HEALTH TIPS

ಈ ನಿವೃತ್ತ ಐಪಿಎಸ್ ಅಧಿಕಾರಿ ಈಗ ಸೆಕ್ಯೂರಿಟಿ ಆಫೀಸರ್ !

            ಕೊಚ್ಚಿ: ಎಪ್ರಿಲ್ 30ರಂದು ಸೇವೆಯಿಂದ ನಿವೃತ್ತರಾದ ಕೇರಳದ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಕುಟುಂಬವನ್ನು ನಿರ್ವಹಿಸುವ ಉದ್ದೇಶದಿಂದ ಸೆಕ್ಯುರಿಟಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

          ಈ ಅಧಿಕಾರಿಯನ್ನು ಸೇವೆಯಿಂದ ನಾಲ್ಕೂವರೆ ವರ್ಷಗಳ ತನಕ ಅಮಾನತುಗೊಳಿಸಲಾಗಿತ್ತು ಹಾಗೂ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿತ್ತು ಹಾಗೂ ಪಿಂಚಣಿಯನ್ನೂ ನಿರಾಕರಿಸಲಾಗಿತ್ತಲ್ಲದೆ ಅನಿವಾರ್ಯವಾಗಿ ತಮ್ಮ ನೆರೆಯ ರಾಜ್ಯದಲ್ಲಿ ಅವರು ವಾಸಿಸುವಂತಾಗಿತ್ತು. ಫಝಲ್ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಅವರು ಆಡಳಿತ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿದಿಲ್ಲ ಎಂಬುದೇ ಇದಕ್ಕೆ ಕಾರಣ ಎಂದು newindianexpress.com ವರದಿ ಮಾಡಿದೆ.

              ಕೆಎಪಿ 5ನೇ ಬೆಟಾಲಿಯನ್ ಕಮಾಂಡೆಂಟ್ ಆಗಿ ನಿವೃತ್ತರಾಗಿರುವ ಕೆ ರಾಧಾಕೃಷ್ಣನ್ ಇದೀಗ ತಮ್ಮ ಮಕ್ಕಳ ಸುರಕ್ಷತೆಗಾಗಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. "ಅವರು ನನ್ನನ್ನು ಯಾವಾಗ ಬೇಕಾದರೂ ಸಾಯಿಸಬಹುದು,'' ಎಂದು ಅವರು ಆರೋಪಿಸಿದ್ದಾರೆ.

               ಕುಟುಂಬವನ್ನು ಸಲಹಲು ನೆರೆಯ ರಾಜ್ಯದಲ್ಲಿ ಖಾಸಗಿ ಕಂಪೆನಿಯ ಸೆಕ್ಯುರಿಟಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಅವರ ಪುತ್ರಿ ರಿಸರ್ಚ್ ಸ್ಕಾಲರ್ ಆಗಿದ್ದರೂ ಪಾರ್ಟ್ ಟೈಮ್ ರಿಸರ್ಚ್ ನಡೆಸುತ್ತಿದ್ದಾರೆ-ಕಾರಣ ಹಾಸ್ಟೆಲ್ ವೆಚ್ಚವನ್ನು ಭರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸ್ನಾತ್ತಕೋತ್ತರ ಪದವೀಧರರಾಗಿರುವ ಅವರ ಪುತ್ರ ಕೂಡ ಹಣಕಾಸಿನ ಕೊರತೆಯಿಂದ ಸಿವಿಲ್ ಸರ್ವಿಸ್ ಕೋಚಿಂಗ್ ಕೋರ್ಸಿನಿಂದ ವಾಪಸ್ ಸರಿದಿದ್ದಾರೆ. ಸಾಲ ಪಾವತಿಸಿಲ್ಲ ಎಂದು ಬ್ಯಾಂಕ್ ಅವರ ಮನೆಯನ್ನು ಹರಾಜು ಹಾಕಿದೆ ಎಂದು ವರದಿಯಾಗಿದೆ.

