HEALTH TIPS

'ಶಕ್ತಿ' ಕಳೆದುಕೊಂಡಿದ್ದು ಹೇಗೆ ಚೀನಾ, ಬ್ರಿಟನ್, ಯುರೋಪಿಯನ್ ದೈತ್ಯ ರಾಷ್ಟ್ರಗಳು!?

                  ಬ್ರಿಟನ್ : ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ತತ್ತರಿಸಿದ ಜಗತ್ತಿಗೆ ಹೊಸ ಸವಾಲು ಎದುರಾಗಿದೆ. ಚೀನಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿ ಇಂಧನ(ಪೆಟ್ರೊಲ್ ಮತ್ತು ಡೀಸೆಲ್) ಹಾಗೂ ವಿದ್ಯುತ್ ಅಭಾವ ಸೃಷ್ಟಿಯಾಗಿದೆ.


              ಉತ್ತರ ಚೀನಾ ಭಾಗದಲ್ಲಿ ದೀರ್ಘಕಾಲಿಕ ವಿದ್ಯುತ್ ಕಡಿತದಿಂದಾಗಿ ಜನರು ಕತ್ತಲಿನಲ್ಲಿ ಕಾಲ ಕಳೆಯುವಂತಾ ಪರಿಸ್ಥಿತಿ ಉದ್ಭವಿಸಿದೆ. ಇದರ ಮಧ್ಯೆ ಭೂಗತ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ವೆಂಟಿಲೇಟರ್ ಸ್ಥಗಿತಗೊಂಡು, ವಿಷಪೂರಿತ ಕಾರ್ಬನ್ ಮೊನಾಕ್ಸೈಡ್ ಕಾರಣದಿಂದಾಗಿ ಕಾರ್ಮಿಕರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

             ಕಿಂಗ್‌ಡಮ್ ಬಹುಪಾಲು ಪೆಟ್ರೋಲ್ ಮತ್ತು ಡೀಸೆಲ್ ಬಂಕ್‌ಗಳಲ್ಲಿ ಈ ವಾರ "Sorry out of use" ಎಂಬ ಫಲಕಗಳೇ ಕಣ್ಣಿಗೆ ರಾಚುತ್ತಿವೆ. ಈ ಮಧ್ಯೆ ನೈಸರ್ಗಿಕ ಅನಿಲದ ಬೆಲೆಯು ಗಗನಮುಖಿಯಾಗಿ ಏರಿಕೆಯಾಗುತ್ತಿದೆ. ಯುರೋಪಿನಾದ್ಯಂತ ಇಂಧನ ಬೆಲೆ ಹೊಸ ದಾಖಲೆ ಬರೆದಿದೆ. ಏತನ್ಮಧ್ಯೆ ಉತ್ತರ ಗೋಳಾರ್ಧದಲ್ಲಿ ಚಳಿಗಾಲ ಆರಂಭಕ್ಕೂ ಮೊದಲೇ ಬೇಡಿಕೆಯನ್ನು ಹೆಚ್ಚಿಸಲು ಯುನೈಟೆಡ್ ಸ್ಟೇಟ್ಸ್ ಅನಿಲ ಮತ್ತು ಕಲ್ಲಿದ್ದಲು ಉತ್ಪಾದಕರು ಹೆಣಗಾಡುತ್ತಿದ್ದಾರೆ.

ಚೀನಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿ ಇಂಧನ ಅಭಾವ ಸೃಷ್ಟಿಯ ಹಿಂದಿನ ಕಾರಣವೇನು?, ಇಂಧನ ಕೊರತೆಯಿಂದ ಜಗತ್ತಿನ ದೈತ್ಯ ರಾಷ್ಟ್ರಗಳು ಎದುರಿಸುತ್ತಿರುವ ಸಮಸ್ಯೆಗಳು ಹೇಗಿವೆ?, ಸ್ಥಳೀಯ ಮಟ್ಟದಲ್ಲಿ ಪರಿಸ್ಥಿತಿ ಸುಧಾರಿಸಲು ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳೇನು?, ಹೀಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ಆಗುತ್ತಿರುವ ಪ್ರಮುಖ ಸುದ್ದಿಯ ಆಳ ಮತ್ತು ಅಗಲವನ್ನು ಇಲ್ಲಿ ಓದಿ.

                       ಕೊವಿಡ್-19 ಪಿಡುಗಿನಿಂದ ಸೃಷ್ಟಿಯಾಯಿತೇ ಇಂಧನ ಕೊರತೆ?

             ಇಂಧನ ಕೊರತೆ ಸಮಸ್ಯೆ ಸೃಷ್ಟಿಯಾಗುವುದ ಹಿಂದೆ ಸಾಕಷ್ಟು ಕಾರಣಗಳಿವೆ ಎಂದು ಭಾಗಶಃ ವಿಶ್ಲೇಷಕರು ಹೇಳಿದ್ದಾರೆ. ಇಂಧನ ಪೂರೈಕೆಯ ಅಭಾವವು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿಂದಿನ ಕಾಲದಿಂದಲೂ ಇತ್ತು ಎಂದು ವಿಶ್ಲೇಷಕರು ಉಲ್ಲೇಖಿಸಿದ್ದಾರೆ. ಇದು ಸತ್ಯವಾಗಿದ್ದು, ಕೊವಿಡ್-19 ಪಿಡುಗಿಗೂ ಮೊದಲೇ ಕಾರ್ಖಾನೆ ಮತ್ತು ಗ್ರಾಹಕ ವಲಯದಲ್ಲಿ ಇಂಧನಕ್ಕೆ ಭಾರಿ ಬೇಡಿಕೆಯಿತ್ತು. ಇಂಧನ ಉತ್ಪಾದನೆ ಮತ್ತು ಪೂರೈಕೆಯ ಸರಪಳಿಯಲ್ಲಿ ವೇಗ ತಗ್ಗಿದ ಪರಿಣಾಮದಿಂದಾಗಿ ಕೊರತೆಯ ಪ್ರಮಾಣ ಹೆಚ್ಚಾಗಿದೆ.

                                ಸುಳ್ಳಾಯಿತೇ ಗ್ರೀನ್ ಎನರ್ಜಿ ಭವಿಷ್ಯದ ನಂಬಿಕೆ?

           ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆಗೆ ಪರಿಹಾರವಾಗಿ ಕಳೆದ 5 ರಿಂದ 10 ವರ್ಷಗಳಲ್ಲಿ ಅನೇಕ ಹೂಡಿಕೆದಾರರು ನವೀಕರಿಸಬಹುದಾದ ಇಂಧನ ಉತ್ಪಾದನೆ ಮೂಲಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ವಾಸ್ತವವೆಂದರೆ ಪ್ರಪಂಚದ ಹೆಚ್ಚಿನ ಭಾಗವು ಇನ್ನೂ ಸಾಂಪ್ರದಾಯಿಕ ಇಂಧನ ಮೂಲಗಳಾದ ತೈಲ, ಕಲ್ಲಿದ್ದಲು ಮತ್ತು ಅನಿಲದ ಮೇಲೆ ಅವಲಂಬಿತವಾಗಿದೆ. ವಿಶೇಷ ಅಂದರೆ ನವೀಕರಿಸಬಹುದಾದ ಮೂಲಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದರಿಂದ ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಹೂಡಿಕೆ ಪ್ರಮಾಣ ಇಳಿಮುಖವಾಗಿದ್ದು, ಪ್ರಸ್ತುತ ಕೊರತೆ ಸೃಷ್ಟಿಗೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

              "ಅನಿಲ, ಕಲ್ಲಿದ್ದಲು, ತೈಲ, ಲೋಹಗಳು, ಗಣಿಗಾರಿಕೆಗಳಲ್ಲಿ ಯಾವುದು ಬೇಕು ಎಂದು ನೀವು ಆರಿಸಿಕೊಳ್ಳಿ, ಹಳೆಯ ಆರ್ಥಿಕತೆಯು ಗಮನಾರ್ಹವಾಗಿ ಹೂಡಿಕೆ ಮಾಡಲ್ಪಟ್ಟಿದೆ" ಎಂದು ಗ್ಲೋಬಲ್ ಗೋಲ್ಡ್ಮನ್ ಸ್ಯಾಚ್ಸ್ ಗ್ರೂಪ್‌ನ ಸರಕುಗಳ ಸಂಶೋಧನೆಯ ಮುಖ್ಯಸ್ಥ ಜೆಫ್ ಕ್ಯೂರಿ ಮಂಗಳವಾರ ಬ್ಲೂಮ್‌ಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. "ನಾವು ಇದನ್ನು ಹಳೆಯ ಆರ್ಥಿಕತೆ ಸೇಡು ಎಂದು ಕರೆಯುತ್ತೇವೆ. ಕಳಪೆ ಆದಾಯವು ಬಂಡವಾಳವನ್ನು ಹಳೆಯ ಆರ್ಥಿಕತೆಯಿಂದ ಹೊಸ ಆರ್ಥಿಕತೆಗೆ ಮರುನಿರ್ದೇಶಿಸಲಾಯಿತು," ಎಂದಿದ್ದಾರೆ.

                                     ಸಾಂಪ್ರದಾಯಿಕ ಇಂಧನ ಕಲುಷಿತಗೊಳಿಸುವ ಹುನ್ನಾರವೇ?

        ಜಾಗತಿಕ ಮಟ್ಟದಲ್ಲಿ ಹೂಡಿಕೆಯನ್ನು ತಗ್ಗಿಸುವ ಮೂಲಕ ಸಾಂಪ್ರದಾಯಿಕ ಇಂಧನ ಮೂಲಗಳನ್ನು ಕಲುಷಿತಗೊಳಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ತೀರಾ ಅಸ್ಪಷ್ಟವಾಗಿದೆ. ಆದರೆ ಸಾಂದ್ರದಾಯಿಕ ಇಂಧನ ಉತ್ಪಾದನೆಯಲ್ಲಿ ಹೊಸ ಹೂಡಿಕೆಯನ್ನು ತಡೆಯುವುದು ತಪ್ಪು ನಿರ್ಧಾರ ಎಂದು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಪ್ರಧಾನ ಕಾರ್ಯದರ್ಶಿ ಎಚ್ಚರಿಸಿದ್ದಾರೆ. ಏಕೆಂದರೆ ಮುಂದಿನ ಹಲವು ವರ್ಷಗಳಲ್ಲಿ ತೈಲ ಬೇಡಿಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 80 ಡಾಲರ್ ಸಮೀಪದಲ್ಲಿದ್ದು, ಇದು ಮೂರು ವರ್ಷಗಳ ಗರಿಷ್ಠ ಮಟ್ಟವಾಗಿದೆ.

                         ಗ್ಯಾಸ್ ಮತ್ತು ಕಲ್ಲಿದ್ದಲು ಕಥೆಯೇನು?

              ಯುರೋಪಿನಲ್ಲಿ ಕಲ್ಲಿದ್ದಲು, ಅನಿಲ ಮತ್ತು ನೀರಿನ ಪೂರೈಕೆ ಕೊರತೆಯಿಂದ ಇಂಧನ ಬೆಲೆ ಗಗನಕ್ಕೇರಿದೆ. ಸಾಕಷ್ಟು ಪ್ರಮಾಣದ ಕಲ್ಲಿದ್ದಲು ಉತ್ಪಾದನೆ ಮೇಲೆ ಹಿಡಿತ ಸಾಧಿಸಲು ಚೀನಾ ಹರಸಾಹಸ ಪಡುತ್ತಿದೆ. ವಿಶ್ವದಲ್ಲಿ ಕಚ್ಚಾ ಇಂಧನದ ಬೆಲೆಯನ್ನು ಹೆಚ್ಚಿಸಲಾಗುತ್ತಿದೆ. ಕೊಲಂಬಿಯಾ ವಿಶ್ವವಿದ್ಯಾಲಯದ SIPA ಸೆಂಟರ್ ಆನ್ ಗ್ಲೋಬಲ್ ಎನರ್ಜಿ ಪಾಲಿಸಿ ತಯಾರಿಸಿದ ಚೀನಾದ ಹವಾಮಾನ ನೀತಿಯ ಮಾರ್ಗದರ್ಶಿಯ ಪ್ರಕಾರ, ಪ್ರಪಂಚದ ಇತರ ಭಾಗಗಳಿಗಿಂತ ಚೀನಾ ಹೆಚ್ಚು ಕಲ್ಲಿದ್ದಲನ್ನು ಬಳಸುತ್ತದೆ. ಇದು ವಿಶ್ವದ ಪ್ರಮುಖ ಕಲ್ಲಿದ್ದಲು ಉತ್ಪಾದಕವಾಗಿದ್ದರೂ, ಪೂರೈಕೆ ಕುಸಿತದಿಂದ ಕಾರ್ಖಾನೆಗಳಲ್ಲಿ ಉತ್ಪಾದನೆ ಇಳಿಮುಖವಾಗುತ್ತಿದೆ.

