೂ ಹೇಳಿದ್ದಾರೆ.

                            'ವಯಸ್ಕರ ಜೊತೆ ಮಕ್ಕಳು ಸೋಂಕಿಗೆ ತುತ್ತಾಗುವ ಸಾಧ್ಯತೆ'

          ದೇಶದಲ್ಲಿ ಕೊರೊನಾ ಮೂರನೇ ಅಲೆಯು ಸೆಪ್ಟೆಂಬರ್‌ನಲ್ಲಿ ಕಾಣಿಸಿಕೊಂಡು ಅಕ್ಟೋಬರ್‌ ತಿಂಗಳಿನಲ್ಲಿ ಉತ್ತುಂಗಕ್ಕೆ ಏರುತ್ತದೆ. ಆ ಅವಧಿಯಲ್ಲಿ ದಿನನಿತ್ಯ ನಾಲ್ಕರಿಂದ ಐದು ಲಕ್ಷದಷ್ಟು ಕೊರೊನಾ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

              ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್‌ಐಡಿಎಂ) ಅಕ್ಟೋಬರ್‌ನಲ್ಲಿ ಕೊರೊನಾ ಮೂರನೇ ಅಲೆ ಉತ್ತುಂಗಕ್ಕೆ ಹೋಗಿ ಅಪ್ಪಳಿಸುವ ಎಚ್ಚರಿಕೆಯನ್ನು ನೀಡಿದೆ. ಈ ಕುರಿತು ಪ್ರಧಾನಿ ಕಚೇರಿಗೆ ಆಗಸ್ಟ್‌ 23ರಂದು ವರದಿಯನ್ನೂ ಸಲ್ಲಿಸಿದೆ.

ವಯಸ್ಕರ ಜೊತೆ ಮಕ್ಕಳು ಸಹ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಅಗತ್ಯ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ವರದಿಯಲ್ಲಿ ತಜ್ಞರ ಸಮಿತಿ ಸಲಹೆಯನ್ನು ನೀಡಿದೆ. ಮಕ್ಕಳಿಗೂ ಕೊರೊನಾ ಲಸಿಕೆ ನೀಡಬೇಕು, ಅಂಗವಿಕಲರ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

            ಹಲವು ರಾಜ್ಯಗಳಲ್ಲಿ ಕೊರೊನಾ ಮೂರನೇ ಅಲೆ ಸವಾಲನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಕ್ಕಳಿಗಾಗಿಯೇ ವಿಶೇಷ ವಾರ್ಡ್‌, ಐಸಿಯುಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಲು ರಾಜ್ಯ ಸರ್ಕಾರಗಳು ಸೂಚಿಸಿವೆ.

             ಕೊರೊನಾ ಮೂರನೇ ಅಲೆ ನಮ್ಮ ನಡುವೆಯೇ ಆರಂಭವಾಗಿದೆ. ಕೆಲವು ರಾಜ್ಯಗಳಲ್ಲಿನ ಕೊರೊನಾ ಪ್ರಕರಣಗಳ ಅಂಕಿ ಸಂಖ್ಯೆಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಹೀಗಾಗಿ ಕೊರೊನಾ ಲಸಿಕೆ ಹಾಗೂ ಆರೋಗ್ಯ ವ್ಯವಸ್ಥೆಗಳತ್ತ ತುರ್ತು ಗಮನ ಹರಿಸಬೇಕಿದೆ ಎಂದು ತಜ್ಞರು ಸೂಚನೆ ನೀಡಿದ್ದಾರೆ.

            ಮೂರನೇ ಅಲೆ ಆತಂಕದ ನಡುವೆಯೇ ಕೊರೊನಾ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಿ ಹಲವು ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries