HEALTH TIPS

ZyCov-D ಲಸಿಕೆ ಉತ್ಪಾದನೆ ಮಾಡಲಿದೆ ಶಿಲ್ಪಾ ಮೆಡಿಕೇರ್

            ನವದೆಹಲಿ: ಭಾರತದ ಔಷಧ ತಯಾರಕ ಸಂಸ್ಥೆ ಶಿಲ್ಪಾ ಮೆಡಿಕೇರ್, ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್‌ನ ಮೂರು ಡೋಸ್ ಕೊರೊನಾ ಲಸಿಕೆಯನ್ನು ತಯಾರಿಸಲಿದೆ.

              12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲು ಅನುಮೋದನೆ ಪಡೆದುಕೊಂಡಿರುವ ವಿಶ್ವದ ಮೊದಲ ಡಿಎನ್‌ಎ ಕೊರೊನಾ ಲಸಿಕೆ ಕ್ಯಾಡಿಲಾ ಸಂಸ್ಥೆಯ ಝೈಕೋವ್ ಡಿ ಲಸಿಕೆಗೆ ಭಾರತದಲ್ಲಿ ಆಗಸ್ಟ್‌ ತಿಂಗಳಿನಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿತ್ತು.

          ಮುಂದಿನ ತಿಂಗಳಿನಿಂದ ಕ್ಯಾಡಿಲಾ ಹೆಲ್ತ್‌ ಕೇರ್‌ನ ಝೈಕೋವ್-ಡಿ ಲಸಿಕೆಯ ಸರಬರಾಜು ಆರಂಭವಾಗಲಿದ್ದು, ವರ್ಷಕ್ಕೆ 100ರಿಂದ 120 ದಶಲಕ್ಷ ಡೋಸ್‌ಗಳ ಲಸಿಕೆಯನ್ನು ಉತ್ಪಾದನೆ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ.


          ಝೈಕೋವ್ ಡಿ ಲಸಿಕೆಯನ್ನು ಶಿಲ್ಪಾ ಮೆಡಿಕೇರ್ ತನ್ನ ಘಟಕದಲ್ಲಿ ತಯಾರಿಸಲಿದ್ದು, ಕ್ಯಾಡಿಲಾ ಇದರ ಪ್ಯಾಕೇಜ್, ವಿತರಣೆ ಹಾಗೂ ಮಾರುಕಟ್ಟೆಯಲ್ಲಿ ತೊಡಗಿಕೊಳ್ಳುತ್ತದೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಶಿಲ್ಪಾ ಮೆಡಿಕೇರ್ ಘಟಕದಿಂದ ಝೈಕೋವ್ ಡಿ ಲಸಿಕೆ ಉತ್ಪಾದನೆಯಾಗುತ್ತಿದ್ದು, ಉದ್ದೇಶಿತ ಉತ್ಪಾದನಾ ಪ್ರಮಾಣದ ಕುರಿತು ಸಂಸ್ಥೆ ಬಹಿರಂಗಪಡಿಸಲಾಗಿಲ್ಲ. ಕ್ಯಾಡಿಲಾ ಮತ್ತು ಶಿಲ್ಪಾ ಮೆಡಿಕೇರ್ ಒಪ್ಪಂದದ ವಿವರಗಳ ಕುರಿತು ಅಧೀಕೃತ ಮಾಹಿತಿ ದೊರೆತಿಲ್ಲ.

            ಭಾರತದಲ್ಲಿ ಅರ್ಹ ವಯಸ್ಕರಿಗೆ ಡಿಸೆಂಬರ್ ವೇಳೆಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಅಕ್ಟೋಬರ್‌ನಿಂದ ಜಾಗತಿಕ ಕೋವಾಕ್ಸ್ ಕಾರ್ಯಕ್ರಮದ ಅಡಿಯಲ್ಲಿ ಹೆಚ್ಚುವರಿ ಲಸಿಕೆಗಳ ರಫ್ತು ಪುನರಾರಂಭ ಮಾಡುವುದಾಗಿ ಭಾರತ ತಿಳಿಸಿದೆ.

            ಇದರ ಜೊತೆಜೊತೆಗೆ ಅಕ್ಟೋಬರ್ ತಿಂಗಳಿನಲ್ಲಿ ಕ್ಯಾಡಿಲಾ ಹೆಲ್ತ್‌ ಕೇರ್ ತನ್ನ ಕೊರೊನಾ ಲಸಿಕೆಯ ಹತ್ತು ಮಿಲಿಯನ್ ಡೋಸ್‌ಗಳನ್ನು ಪೂರೈಸುವುದಾಗಿ ಸರ್ಕಾರಿ ಮೂಲ ತಿಳಿಸಿದೆ.

                ಭಾರತದಲ್ಲಿ 12-18 ವರ್ಷದವರಿಗೆ ನೀಡಲು ಅನುಮೋದನೆ ಪಡೆದುಕೊಂಡಿರುವ ಝೈಡಸ್ ಕ್ಯಾಡಿಲಾದ ಕೊರೊನಾ ಲಸಿಕೆಗಳ ಒಂದು ಕೋಟಿ ಡೋಸ್‌ಗಳು ಅಕ್ಟೋಬರ್‌ನಲ್ಲಿ ಲಭ್ಯವಿರಲಿವೆ ಎಂದು ತಿಳಿಸಿವೆ.

           ಭಾರತೀಯ ಫಾರ್ಮಾ ಕಂಪನಿ ಡಾ. ರೆಡ್ಡಿಯ ಪ್ರಯೋಗಾಲಯದೊಂದಿಗಿನ ಒಪ್ಪಂದದ ಅಡಿಯಲ್ಲಿ ಶಿಲ್ಪಾ ಮೆಡಿಕೇರ್‌ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆಯಲ್ಲಿ ಕೂಡ ತೊಡಗಿಕೊಂಡಿದೆ.

             ಆಗಸ್ಟ್‌ 20ರಂದು ಔಷಧ ನಿಯಂತ್ರಕ ಸಂಸ್ಥೆ, ದೇಶದಲ್ಲಿ 12-18 ವಯಸ್ಸಿನವರಿಗೆ ನೀಡಲು ಝೈಡಸ್ ಕ್ಯಾಡಿಲಾದ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿತು. ಆದರೆ ಈ ಲಸಿಕೆಯ ಬೆಲೆ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. 'ಝೈಡಸ್ ಕ್ಯಾಡಿಲಾ ಲಸಿಕೆಯ ಬೆಲೆ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಶೀಘ್ರವೇ ಈ ಸಂಬಂಧ ನಿರ್ಧಾರಕ್ಕೆ ಬರಲಾಗುವುದು' ಎಂದು ನೀತಿ ಆರೋಗ್ಯದ ಸದಸ್ಯ                 ವಿ.ಕೆ.ಪೌಲ್ ತಿಳಿಸಿದ್ದಾರೆ.

ಮೊದಲ ಪ್ಲಾಸ್ಮಿಡ್ ಡಿಎನ್‌ಎ ಲಸಿಕೆ ಎಂದು ಕರೆಸಿಕೊಂಡಿರುವ ಝೈಕೋವ್-ಡಿ ಮೂರು ಡೋಸ್‌ಗಳ ಲಸಿಕೆಯಾಗಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿನ ಕ್ಯಾಡಿಲಾ ಹೆಲ್ತ್ ಕೇರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಝೈಕೋವ್‌-ಡಿ ಕೊರೊನಾ ಲಸಿಕೆ ದಕ್ಷತೆಯು ಶೇ.66.60ರಷ್ಟಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಡೆಲ್ಟಾ ಪ್ರಭೇದದ ವಿರುದ್ಧವೂ ಪರಿಣಾಮಕಾರಿಯಾಗಿದೆ ಎಂದಿದೆ.

ನೇರವಾಗಿ ಸೂಜಿ ಮೂಲಕ ಚುಚ್ಚುವ ಲಸಿಕೆಯಲ್ಲದೇ ಜೆಟ್ ಇಂಜೆಕ್ಟರ್ ಬಳಸಿ ದೇಹದ ಚರ್ಮದ ಕೋಶಗಳಿಗೆ ಚುಚ್ಚುವ ಔಷಧ ಇದಾಗಿರುವುದು ವಿಶೇಷವೆನಿಸಿದೆ. ಹೀಗಾಗಿ ಮಕ್ಕಳಿಗೆ ಸುಲಭವಾಗಿ ಈ ಲಸಿಕೆ ನೀಡಬಹುದಾಗಿದೆ.

                 ZyCov-D ಅನ್ನು ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಭಾರತ ಸರ್ಕಾರವು ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಆರು ಲಸಿಕೆಗಳನ್ನು ಅಧಿಕೃತಗೊಳಿಸಿದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್, ಮಾಡೆರ್ನಾ ಹಾಗೂ ಜಾನ್ಸನ್ ಆಂಡ್ ಜಾನ್ಸನ್‌ನ ಒಂದೇ ಡೋಸ್ ಲಸಿಕೆ. ಈಚೆಗೆ ಝೈಕೋವ್ ಡಿ ಲಸಿಕೆ ಸೇರ್ಪಡೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries