ನವದೆಹಲಿ: ಭಾರತದಲ್ಲಿ 62 ಲಕ್ಷಕ್ಕೂ ಹೆಚ್ಚು ಡೋಸ್ ಕೋವಿಡ್ ಲಸಿಕೆ ವ್ಯರ್ಥವಾಗಿದೆ ಎಂದು ವರದಿಯಾಗಿದೆ. ಅದರಲ್ಲಿ ಅರ್ಧದಷ್ಟು ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಪೋಲಾಗಿದೆ.
ಮಧ್ಯ ಪ್ರದೇಶದಲ್ಲಿ ಅತಿ ಹೆಚ್ಚು 16.48 ಲಕ್ಷ, ಉತ್ತರ ಪ್ರದೇಶದಲ್ಲಿ 12.60 ಲಕ್ಷ ಮತ್ತು ರಾಜಸ್ಥಾನದಲ್ಲಿ 6.86 ಲಕ್ಷ ಡೋಸ್ ಕೋವಿಡ್ ಲಸಿಕೆ ಡೋಸ್ ವ್ಯರ್ಥವಾಗಿದೆ. ಈ ಮೂರು ರಾಜ್ಯಗಳಲ್ಲಿ ಒಟ್ಟು 36 ಲಕ್ಷ ಡೋಸ್ ಕೋವಿಡ್ ಲಸಿಕೆ ಪೋಲಾಗಿದ್ದು, ಒಟ್ಟು ವ್ಯರ್ಥವಾಗಿರುವುದರಲ್ಲಿ ಶೇಕಡ 50ಕ್ಕಿಂತಲೂ ಹೆಚ್ಚಾಗಿದೆ.
ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್, ಕಳೆದ 11 ತಿಂಗಳಲ್ಲಿ ಕೋವಿಡ್ ಲಸಿಕೆ ಡೋಸ್ ವ್ಯರ್ಥ ಮಾಡಿರುವ ರಾಜ್ಯಗಳ ಪಟ್ಟಿಯನ್ನು ಪ್ರಕಟಿಸಿದರು. ಒಂದು ಲಕ್ಷಕ್ಕೂ ಹೆಚ್ಚು ಡೋಸ್ ಕೋವಿಡ್ ಲಸಿಕೆ ಪೋಲು ಮಾಡಿರುವ 11 ರಾಜ್ಯಗಳು ಪಟ್ಟಿಯಲ್ಲಿವೆ.
ಸಚಿವರು ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 1.27 ಲಕ್ಷ ಡೋಸ್ ಕೋವಿಡ್ ಲಸಿಕೆ ಪೋಲಾಗಿದೆ.
ರಾಜ್ಯವಾರು ಲಸಿಕೆ ಪೋಲು ವಿವರ (ಲಕ್ಷಗಳಲ್ಲಿ):
ಮಧ್ಯ ಪ್ರದೇಶ: 16.48
ಉತ್ತರ ಪ್ರದೇಶ: 12.60
ರಾಜಸ್ಥಾನ: 6.86
ಅಸ್ಸಾಂ: 4.58
ಜಮ್ಮು ಮತ್ತು ಕಾಶ್ಮೀರ: 4.57
ಆಂಧ್ರ ಪ್ರದೇಶ: 3.80
ಗುಜರಾತ್: 2.28
ತಮಿಳುನಾಡು: 2.38
ತ್ರಿಪುರ: 2.10
ಪಶ್ಚಿಮ ಬಂಗಾಳ: 1.4
ಕರ್ನಾಟಕ: 1.27
ಉಚಿತ ಲಸಿಕೆ ಪೂರೈಕೆಗೆ ₹19,675.48 ಕೋಟಿ ವೆಚ್ಚ...
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆ ಉಚಿತ ಪೂರೈಕೆಗಾಗಿ ಡಿಸೆಂಬರ್ 19ರವರೆಗೆ ₹19,675.48 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಚಿವರು ಲೋಕಸಭೆಗೆ ಮಾಹಿತಿ ನೀಡಿದರು.