              ರಾಧಾಕೃಷ್ಣನ್ ಅವರು ಕಣ್ಣೂರು ಡಿಸಿಐಬಿಯಲ್ಲಿ ಡಿವೈಎಸ್ಪಿ ಆಗಿದ್ದಾಗ ಆ ಸಮಯ ಸಿಪಿಎಂ ತೊರೆದು ಎನ್‌ಡಿಎಫ್ ಸೇರಿದ ಮುಹಮ್ಮದ್ ಫಝಲ್ ಎಂಬಾತನ ಹತ್ಯೆಯನ್ನು ಅಕ್ಟೋಬರ್ 22, 2006ರಂದು ದುಷ್ಕರ್ಮಿಗಳ ತಂಡವೊಂದು ನಡೆಸಿತ್ತು. ಈ ಪ್ರಕರಣದ ತನಿಖಾಧಿಕಾರಿಯಾಗಿ ರಾಧಾಕೃಷ್ಣನ್ ಅವರನ್ನು ನೇಮಿಸಲಾಗಿತ್ತು. ಇಪ್ಪತ್ತು ಮಂದಿಯ ತನಿಖಾ ತಂಡವನ್ನು ಅವರು ಮುನ್ನಡೆಸಬೇಕಿತ್ತು.

           ಹತ್ಯೆ ಘಟನೆ ನಡೆದ ಮರುದಿನವೇ ಸಿಪಿಎಂ ಪ್ರತಿಭಟನಾ ಸಭೆ ನಡೆಸಿತ್ತಲ್ಲದೆ ಪಕ್ಷದ ಸ್ಥಳಿಯ ಘಟಕ ಕಾರ್ಯದರ್ಶಿ ಕರಾಯಿ ರಾಜನ್ ಅವರು ನಾಲ್ಕು ಆರೆಸ್ಸೆಸ್ ಕಾರ್ಯಕರ್ತರ ಹೆಸರನ್ನು ಉಲ್ಲೇಖಿಸಿ ಅವರು ಹತ್ಯೆಯಲ್ಲಿ ಪಾಲ್ಗೊಂಡಿದ್ದಾರೆಂದು ದೂರಿದ್ದರು. ಏಳು ದಿನಗಳೊಳಗೆ ಚಾರ್ಜ್ ಶೀಟ್ ಸಲ್ಲಿಸುವಂತೆ ಸೂಚಿಸಿದ್ದರು, ಆದರೆ ಆ ಆರೆಸ್ಸೆಸ್ ಮಂದಿ ಕೊಲೆಯಲ್ಲಿ ಶಾಮಿಲಾಗಿಲ್ಲವೆಂದು ಬಾಲಕೃಷ್ಣನ್ ಅವರಿಗೆ ಮನವರಿಕೆಯಾಗಿದ್ದರಿಂದ ಅವರನ್ನು ಬಿಡುಗಡೆಗೊಳಿಸಿದ್ದರಿಂದ ಇದು ಸಿಪಿಎಂ ನಾಯಕತ್ವದ ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ಬಾಲಕೃಷ್ಣನ್ ಹೇಳಿದ್ದಾರೆ ಎಂದು ವರದಿಯಾಗಿದೆ.

             ತರುವಾಯ ಅವರು ಸ್ಥಳದ 300 ಜನರ ಫೋನ್ ಕರೆ ಮಾಹಿತಿಯನ್ನು ಸಂಗ್ರಹಿಸಿದ್ದರು. ಕರಾಯಿ ಚಂದ್ರಶೇಖರನ್ ಅವರ ಸಮೀಪವರ್ತಿ ಕಲೇಶ್ ಎಂಬವರು ಕರಾಯಿ ರಾಜನ್ ಅವರ ಮೊಬೈಲ್ ಫೋನ್‌ಗೆ ಅಕ್ಟೋಬರ್ 22ರಂದು ಫಝಲ್ ಕೊಲೆ ಸಂದರ್ಭ ಕರೆ ಮಾಡಿದ್ದರು. ಸಿಪಿಎಂ ತಲಶ್ಶೇರಿ ಸಮಿತಿಯ ಕಚೇರಿ ಸಂಖ್ಯೆಯಿಂದಲೂ ತಲಶೇರಿಯ ಮೂರು ಆಸ್ಪತ್ರೆಗಳಿಗೆ ಕರೆ ಹೋಗಿದ್ದವು.

ಎರಡು ದಿನಗಳ ನಂತರ ಗೃಹ ಸಚಿವರು ಮತ್ತೆ ರಾಧಾಕೃಷ್ಣನ್ ಅವರನ್ನು ಕರೆಸಿ ಪಕ್ಷದ ಯಾವುದೇ ಕಾರ್ಯಕರ್ತನ ವಿರುದ್ಧ ಕ್ರಮಕೈಗೊಳ್ಳುವ ಮುನ್ನ ತಮಗೆ ತಿಳಿಸಬೇಕೆಂದು ಸೂಚಿಸಿದರು ಎಂದು ರಾಧಾಕೃಷ್ಣನ್ ಹೇಳುತ್ತಾರೆ. ಹತ್ತು ದಿನಗಳ ನಂತರ ಅವರನ್ನು ತನಿಖಾ ತಂಡದಿಂದ ಕೈಬಿಟ್ಟು ಪ್ರಕರಣವನ್ನು ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಗಿತ್ತು ಎಂದು ರಾಧಾಕೃಷ್ಣನ್ ಹೇಳಿದ್ದಾರೆ.

ತಮಗೆ ಪ್ರಮುಖ ಮಾಹಿತಿ ನೀಡಿದ್ದ ಇಬ್ಬರು ಸಾಕ್ಷಿಗಳು- ಬಿಜೆಪಿ ನಾಯಕ ವಲ್ಸರಾಜ್ ಕುರುಪ್ ಹಾಗೂ ಮಾಜಿ ಸಿಪಿಎಂ ಸದಸ್ಯ ಪಂಚರ ಶಿನಿಲ್ ನಿಗೂಢವಾಗಿ ಹತ್ಯೆಗೀಡಾಗಿದ್ದರು ಎಂದೂ ರಾಧಾಕೃಷ್ಣನ್ ಹೇಳಿದ್ದಾರೆ.

               ಫಝಲ್ ಪತ್ನಿ ಮರಿಯು ಅವರು ಕೇರಳ ಹೈಕೋರ್ಟ್ ಮೊರೆ ಹೋದ ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಎಂಟು ಸಿಪಿಎಂ ಕಾರ್ಯಕರ್ತರ ವಿರುದ್ಧ 2012ರಲ್ಲಿ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದೆ. ಆರೆಸ್ಸೆಸ್ ಕಾರ್ಯಕರ್ತ ಸುಬೀಶ್ ಇ ಅವರ ಹೇಳಿಕೆಯ ಆಧಾರದಲ್ಲಿ ಫಝಲ್ ಸೋದರ ಸಲ್ಲಿಸಿದ ಅಪೀಲಿಗೆ ಸ್ಪಂದಿಸಿ ಹೆಚ್ಚುವರಿ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದ್ದರೂ ಸಿಬಿಐ ಪ್ರಕರಣದ ತನಿಖೆಯನ್ನು ಅಂತ್ಯಗೊಳಿಸಿತ್ತು.

           ಡಿಸೆಂಬರ್ 15, 2006ರಂದು ರಾಧಾಕೃಷ್ಣನ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ತಮ್ಮನ್ನು ಹತ್ಯೆಗೈಯ್ಯುವ ಮೂರು ಪ್ರಯತ್ನಗಳು ನಂತರ ನಡೆದಿದ್ದವು ಎಂದು ರಾಧಾಕೃಷ್ಣನ್‌ ಆರೋಪಿಸಿದ್ದಾರೆ.

            2016ರಲ್ಲಿ ಅವರು ಎರಡನೇ ಬಾರಿ ಸೇವೆಯಿಂದ ಅಮಾನತುಗೊಂಡಿದ್ದರು. ನಾಲ್ಕೂವರೆ ವರ್ಷ ಕಾನೂನು ಹೋರಾಟದ ನಂತರ ಅವರನ್ನು ಮರುಸ್ಥಾಪನೆಗೊಳಿಸಲಾಗಿತ್ತು. ಕೆಎಪಿ 5ನೇ ಬೆಟಾಲಿಯನ್ ಕಮಾಂಡೆಂಟ್ ಆಗಿ ಎಂಟು ತಿಂಗಳು ಸೇವೆ ಸಲ್ಲಿಸಿದ್ದರೂ ಎಪ್ರಿಲ್ 29, 2021ರಂದು ಅವರಿಗೆ ಮೆಮೋ ನೀಡಲಾಗಿತ್ತು. ನಿವೃತ್ತಿ ಸೌಲಭ್ಯಗಳನ್ನು ನಿರಾಕರಿಸಲೆಂದೇ ಹೀಗೆ ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries