ಮುಳ್ಳೇರಿಯ: ಗ್ರಾಮ ಪಂಚಾಯತಿ ಹಾಗೂ ಪಶು ಆಸ್ಪತ್ರೆ ವತಿಯಿಂದ ಗ್ರಾಹಕರಿಗೆ ವಿತರಿಸಲಾದ ಕೋಳಿಗಳು ಸಾಯುತ್ತಿರುವುದಾಗಿ ವರದಿಯಾಗಿದೆ. ಶಂಕಿತ ಹಕ್ಕಿ ಜ್ವರ ಆಗಿರಬಹುದೆಂಬ ಕಳವಳ ಇದೀಗ ಕೇಳಿಬಂದಿದೆ. ಆದರೆ ಘಟನೆ ನಡೆದರೂ ಅಧಿಕಾರಿಗಳು ಇತ್ತ ತಿರುಗಿ ನೋಡುತ್ತಿಲ್ಲ ಎಂದು ಗ್ರಾಹಕರು ದೂರುತ್ತಾರೆ. ಮುಳಿಯಾರು ಗ್ರಾಮ ಪಂಚಾಯತಿಯ ಬೋವಿಕ್ಕಾನ ಪಶುವೈದ್ಯಕೀಯ ಆಸ್ಪತ್ರೆಯ ಅಧಿಕಾರಿಗಳು ಕಳೆದ ಮಂಗಳವಾರ 2000 ಮೊಟ್ಟೆ ಇಡುವ ಕೋಳಿಗಳನ್ನು ವಿತರಿಸಿದ್ದರು.
ಪಶುವೈದ್ಯರ ಮಾರ್ಗದರ್ಶನದಲ್ಲಿ ತ್ರಿಶೂರ್‍ನ ಫಾರಂನಿಂದ ಕೋಳಿಗಳನ್ನು ತರಲಾಗಿತ್ತು. ಎರಡೇ ದಿನಗಳಲ್ಲಿ ಕೋಳಿಗಳು ಅನಾರೋಗ್ಯಕ್ಕೊಳಗಾಗಿ ಸಾವನ್ನಪ್ಪಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಈ ಬಗ್ಗೆ ಪಶುವೈದ್ಯಕೀಯ ವೈದ್ಯಾಧಿಕಾರಿಗೆ ತಿಳಿಸಲಾಗಿದ್ದು, ಹೂಳಲು ಸೂಚಿಸಲಾಗಿದೆ. ಮಾದರಿಗಳನ್ನು ತೆಗೆದುಕೊಳ್ಳಲು ಅಥವಾ ಬೇರೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಅವರು ಸೂಚಿಸಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಇದೇ ವೇಳೆ ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡಿರುವುದಾಗಿ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ. ಪೆÇಯಿನಾಚಿಯ ಫಾರಂನಿಂದ ಕೋಳಿಗಳನ್ನು ತರುವುದು ಮೂಲ ಯೋಜನೆಯಾಗಿತ್ತು. ಆದರೆ ಪಶುವೈದ್ಯರ ಮಾರ್ಗದರ್ಶನದಲ್ಲಿ ತ್ರಿಶೂರ್‍ನಿಂದ ಕೋಳಿಗಳನ್ನು ತರಲಾಗಿತ್ತು.
ತಲಾ 450 ಜನರಿಗೆ ಐದೈದು ಕೋಳಿಗಳನ್ನು ವಿತರಿಸಲಾಗಿತ್ತು. 300 ರೂಪಾಯಿ ಮುಂಗಡ ಹಣ ನೀಡಿ ಕೋಳಿಗಳನ್ನು ವಿತರಿಸಲಾಯಿತು. ಇದೇ ವೇಳೆ ಕುಟುಂಬಶ್ರೀ ಮೂಲಕ ವಿತರಿಸುವ ಕೋಳಿಗಳಿಗೆ ಆರೋಗ್ಯ ಸಮಸ್ಯೆ ಇಲ್ಲ ಎನ್ನುತ್ತಾರೆ ಗ್ರಾಹಕರು. ಆಲಪ್ಪುಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಕೋಳಿಗಳನ್ನು ವಿತರಿಸಿದ್ದು ಏಕೆ ಎಂದು ಸ್ಥಳೀಯರು ಕೇಳುತ್ತಿದ್ದಾರೆ.