                           ಚೀನಾದಲ್ಲಿ ವಿದ್ಯುತ್ ಕೊರತೆ ಸೃಷ್ಟಿಯಾಗಲು ಕಾರಣ?

             ಅಸಲಿಗೆ ಚೀನಾದಲ್ಲಿ ವಿದ್ಯುತ್ ಅಭಾವ ಸೃಷ್ಟಿಯಾಗುವುದಕ್ಕೆ ಹಲವು ವಿಷಯಗಳು ಕಾರಣವಾಗಿದೆ. ವಿದ್ಯುತ್ ದರವನ್ನು ಸರ್ಕಾರವೇ ನಿಯಂತ್ರಿಸುತ್ತದೆ. ಆದ್ದರಿಂದ ಕಲ್ಲಿದ್ದಲು ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದರೂ, ಅದನ್ನು ವಿದ್ಯುತ್ ಬಳಕೆದಾರರಾದ ಗ್ರಾಹಕರು ಮತ್ತು ಕಾರ್ಖಾನೆಗಳಿಗೆ ವರ್ಗಾವಣೆ ಮಾಡುವಂತಿಲ್ಲ. ಇದರಿಂದಾಗಿ ಕೆಲವು ವಿದ್ಯುತ್ ಉತ್ಪಾದಕ ಸಂಸ್ಥೆಗಳು ನಷ್ಟಕ್ಕೆ ತುತ್ತಾಗುತ್ತಿವೆ. ಚೀನಾದಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಉತ್ಪಾದಿಸುವುದಕ್ಕೆ ಸ್ವತಃ ಸಂಸ್ಥೆಗಳೇ ಹಿಂದೇಟು ಹಾಕುತ್ತಿವೆ.

               ಚೀನಾದ ರಾಷ್ಟ್ರೀಯ ಅಭಿವೃದ್ಧಿ ಮತ್ತು ಸುಧಾರಣಾ ಆಯೋಗವು ಬುಧವಾರ "ಬೇಡಿಕೆ, ಪೂರೈಕೆ ಮತ್ತು ವೆಚ್ಚಗಳಲ್ಲಿನ ಬದಲಾವಣೆಗಳನ್ನು ಸಮಂಜಸವಾಗಿ ಪ್ರತಿಬಿಂಬಿಸಲು" ಬೆಲೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವಕಾಶ ನೀಡುವುದಾಗಿ ಘೋಷಿಸಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಏರಿಕೆಗೆ ಅವಕಾಶ ನೀಡಲಾಗಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಚೀನಾ ಸರ್ಕಾರವು ಕಾರ್ಖಾನೆಗಳಿಗೆ ವಿದ್ಯುತ್ ದರವನ್ನು ಹೆಚ್ಚಿಸಲು ಯೋಚಿಸುತ್ತಿದೆ ಎಂದು ಹೇಳಲಾಗಿದೆ. ಈ ಯೋಜನೆಯ ಬಗ್ಗೆ ವಿವರಗಳನ್ನು ತಿಳಿದಿರುವ ಜನರು ಬ್ಲೂಮ್‌ಬರ್ಗ್ ನ್ಯೂಸ್‌ಗೆ ತಿಳಿಸಿದರು.

                        ಚೀನಾದಲ್ಲಿ ವಿದ್ಯುತ್ ಬೆಲೆ ಏರಿಕೆ ಉತ್ತಮವೇ?

             ವಿದ್ಯುತ್ ಬೆಲೆ ಏರಿಕೆ ಮಾಡಲು ನಿರ್ಧರಿಸಿದ ಚೀನಾ ಸರ್ಕಾರದ ನಡೆಯು ಉತ್ತಮ ಬೆಳವಣಿಗೆಯೇ ಎಂಬ ಪ್ರಶ್ನೆಗೆ ಎರಡು ರೀತಿ ಉತ್ತರಗಳು ಸಿಗುತ್ತವೆ. ಇಲ್ಲಿ ಆಶ್ಚರ್ಯ ಎಂಬುದು ಏನೂ ಇಲ್ಲ. ವಿದ್ಯುತ್ ಉತ್ಪಾದನಾ ಸಂಸ್ಥೆಗಳಿಗೆ ಬೆಲೆ ಏರಿಕೆ ಸರಿ ಎನಿಸಿದರೆ, ಗ್ರಾಹಕರು ಮತ್ತು ಕಾರ್ಖಾನೆಗಳಿಗೆ ತಪ್ಪು ಎನಿಸುತ್ತದೆ. ಯುನೈಟೆಡ್ ಕಿಂಗ್‌ಡಮ್ ನಲ್ಲಿ ಸೃಷ್ಟಿಯಾಗಿರುವ ಇಂಧನ ಬೆಲೆಯ ಏರಿಳಿತವನ್ನೇ ಇಲ್ಲಿ ಉದಾಹರಣೆಯಾಗಿ ತೆಗೆದುಕೊಳ್ಳೋಣ.

                   ಪೆಟ್ರೋಲ್, ಡೀಸೆಲ್ ಕೊರತೆ ಸೃಷ್ಟಿಯಾಗಿದ್ದು ಹೇಗೆ?

             ದೇಶಾದ್ಯಂತ ಪೆಟ್ರೋಲ್ ಬೆಲೆಯನ್ನು ಪತ್ತೆಹಚ್ಚುವ ವಾಹನ ಸೇವಾ ಕಂಪನಿ ಆರ್‌ಎಸಿ ಪ್ರಕಾರ, ಮಂಗಳವಾರ ಯುನೈಟೆಡ್ ಕಿಂಗ್‌ಡಮ್ ನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 136.50 ಬ್ರಿಟಿಷ್ ಪೆನ್ಸ್(1.83 ಡಾಲರ್) ಆಗಿದ್ದರೆ, ಒಂದು ಲೀಟರ್ ಡೀಸೆಲ್ ಬೆಲೆ 138.78 ಬ್ರಿಟಿಷ್ ಪೆನ್ಸ್(1.86 ಡಾಲರ್) ಆಗಿದೆ. ಆದರೆ ಬ್ರಿಟಿಷ್ ನೆಲದಲ್ಲಿ ಪೆಟ್ರೋಲ್ ಡೀಸೆಲ್ ದರದಲ್ಲಿ ಇದೇ ದಾಖಲೆಯ ಏರಿಕೆಯಲ್ಲ. ಏಕೆಂದರೆ ಕಳೆದ 2012ರ ಏಪ್ರಿಲ್ ತಿಂಗಳಿನಲ್ಲಿ ಪೆಟ್ರೋಲ್ ದರ ಪ್ರತಿ ಲೀ.ಗೆ 142.48 ಪೆನ್ಸ್ (1.91 ಡಾಲರ್), ಡೀಸೆಲ್ ದರ ಪ್ರತಿ ಲೀ.ಗೆ 147.93 ಪೆನ್ಸ್(1.99 ಡಾಲರ್) ಆಗಿರುವುದು ಈವರೆಗಿನ ದಾಖಲೆಯ ಏರಿಕೆಯಾಗಿದೆ.

