ತಿರುವನಂತಪುರಂ: ಕೇರಳದಲ್ಲಿ ತರಕಾರಿ ಬೆಲೆ ವರ್ಷದಲ್ಲಿ ಒಂದೂವರೆ ಪಟ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ. ಆರ್ಥಿಕ ಅಂಕಿಅಂಶ ಇಲಾಖೆ ಪ್ರಕಾರ, ರಾಜ್ಯದಲ್ಲಿ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. 50 ದಿನಬಳಕೆಯ ವಸ್ತುಗಳ ಪೈಕಿ 39 ರ ಬೆಲೆ ಹೆಚ್ಚಳಗೊಂಡಿದೆ.
ಡಿಸೆಂಬರ್ 16, 2020 ರಂದು ರಾಜ್ಯದಲ್ಲಿ ಸೌತೆಕಾಯಿಯ ಸರಾಸರಿ ಬೆಲೆ 23.07 ರೂ. ಆದರೆ, 2021ರ ಡಿಸೆಂಬರ್‌ನಲ್ಲಿ 59.21 ರೂ. ವರೆಗೆ ಏರಿಕೆಯಾಗಿದೆ. ಅಂದರೆ 156.65 ಶೇಕಡಾ ಹೆಚ್ಚಳವಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಬೀಟ್ರೂಟ್ 80 ಪ್ರತಿಶತ ಹೆಚ್ಚು ದುಬಾರಿಯಾಗಿದೆ. ಬೆಂಡೆಕಾಯಿ ಬೆಲೆ 35.43 ರೂ.ನಿಂದ 79.50 ರೂ.ಗೆ ಏರಿಕೆಯಾಗಿದೆ. ಅಂದರೆ ಶೇ.124.39ರಷ್ಟು ಏರಿಕೆಯಾಗಿದೆ. ಟೊಮೇಟೊ ಬೆಲೆ ಶೇ.124.50ರಷ್ಟು ಹೆಚ್ಚಾಗಿದೆ. ಬಿಳಿಬದನೆಗೆ ಗರಿಷ್ಠ 94.4 ಪ್ರತಿಶತ ಏರಿಕೆಯಾಗಿದೆ.
ಕಳೆದ ಒಂದು ತಿಂಗಳಿನಿಂದ ಎಲೆಕೋಸು ಬೆಲೆ ದುಪ್ಪಟ್ಟಾಗಿದೆ. ಹಸಿಮೆಣಸಿನಕಾಯಿ ಬೆಲೆ ಶೇ.64ರಷ್ಟು ಏರಿಕೆಯಾಗಿದೆ. ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ, ಬ್ರೌನ್ ರೈಸ್ ಶೇಕಡಾ 8.68 ರಷ್ಟು ಮತ್ತು ಆಂಧ್ರಪ್ರದೇಶದ ಬಿಳಿ ಅಕ್ಕಿ ಶೇಕಡಾ 2.48 ರಷ್ಟು ಹೆಚ್ಚಳಗೊಂಡಿದೆ. ಸಕ್ಕರೆ ದರ ಶೇ.4.12ರಷ್ಟು ಮತ್ತು ಹಾಲಿನ ಬೆಲೆ ಶೇ.2.6ರಷ್ಟು ಹೆಚ್ಚಳವಾಗಿದೆ. ಮೊಟ್ಟೆ ಬೆಲೆ ಶೇ.4.24ರಷ್ಟು ಏರಿಕೆಯಾಗಿದೆ.
ಆದರೆ ಈರುಳ್ಳಿ ಬೆಲೆ ಶೇ.7ರಷ್ಟು ಇಳಿಕೆಯಾಗಿದೆ ಎಂದು ಅಂಕಿಅಂಶ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ. ಆಲೂಗಡ್ಡೆ ಬೆಲೆಯೂ ಶೇ.23ರಷ್ಟು ಕುಸಿದಿದೆ. ವರದಿಗಳ ಪ್ರಕಾರ, ಪ್ಯಾಕ್ ಮಾಡದ ತೆಂಗಿನ ಎಣ್ಣೆಯ ಬೆಲೆ ತೀವ್ರವಾಗಿ ಕುಸಿದಿದೆ. ಅಡುಗೆ ಎಣ್ಣೆ ಬೆಲೆ 222.29 ರೂ.ನಿಂದ 194.50 ರೂ.ಗೆ ಇಳಿದಿದೆ. ಅಂದರೆ ಶೇ.12.50ರಷ್ಟು ಇಳಿಕೆಯಾಗಿದೆ. ಕೊಬ್ಬರಿ ಎಣ್ಣೆ ಬೆಲೆ ಗಣನೀಯವಾಗಿ ಕುಸಿದಿಲ್ಲ. ತೆಂಗಿನಕಾಯಿ ಬೆಲೆ ಹತ್ತಕ್ಕೆ 238.18 ಇತ್ತು. ಈಗ 197.55 ರೂ.ಗೆ ಇಳಿದಿದೆ. ಮರಗೆಣಸಿನ ಬೆಲೆಯೂ ಇಳಿಕೆಯಾಗಿದೆ. ಬೆಲೆ ಐದು ಪ್ರತಿಶತ ಕಡಿಮೆಯಾಗಿದೆ.

