ಬೆಂಗಳೂರು: ಕನ್ನಡಕ್ಕೊಂದು ಹೊಸ ಫಾಂಟ್ ಅನ್ನು ಕನ್ನಡಿಗ ಟೈಪ್ ಡಿಸೈನರ್ ಒಬ್ಬರು ಪ್ರಸ್ತುತಪಡಿಸಿದ್ದಾರೆ. ಬಂಡೀಪುರ ಎನ್ನುವ ಹೆಸರಿನ ಈ ಹೊಸ ಫಾಂಟ್ ಆನೆಯನ್ನು ಹೋಲುತ್ತದೆ ಎನ್ನುವುದು ವಿಶೇಷ.
ಟಿ ನರಸೀಪುರದ ಮಂಜುನಾಥ ಎಂಬುವವರೇ ಈ ಹೊಸ ಫಾಂಟ್ ನ ಸೃಷ್ಟಿಕರ್ತರು. ಸ್ವತಂತ್ರ ಟೈಪ್ ಡಿಸೈನರ್ ಆಗಿರುವ ಮಂಜುನಾಥ ಅವರು ವೃತ್ತಿಯಲ್ಲಿ ಗ್ರಾಫಿಕ್ ಡಿಸೈನರ್ ಮತ್ತು ಕಾನ್ಸೆಪ್ಚುವಲ್ ಫೊಟೊಗ್ರಾಫರ್ ಆಗಿದ್ದಾರೆ.
ಬಂಡೀಪುರ ಫಾಂಟ್ ದೊಡ್ಡ ಗಾತ್ರದ ಹೆಡ್ ಲೈನ್, ಶೀರ್ಷಿಕೆ, ಬ್ಯಾನರ್ ಗಳಿಗೆ ಹೇಳಿಮಾಡಿಸಿದ್ದು ಎನ್ನುವುದು ಅವರ ಅಭಿಪ್ರಾಯ. ೩೪ ವರ್ಷದ ಮಂಜುನಾಥ ಅವರು ೧೦ನೇ ವಯಸ್ಸಿನಿಂದಲೇ ಕನ್ನಡ ಅಕ್ಷರಗಳತ್ತ ಆಕರ್ಷಿತರಾಗಿದ್ದರು. ಆಗಿನಿಂದಲೇ ಅಕ್ಷರಗಳ ಡಿಸೈನ್ ನಲ್ಲಿ ಅವರು ಆಸಕ್ತಿ ಹೊಂದಿದ್ದರು.
ಬಂಡೀಪುರ ಫಾಂಟ್ ಸೃಷ್ಟಿಗೆ ಒಂದೂವರೆ ವರ್ಷ ತಗುಲಿದೆ. ಬಂಡೀಪುರ ಫಾಂಟ್ ಯೂನಿಕೋಡ್ ಫಾಂಟ್ ಆಗಿದೆ. ಎಲ್ಲಕ್ಕಿಂತ ಸಿಹಿ ಸುದ್ದಿ ಎಂದರೆ ಈ ಫಾಂಟ್ ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಿ ಯಾರು ಬೇಕಾದರೂ ಬಳಸಬಹುದು.