                ಇಂಧನ ಬೆಲೆ ಏರಿಕೆಯೊಂದೇ ಸಮಸ್ಯೆಯಾಗಿಲ್ಲ. ವಾಹನ ಚಾಲಕರು ತಮ್ಮ ಟ್ಯಾಂಕ್‌ಗಳು ಮತ್ತು ಜೆರ್ರಿ ಡಬ್ಬಿಗಳನ್ನು ತುಂಬಿಸಿಕೊಳ್ಳಲು ಸಾಲುಗಟ್ಟಿ ನಿಂತಿದ್ದಾರೆ, ಇದರಿಂದಾಗಿ ಶೇ.90ರಷ್ಟು ಪೆಟ್ರೋಲ್ ಪಂಪ್‌ಗಳು ಬರಿದಾಗುತ್ತಿವೆ ಎಂದು ಪೆಟ್ರೋಲ್ ಚಿಲ್ಲರೆ ವ್ಯಾಪಾರಿಗಳ ಸಂಘ ಈ ವಾರದ ಆರಂಭದಲ್ಲಿ ಎಚ್ಚರಿಸಿತ್ತು. ಇಂಧನ ಖಾಲಿಯಾಗುವ ಭಯದಲ್ಲಿ ಖರೀದಿ ಹೆಚ್ಚುತ್ತಿರುವುದು ಕೂಡ ಅಭಾವ ಸೃಷ್ಟಿಗೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

                                ಲಂಡನ್ ನೆಲದಲ್ಲಿ ಪೆಟ್ರೋಲ್-ಡೀಸೆಲ್ ಖಾಲಿ

              ಯುನೈಟೆಡ್ ಕಿಂಗ್‌ಡಮ್ ಶೇ.65ರಷ್ಟು ಮುನ್ಸೂಚನೆಗಳನ್ನು ಹೊಂದಿರುವ ಪಿಆರ್‌ಎ ಸ್ವತಂತ್ರ ಇಂಧನ ಚಿಲ್ಲರೆ ವ್ಯಾಪಾರಿಗಳನ್ನು ಪ್ರತಿನಿಧಿಸುತ್ತದೆ. "ಸೋಮವಾರ ಬೆಳಗ್ಗೆ ಪೆಟ್ರೊಲ್ ಪಂಪ್ ಒಣಗುವುದಕ್ಕೆ ಆರಂಭವಾಗಿದ್ದು, ಇದು ತುಂಬಾ ತೀವ್ರವಾಗಿರುವುದನ್ನು ನೀವು ನೋಡಬಹುದು," ಎಂದು ಮ್ಯಾಡರ್ಸನ್ ಹೇಳಿದ್ದಾರೆ. ರಾಜಧಾನಿ ಲಂಡನ್‌ನ ಬಂಕ್‌ಗಳ ಎದುರಿನ ವಾಸ್ತವ ಸಂಗತಿಯನ್ನು ವರದಿ ಮಾಡಿದ ಅಲ್ ಜಜೀರಾ ಆಂಡ್ರ್ಯೂ ಸಿಮನ್ಸ್, "ಜನರು ಜೆರ್ರಿ ಡಬ್ಬಿಗಳಲ್ಲಿ ಪೆಟ್ರೋಲ್ ಅನ್ನು ತೆಗೆದುಕೊಂಡು ಹೋಗಿ ಸಂಗ್ರಹಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ನಿಯಂತ್ರಣ ಕಳೆದುಕೊಂಡಿರುವ ಸರ್ಕಾರವು ತೀವ್ರ ಗೊಂದಲಕ್ಕೆ ಸಿಲುಕಿಕೊಂಡಿದೆ," ಎಂದು ಹೇಳಿದ್ದಾರೆ.

                           ತಾತ್ಕಾಲಿಕ ವೀಸಾ ಮೂಲಕ ಕಾರ್ಮಿಕರ ಕೊರತೆಗೆ ಪರಿಹಾರ

             ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ನೇತೃತ್ವದ ಸಂಪ್ರದಾಯವಾದಿ ಸರ್ಕಾರ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಲ್ಲಿನ ಬಿಕ್ಕಟ್ಟು ನಿವಾರಣೆ ದೃಷ್ಟಿಯಿಂದ 10,000 ವಿದೇಶಿ ಟ್ರಕ್ ಚಾಲಕರಿಗೆ ತಾತ್ಕಾಲಿಕ ವೀಸಾ ನೀಡುವ ಯೋಜನೆಯನ್ನು ಘೋಷಿಸಿದೆ. ಬ್ರೆಕ್ಸಿಟ್ ನಂತರದ ವಲಸೆಯ ನಿಯಮಗಳು ಎಂದರೆ ಹೊಸದಾಗಿ ಬಂದಿರುವ ಯುರೋಪಿಯನ್ ಯೂನಿಯನ್ ನಾಗರಿಕರು ಬ್ರಿಟನ್‌ನಲ್ಲಿ ವೀಸಾ ಇಲ್ಲದೇ ಕೆಲಸ ಮಾಡುವುದಕ್ಕೆ ಸಾಧ್ಯವಿರುವುದಿಲ್ಲ.

                    ಕೋವಿಡ್ -19 ಸಾಂಕ್ರಾಮಿಕ ಪಿಡುಗು ಮತ್ತು ಬ್ರೆಕ್ಸಿಟ್ ಒಟ್ಟಾಗಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ವಿವಿಧ ವಲಯದ ಉದ್ಯಮಗಳ ಎಚ್ಚರಿಕೆ ಹೊರತಾಗಿಯೂ ಅಂದಾಜು 100,000 ಕಾರ್ಮಿಕರ ಕೊರತೆ ನೀಗಿಸಲು ಸರ್ಕಾರವು ತಾತ್ಕಾಲಿಕ ವೀಸಾ ನೀಡಲು ನಿರಾಕರಿಸಿತ್ತು. ಪ್ರಸ್ತುತ ವೀಸಾ ವಿತರಣೆ ಅಲ್ಪಾವಧಿ ಪರಿಹಾರವಾಗಿದ್ದು, ಕಾರ್ಮಿಕರ ಕೊರತೆ ಪರಿಹರಿಸುವುದಿಲ್ಲ ಎಂದು ಉದ್ಯಮಿಗಳು ಎಚ್ಚರಿಸಿದ್ದಾರೆ.

                             ಟ್ರಕ್ ಚಾಲಕರಿಲ್ಲದೇ ಹೆಚ್ಚಿದ ಇಂಧನ ಕೊರತೆ

                 ಬ್ರಿಟಿಷ್ ನೆಲದಲ್ಲಿ ಇಂಧನಕ್ಕೆ ಯಾವುದೇ ರೀತಿ ಕೊರತೆಯಿಲ್ಲವಾದರೂ, ಅದನ್ನು ಬಂಕ್‌ಗಳಿಗೆ ಸಾಗಿಸಲು ಅಗತ್ಯವಿರುವ ಟ್ರಕ್ ಚಾಲಕರಿಗೆ ಅಭಾವವಿದೆ. ಟ್ರಕ್ ಚಾಲಕರಿಲ್ಲದೇ ಬಂಕ್‌ಗಳಿಗೆ ಇಂಧನ ಪೂರೈಕೆಯಾಗದೇ ಕೃತಕ ಅಭಾವ ಸೃಷ್ಟಿಯಾಗಿದೆ. ಈ ಹಿನ್ನೆಲೆ ಸರ್ಕಾರವು ದೀರ್ಘಾವಧಿಯಲ್ಲಿ ಬ್ರಿಟಿಷ್ ಕಾರ್ಮಿಕರಿಗೆ ಚಾಲನಾ ತರಬೇತಿ ನೀಡಿ ಉದ್ಯೋಗಳನ್ನು ಭರ್ತಿ ಮಾಡಿಕೊಳ್ಳಬೇಕು. ಆ ಮೂಲಕ ಸಾರಿಗೆ ಕಂಪನಿಗಳು ವೇತನ ಮತ್ತು ಕೆಲಸದ ಪರಿಸ್ಥಿತಿ ಸುಧಾರಿಸುವಂತೆ ಕರೆ ನೀಡಲಾಗಿದೆ. ಏಕೆಂದರೆ ಟ್ರಕ್ ಚಾಲಕರ ಕೊರತೆಯು ಇತ್ತೀಚಿನ ತಿಂಗಳುಗಳಲ್ಲಿ ಬ್ರಿಟಿಷ್ ಕಾರ್ಖಾನೆಗಳು, ರೆಸ್ಟೋರೆಂಟ್‌ಗಳು ಮತ್ತು ಸೂಪರ್‌ ಮಾರ್ಕೆಟ್‌ಗಳಿಗೂ ತಟ್ಟಿದೆ. ಕೊರತೆಯು ಪೂರೈಕೆ ಸರಪಳಿಗಳಿಗೆ ಹಾನಿಯುಂಟು ಮಾಡಿದೆ, ಮಾರುಕಟ್ಟೆಗೆ ಸರಕುಗಳನ್ನು ಸಾಗಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

                                   ತೈಲ ಮತ್ತು ಅನಿಲ ಉತ್ಪಾದನೆ ಹೆಚ್ಚಿಸುವುದಕ್ಕೆ ಸಾಧ್ಯವಿದೆಯೇ?

             ಯುನೈಟೆಡ್ ಸ್ಟೇಟ್ಸ್ ಈ ಬಾರಿ ಚಳಿಗಾಲದಲ್ಲಿ ನೈಸರ್ಗಿಕ ಅನಿಲದ ಕೊರತೆ ಸಮಸ್ಯೆಯನ್ನು ಎದುರಿಸಲಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಹೂಡಿಕೆಯ ಕೊರತೆ ಮತ್ತು ಯುಎಸ್‌ನಲ್ಲಿ ಸೃಷ್ಟಿಯಾಗಿರುವ ಕಾರ್ಮಿಕ ಕೊರತೆಯಿಂದಾಗಿ ತೈಲ ವಲಯದಲ್ಲಿ ಅಗತ್ಯಕ್ಕೆ ತಕ್ಕಷ್ಟು ಕಾರ್ಮಿಕರು ಇಲ್ಲದಂತಾಗಿದೆ. ಡಲ್ಲಾಸ್ ಫೆಡರಲ್ ರಿಸರ್ವ್ ಬ್ಯಾಂಕ್ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ, ಶೇಕಡಾ 51ರಷ್ಟು ತೈಲ ಮತ್ತು ಅನಿಲ ಸೇವಾ ಸಂಸ್ಥೆಗಳ ಕಾರ್ಯನಿರ್ವಾಹಕರು ಕೆಲಸಗಾರರನ್ನು ನೇಮಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಶೇ.70ರಷ್ಟು ಮಂದಿ ಅರ್ಹ ಅರ್ಜಿದಾರರ ಕೊರತೆಯೇ ಮುಖ್ಯ ಕಾರಣ ಎಂದು ಹೇಳಿದರೆ, ಶೇ.39ರಷ್ಟು ಕಂಪನಿಗಳು, ಕಾರ್ಮಿಕರು ಹೆಚ್ಚಿನ ವೇತನ ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಿವೆ.

                          ಜಾಗತಿಕ ಸಮಸ್ಯೆಗಳಿಗೆ ಇಲ್ಲವೇ ಪರಿಹಾರ?

               ಜಗತ್ತನ್ನು ಕಾಡುತ್ತಿರುವ ಈ ಇಂಧನ, ಅನಿಲ, ತೈಲ ಹಾಗೂ ಕಲ್ಲಿದ್ದಲು ಸಮಸ್ಯೆಗಳಿಗೆ ಪರಿಹಾರ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರವನ್ನು ಕಾದುನೋಡಬೇಕಿದೆ. 2060ರ ವೇಳೆಗೆ ಇಂಗಾಲವನ್ನು ತಟಸ್ಥಗೊಳಿಸುವ ನಿಟ್ಟಿನಲ್ಲಿ ಚೀನಾ ಕಲ್ಲಿದ್ದಲು ಬಳಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಬೇಡಿಕೆಯನ್ನು ಹೆಚ್ಚಿಸಲಾಗುತ್ತಿದೆ. ಆದರೆ ಪ್ರಸ್ತುತ ಇಂಧನವನ್ನು ಪೂರೈಸುವ ಸಾಂಪ್ರದಾಯಿಕ ಮೂಲಗಳನ್ನು ಕಾಪಾಡಿಕೊಳ್ಳುವುದು ಹಾಗೂ ಜಗತ್ತಿಗೆ ದೀರ್ಘಾವಧಿವರೆಗೂ ಸಹಾಯವಾಗಲಿರುವ ನವೀಕರಿಸಬಹುದಾದ ಇಂಧನದ ಮೂಲಗಳ ಮೇಲೆ ಹೂಡಿಕೆ ಮಾಡುವುದು. ಪ್ರಸ್ತುತ ಜಾಗತಿಕ ಬಿಕ್ಕಟ್ಟಿನ ಒಂದು ಮುಖ್ಯ ಭಾಗವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries