ದೇಶದಲ್ಲಿ ಸದ್ಯ ಒಟ್ಟು ಸೋಂಕಿತರ ಸಂಖ್ಯೆ 3 ಕೋಟಿಯ 44 ಲಕ್ಷದ 78 ಸಾವಿರದ 517ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4ಲಕ್ಷದ 64 ಸಾವಿರದ 623ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,28,762ಕ್ಕೆ ತಲುಪಿದೆ.
ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ದೈನಂದಿನ ಏರಿಕೆಯು ಕಳೆದ 41 ದಿನಗಳಲ್ಲಿ 20 ಸಾವಿರಕ್ಕಿಂತ ಕಡಿಮೆಯಾಗಿದೆ ಮತ್ತು ಕಳೆದ ಸತತ 144 ದಿನಗಳಲ್ಲಿ 50 ಸಾವಿರಕ್ಕಿಂತ ಕಡಿಮೆ ಹೊಸ ಪ್ರಕರಣಗಳು ವರದಿಯಾಗಿವೆ. ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷದ 28 ಸಾವಿರದ 762ಕ್ಕೆ ಏರಿಕೆಯಾಗಿದೆ. ಇದು ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 0.37 ರಷ್ಟಿದೆ. ಇದು ಕಳೆದ ವರ್ಷ ದೇಶದಲ್ಲಿ ಕೋವಿಡ್ ಸೋಂಕು ವರದಿಯಾದ ಮಾರ್ಚ್ ತಿಂಗಳಿನಿಂದ ಈ ಬಾರಿ ಅತಿ ಕಡಿಮೆಯಾಗಿದೆ, ರಾಷ್ಟ್ರಮಟ್ಟದಲ್ಲಿ ಕೋವಿಡ್-19 ಚೇತರಿಕೆ ದರವು ಶೇಕಡಾ 98ರಷ್ಟು ದಾಖಲಾಗಿದೆ.
ರಾಷ್ಟ್ರವ್ಯಾಪಿ ಕೋವಿಡ್ ಲಸಿಕೆ ಅಭಿಯಾನ ಅಡಿಯಲ್ಲಿ ದೇಶದಲ್ಲಿ ನೀಡಲಾದ ಲಸಿಕೆ ಡೋಸ್‌ಗಳ ಒಟ್ಟು ಸಂಖ್ಯೆ 114.46 ಕೋಟಿ ದಾಟಿದೆ. ಕೋವಿಡ್‌ನಿಂದ ಉಂಟಾದ 470 ಹೊಸ ಸಾವುಗಳಲ್ಲಿ ಕೇರಳದಿಂದ 388 ಮತ್ತು ಮಹಾರಾಷ್ಟ್ರದಿಂದ 32 ಮಂದಿ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದಿಂದ 1 ಲಕ್ಷದ 40 ಸಾವಿರದ 668, ಕರ್ನಾಟಕದಿಂದ 38 ಸಾವಿರದ 161, ಕೇರಳದಲ್ಲಿ 36 ಸಾವಿರದ 475, ತಮಿಳುನಾಡಿನಲ್ಲಿ 36 ಸಾವಿರದ 324, ದೆಹಲಿಯಲ್ಲಿ 25 ಸಾವಿರದ 095, ಉತ್ತರ ಪ್ರದೇಶದಲ್ಲಿ 22 ಸಾವಿರದ 909, ಪಶ್ಚಿಮ ಬಂಗಾಳದಲ್ಲಿ 19 ಸಾವಿರದ 341 ಸೇರಿದಂತೆ ದೇಶದಲ್ಲಿ ಇದುವರೆಗೆ ವೈರಸ್‌ನಿಂದಾಗಿ ಒಟ್ಟು 4 ಲಕ್ಷದ 64 ಸಾವಿರದ 623 ಸಾವುಗಳು ವರದಿಯಾಗಿವೆ.
ದೇಶದಲ್ಲಿ ನಿನ್ನೆಯವರೆಗೆ 62 ಕೋಟಿಯ 82 ಲಕ್ಷದ 48 ಸಾವಿರದ 841 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದ್ದು ನಿನ್ನೆ ಒಂದೇ ದಿನ 12 ಲಕ್ಷದ 32 ಸಾವಿರದ 505 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.